»   » ನಿಲುವು, ಪ್ರತಿಭೆಗಳ ತೂಕವೇನೇ ಇರಲಿ, ನಾಯಕಿಯರ ಮಟ್ಟಿಗಂತೂ ಅವರು ಬಹಳ ಚೂಸಿ

ನಿಲುವು, ಪ್ರತಿಭೆಗಳ ತೂಕವೇನೇ ಇರಲಿ, ನಾಯಕಿಯರ ಮಟ್ಟಿಗಂತೂ ಅವರು ಬಹಳ ಚೂಸಿ

Subscribe to Filmibeat Kannada

ಜಿಲ್ಲಾಧಿಕಾರಿಯಾಗಿ ಪದೇ ಪದೇ ವರ್ಗವಾಗುತ್ತಾ ಕರ್ನಾಟಕ ದರ್ಶನ ಮಾಡುತ್ತಿರುವ ಐಎಎಸ್‌ ಶಿವರಾಮ್‌ ಎಲ್ಲಿದ್ದರೂ ಚಿತ್ರರಂಗದತ್ತ ಹೊರಳಿ ನೋಡುವ ಹವ್ಯಾಸ ಬಿಟ್ಟಿಲ್ಲ. ನಟನೆಯ ಹುಚ್ಚು ಬಿಟ್ಟರೆ ಇನ್ನಾವ ಹುಚ್ಚನ್ನು ಅವರು ತಗುಲಿಸಿಕೊಂಡಿಲ್ಲ. ವೃತ್ತಿಯಲ್ಲಿದ್ದಾಗಲೂ ಆಗಾಗ ಸಿನಿಮಾ ನೆನಪಾಗಿ ರೇಷನ್‌ ಡಿಪೋಗಳ ಮೇಲೆ ಪಕ್ಕಾ ಹೀರೋ ಥರ ದಾಳಿ ನಡೆಸುವುದೂ ಉಂಟು. ಅವೆಲ್ಲವೂ ದಾವಣಗೆರೆಯಲ್ಲಿ ಫಲ ಕೊಟ್ಟಿವೆಯಂತೆ. ಜೊತೆಗೆ ಇನ್ನೊಂದು ಜಿಲ್ಲೆಗೆ ಅವರ ವರ್ಗಾವಣೆ ಆರ್ಡರ್‌ ಕೂಡ ರೆಡಿಯಾಗಿದೆ ಎಂದು ಅವರೇ ಸ್ವತಃ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎಲ್ಲೇ ಹೋಗಲಿ, ಬಡವರ ಸೇವೆಯೇ ನನ್ನ ಗುರಿ ಎನ್ನುವ ಹೊತ್ತಿಗೂ ಅವರ ಹೀರೋಯಿಸಂ ಎದ್ದು ಕಾಣುತ್ತದೆ.

ಪ್ರೇಕ್ಷಕರ ಅದೃಷ್ಟವೋ ಅಥವಾ ದುರಾದೃಷ್ಟವೋ ಕಳೆದ ಎರಡು ವರ್ಷ ಶಿವರಾಂ ಚಿತ್ರಗಳ್ಯಾವುವು ತೆರೆಗಪ್ಪಳಿಸಿರಲಿಲ್ಲ . ಅದಕ್ಕೂ ಮುಂಚೆ ಬಂದ ಪ್ರತಿಭಟನೆ ಬಂಡಾಯ ಚಿತ್ರ, ಖಳನಾಯಕ ಎನ್ನುವ ಕಮರ್ಷಿಯಲ್‌ ಚಿತ್ರಗಳೆರಡೂ ಬಿದ್ದು ಹೋದವು. ನಂತರದ ವಸಂತ ಕಾವ್ಯ ಕೂಡ ಫ್ಲಾಪ್‌ ಚಿತ್ರವೇ.

ಖಳನಾಯಕದ ನಂತರ ಶಿವರಾಂ ನಟನೆಗೆ ಅಲ್ಪ ವಿರಾಮ ನೀಡಿದ್ದಕ್ಕೆ ಅವರು ದೂರದ ಬಿಜಾಪುರದಲ್ಲಿದ್ದದ್ದೂ ಕಾರಣವಾಗಿದ್ದಿರಬಹುದು. ದಾವಣಗೆರೆಗೆ ಬಂದಾಕ್ಷಣ ಶಿವರಾಂ ಚುರುಕಾದರು. ಕಳೆದ ವಾರವಷ್ಟೆ ಅವರ ಯಾರಿಗೆ ಬೇಡ ದುಡ್ಡು ಚಿತ್ರ ಸೆಟ್ಟೇರಿದ್ದರೆ, ಅದಾಗಿ ಒಂದೇ ವಾರದಲ್ಲಿ ಸುಭಾಷ್‌ ಎಂಬ ಮತ್ತೊಂದು ಚಿತ್ರ ಸೆಟ್ಟೇರಿದೆ.

ಎರಡೂ ಚಿತ್ರಗಳ ನಿರ್ಮಾಪಕರು ಮತ್ತು ನಿರ್ದೇಶಕರು ಹೊಸಬರು. ಹಾಗಾಗಿ ಈ ಚಿತ್ರಗಳ ನಿರ್ಮಾಣದಲ್ಲಿ ಶಿವರಾಂ ಕೈವಾಡವಿದೆ ಅನ್ನುವ ಗುಮಾನಿ ಬರೋದು ಸಹಜ. ಅಂಥಾ ಪ್ರಶ್ನೆ ಬರುವುದಕ್ಕೆ ಮೊದಲೇ ಶಿವರಾಂ ಹೇಳುತ್ತಾರೆ ದುಡ್ಡು ಕೊಟ್ಟು ನಟಿಸುವ ದರ್ದ್‌ ನನಗಿಲ್ಲ. ಹಾಗಾದರೆ ಫ್ಲಾಪ್‌ ನಾಯಕರನ್ನು ಹಾಕಿಕೊಂಡು ಚಿತ್ರ ನಿರ್ಮಿಸುವ ದರ್ದ್‌ ನಿರ್ಮಾಪಕರಿಗೇಕೆ ? ಈ ಪ್ರಶ್ನೆಗೆ ಯಾವ ನಿರ್ಮಾಪಕರು ಉತ್ತರಿಸುವುದಿಲ್ಲ.

ಶಿವರಾಂ ತುಂಬಾ ಚೂಸಿ : ಶಿವರಾಂ ಅವರ . ವಸಂತ ಕಾವ್ಯಕ್ಕೆ ಸುಧಾರಾಣಿಯೇ ಬೇಕೆಂದು ಪಟ್ಟು ಹಿಡಿದದ್ದು ಇತಿಹಾಸ, ಅನಂತರ ಪ್ರತಿಭಟನೆಗೆ ವಿಜಯಲಕ್ಷ್ಮಿ . ಈಗ ಯಾರಿಗೆ ಬೇಡ ದುಡ್ಡು ಚಿತ್ರಕ್ಕೆ ಅರ್ಚನಾ ಮತ್ತು ಸುಭಾಷ್‌ ಚಿತ್ರಕ್ಕೆ ಶಿಲ್ಪಾ ನಾಯಕಿಯರು. ಸುಭಾಷ್‌ ಚಿತ್ರಕ್ಕೆ ಹಿಂದಿಯ ಶೂಲ್‌ ಸ್ಫೂರ್ತಿ. ಅಲ್ಲಿ ಮನೋಜ್‌ ವಾಜಪೇಯಿ ಮಾಡಿದ ಪಾತ್ರವನ್ನು ಇಲ್ಲಿ ಶಿವರಾಂ ಮಾಡುತ್ತಿದ್ದಾರೆ ! ಐಎಎಸ್‌ ಅಧಿಕಾರಿಗೆ ತೆರೆಯ ಮೇಲೆ ಐಪಿಎಸ್‌ ಆಗುವ ಅವಕಾಶ.

ಶಿಲ್ಪಾ ಮಟ್ಟಿಗೆ ಈ ಚಿತ್ರ ಅನಿವಾರ್ಯ. ಪ್ರೇಮಾಚಾರಿ, ಇದು ಎಂಥಾ ಪ್ರೇಮವಯ್ಯಾ ಹಾಗೂ ನಾನೇನೂ ಮಾಡ್ಲಿಲ್ಲ ಚಿತ್ರಗಳ ನಂತರ ಆಕೆ ಕನ್ನಡದಿಂದ ಮಾಯವಾಗಿಬಿಟ್ಟಿದ್ದರು. ತವರೂರು ಕೇರಳದಲ್ಲಿ ಅಂತಹ ಮಾರುಕಟ್ಟೆ ಇಲ್ಲ.

ದೀಪಾವಳಿ ಹಬ್ಬದ ದಿನದಂದು ಸೆಟ್ಟೇರಿದ ಸುಭಾಷ್‌ ಚಿತ್ರದ ನಿರ್ದೇಶಕರು ದಾಸ್‌, ನಿರ್ಮಾಪಕರು ದೇವದಾಸ್‌, ಸಂಗೀತ ನಿರ್ದೇಶಕರು ಲಯನ್‌ದೇವ್‌ ಚಿತ್ರದ ಮುಹೂರ್ತ ದೃಶ್ಯಕ್ಕೆ ಕ್ಲಾಪ್‌ ಮಾಡಿದವರು ಅಂಬರೀಶ್‌. ಜಯಂತಿ ಹಾಗೂ ಎಂಪಿ ಶಂಕರ್‌ ಅವರಿಗೆ ಈ ಚಿತ್ರದಲ್ಲಿ ಮಹತ್ವದ ಪಾತ್ರಗಳಿವೆಯಂತೆ. ಆ ಕಾರಣಕ್ಕಾದರೂ ಈ ಚಿತ್ರ ಕುತೂಹಲ ಕೆರಳಿಸಬಹುದು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada