»   » ಶಿವನಾಗಲು ಒಲ್ಲೆ ಎಂದ ವಿಷ್ಣು ; ಶ್ರೀಧರ್‌ಗೆ ಹರಯೋಗ

ಶಿವನಾಗಲು ಒಲ್ಲೆ ಎಂದ ವಿಷ್ಣು ; ಶ್ರೀಧರ್‌ಗೆ ಹರಯೋಗ

Posted By: Super
Subscribe to Filmibeat Kannada

ಸಾಯಿಪ್ರಕಾಶ್‌ ನಿರ್ದೇಶಿಸುತ್ತಿರುವ ಗ್ರಾಮದೇವತೆ ಚಿತ್ರದಲ್ಲಿ ಕೈಲಾಸಪತಿಯಾದ ಶಿವನ ಪಾತ್ರವನ್ನು ವಿಷ್ಣುವರ್ಧನ್‌ ಅಭಿನಯಿಸುತ್ತಾರೆ ಎಂಬ ಬಹುದೊಡ್ಡ ನಿರೀಕ್ಷೆ ಹುಸಿಯಾಗಿದೆ. ಹೇಗೂ ನಾಗಮಣಿ ಚಿತ್ರದಲ್ಲಿ ಪ್ರೇಮಾ ಅವರೆದುರು ನಾಯಕನಾಗಿ ಅಭಿನಯಿಸುತ್ತಿರುವೆನಲ್ಲ ಈ ಬಾರಿ ಮಾತ್ರ ನನ್ನನ್ನು ಬಿಟ್ಟುಬಿಡಿ ಎಂದು ಶಿವನಾಗಲು - ವಿಷ್ಣು ನಯವಾಗಿ ಒಲ್ಲೆ ಎಂದಿದ್ದಾರೆ.

ವಿಷ್ಣುವರ್ಧನ್‌ ಶಿವನಾಗಲು ಒಲ್ಲೆ ಎಂದ ಮೇಲೆ, ಹರಯೋಗ ಶ್ರೀಧರ್‌ ಪಾಲಿಗೆ ದೊರೆತಿದೆ. ನೃತ್ಯಪಟುವಾದ ಶ್ರೀಧರ್‌ಗೆ ಶಿವನಪಾತ್ರ ಸೊಗಸಾಗಿ ಒಪ್ಪುತ್ತದೆ. ಶಿವತಾಂಡವ ನೃತ್ಯದಲ್ಲಿ ಶ್ರೀಧರ್‌ ಸೊಗಸಾಗಿಯೇ ಮಿಂಚುತ್ತಾರೆ. ಸೃಷ್ಟಿ ಧಾರಾವಾಹಿಯಲ್ಲಿ ಮನೋಜ್ಞ ಅಭಿನಯದಿಂದ ಜನಮನ್ನಣೆ ಪಡೆದಿರುವ ಶ್ರೀಧರ್‌ ತೆಲುಗಿನ ಧಾರಾವಾಹಿಯಾಂದರಲ್ಲಿ ಶಿವನ ಪಾತ್ರ ನಿರ್ವಹಿಸುತ್ತಿದ್ದಾರೆ.

ಹಿಂದೆ ರಾಮಾಯಣ ಧಾರಾವಾಹಿ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದಾಗ, ಅರುಣ್‌ ಗೋವಿಲ್‌ರನ್ನೇ ಸಾಕ್ಷಾತ್‌ ಶ್ರೀರಾಮಚಂದ್ರನೆಂದು ಜನ ಪೂಜಿಸಿದ್ದು, ಈಗಲೂ ಪುನರಾವರ್ತನೆಯಾಗಿದೆ. ಮೊನ್ನೆ ಮೊನ್ನೆ ಮದುವೆಯ ಮನೆಯಾಂದರಲ್ಲಿ ಶ್ರೀಧರ್‌ರನ್ನು ಕಂಡ ಅಭಿಮಾನಿಗಳು, ಕೈಲಾಸದಿಂದ ಶಿವನೇ ಇಳಿದು ತಮ್ಮೆದುರು ಬಂದಿರುವನೆಂದೇ ಭಾವಿಸಿ ಭಕ್ತಿ ಭಾವದಿಂದ ಆದರಿಸಿ, ಗೌರವಿಸಿ ಪೂಜಿಸಿದ್ದಾರೆ.

ಈಗ ಗ್ರಾಮದೇವತೆಯಲ್ಲೂ ಕಾಕತಾಳೀಯ ಎನ್ನುವಂತೆ ಅನಿರೀಕ್ಷಿತವಾಗಿ ಶ್ರೀಧರ್‌ಗೆ ಶಿವನಪಾತ್ರವೇ ದೊರಕಿದೆ. ಇದು ಬಯಸದೇ ಬಂದ ಭಾಗ್ಯ. ವಿಷ್ಣುವೆಂದರೂ ಶ್ರೀಮನ್ನಾರಾಯಣನೇ, ಶ್ರೀಧರ ಎಂದರೂ ನಾರಾಯಣನೇ. ಒಟ್ಟಿನಲ್ಲಿ ವಿಷ್ಣು ಕೈಬಿಟ್ಟ ಶಿವನನ್ನು ಶ್ರೀಧರ ಕೈಹಿಡಿದಿದ್ದಾರೆ. ಎಲ್ಲ ಗ್ರಾಮದೇವತೆಯ ಮಹಿಮೆ!

ಅಂದಹಾಗೆ ಅಬ್ಬಾಯಿನಾಯ್ಡು ಸ್ಟುಡಿಯೋದ ಕೈಲಾಸದ ಸೆಟ್‌ನಲ್ಲಿ ಏಪ್ರಿಲ್‌ 20ರಿಂದ 27ರವರೆಗೆ ಶಿವತಾಂಡವ ನೃತ್ಯದ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ಶ್ರೀಧರ್‌ ಜತೆ ಪಾರ್ವತಿಯಾಗಿ ರೋಜಾ ಅಭಿನಯಿಸಿದ್ದಾರೆ. ಶ್ರೀಲಕ್ಷ್ಮೀ ಮೂಕಾಂಬಿಕಾ ಫಿಲಂಸ್‌ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಸಾಯಿಕುಮಾರ್‌, ಪ್ರೇಮಾ, ರಮ್ಯಕೃಷ್ಣ, ಗಜರ್‌ ಖಾನ್‌, ಅನೂಷಾ, ಸತ್ಯಜಿತ್‌, ಚಿತ್ರಾಶೆಣೈ, ಜಯಂತಿ, ಬ್ರಹ್ಮಾವರ್‌, ಮಹಾಲಕ್ಷ್ಮೀ, ಪ್ರಮೋದ್‌ ಚಕ್ರವರ್ತಿ, ಅಂಜನಾ ಮುಂತಾದವರು ಇದ್ದಾರೆ. ರಮೇಶ್‌ ಬಾಬು ಛಾಯಾಗ್ರಹಣ, ದಿನ ಅವರ ಸಂಗೀತ, ಆರ್‌.ಎನ್‌. ಜಯಗೋಪಾಲ್‌, ಕೆ. ಕಲ್ಯಾಣ್‌, ಶ್ರೀರಂಗ ಅವರ ಗೀತೆ, ಕೆ.ಡಿ. ವೆಂಕಟೇಶ್‌ ಸಾಹಸ ಚಿತ್ರಕ್ಕಿದೆ.

English summary
Vishnu says no to shiva, sridhar became shiva in gramadevate

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada