ಕೋರ್ಟ್‌ನಲ್ಲಿ ಹೈಡ್ರಾಮಾ ; ರೇಣುಕಾಸ್ವಾಮಿ ಪ್ರಕರಣದ ಎ10 ಆರೋಪಿ ವಿನಯ್‌ಗೆ ವಕೀಲರಿಂದ ಕಪಾಳಮೋಕ್ಷ
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ಕರ್ಮದ ಫಲವನ್ನು ಇದೇ ಜನ್ಮದಲ್ಲೇ ಅನುಭವಿಸಬೇಕು. ಈ ಮಾತುಗಳಿಗೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಪಾಲಾದ ದರ್ಶನ್ ಮತ್ತು ಹುಡುಗರು.
ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ 207 ದಿನಗಳಿಂದ ದರ್ಶನ್ ಮತ್ತು ಸಹಚರರು ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ದಣಿದಿದ್ಧಾರೆ. ಹೈರಾಣಾಗಿದ್ದಾರೆ. ಹೊರ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಕಾಲ ಕೂಡಿ ಬರುತ್ತಿಲ್ಲ. ಆ ಕಾಲ ಯಾವತ್ತು ಬರುತ್ತೆ ಎನ್ನುವುದು ಕೂಡ ಗೊತ್ತಿಲ್ಲ. ಆದರೆ.. ಜೈಲಿನಲ್ಲಿ ನರಳುತ್ತಿರುವ ಇವರ ಸಹನೆಯ ಕಟ್ಟೆಯಂತೂ ಒಡೆಯುತ್ತಿದೆ. ಇದಕ್ಕೆ ಇಂದು (ಮಾರ್ಚ್ 9) ನ್ಯಾಯಾಲಯದ ಆವರಣದಲ್ಲಿ ನಡೆದಿದೆ ಎನ್ನಲಾದ ಕಪಾಳಮೋಕ್ಷವೇ ಸದ್ಯದ ಕೈಗನ್ನಡಿ.

ಹೌದು, ಇಂದು (ಮಾರ್ಚ್ 9) ಪ್ರಕರಣದ ವಿಚಾರಣೆಯ ಹಿನ್ನೆಲೆ ಹತ್ತನೇ ಆರೋಪಿ ವಿನಯ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ವಿನಯ್ ಬೇರೆ ಯಾರು ಅಲ್ಲ ಬದಲಿಗೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಮಾಲೀಕ. ಜೂನ್ 8, 2024 ರಂದು ರೇಣುಕಾ ಸ್ವಾಮಿ ಕೊ*ಲೆ ನಡೆಯುವ ಮುನ್ನ ಮತ್ತು ನಂತರ ಈ ಪಾರ್ಟಿ ನಡೆದಿದ್ದು ಇಲ್ಲಿಯೇ.
ಇನ್ನು ದರ್ಶನ್ಗೆ ಪಟ್ಟಣಗೆರೆ ಶೆಡ್ ಪರಿಚಯಿಸಿದ್ದೇ ವಿನಯ್ ಎನ್ನುವ ಮಾತು ಇದೆ. ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದು ಕೂಡ ವಿನಯ್ ಎಂದು ಈ ಹಿಂದೆ ಮಾಧ್ಯಮಗಳಲ್ಲಿ ವರದಿ ಕೂಡ ಆಗಿದೆ.
ಇಂಥಾ ವಿನಯ್ ಅವರಿಗೆ ತಮ್ಮದೇ ವಕೀಲರ ವಾದದ ಮೇಲೆ ಅಸಮಾಧಾನ ಇತ್ತು. ಈ ಹಿನ್ನೆಲೆ ತಮ್ಮ ವಕೀಲ ನಟರಾಜ್‌ನನ್ನು ಬದಲಿಸಲು ಮುಂದಾಗಿದ್ದರು ವಿನಯ್. ಬದಲಿಸಿದ್ದರು ಕೂಡ. ಇಂದು ( ಮಾರ್ಚ್ 9) ವಿನಯ್ ಪರ ವಕಾಲತ್ತು ಸಲ್ಲಿಸಲು ಹೊಸ ವಕೀಲರು ಬಂದಿದ್ದರು.
ಇದರಿಂದ ಕೆರಳಿದ ವಿನಯ್ ಅವರ ಹಿಂದಿನ ವಕೀಲ ನಟರಾಜ್ ಇದೇ ಸಮಯದಲ್ಲಿ ವಿನಯ್ ಜೊತೆ ಮಾತನಾಡಲು ಮುಂದಾಗಿದ್ದಾರೆ. ಆ ನಂತರ ಮಾತಿಗೆ ಮಾತು ಮಾತು ಬೆಳೆದು ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಈ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡ ವಕೀಲ ನಟರಾಜ್ ಕೋರ್ಟ್ ಕಾರಿಡಾರ್ ನಲ್ಲಿಯೇ ಪ್ರಕರಣದ ಎ10 ಆರೋಪಿಯಾದ ವಿನಯ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ''ನ್ಯೂಸ್ 18 ಕನ್ನಡ'' ವರದಿ ಮಾಡಿದೆ.
ಪೊಲೀಸರು ಮತ್ತು ಇತರೆ ವಕೀಲರ ಸಮ್ಮುಖದಲ್ಲಿಯೇ ಈ ಕಪಾಳಮೋಕ್ಷದ ಘಟನೆ ನಡೆದಿದ್ದು, ಇದರಿಂದ ಕೆಲ ಕಾಲದ ಕೋರ್ಟ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎಂದು ಕೂಡ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದೆ.

ಕಾನೂನು ವಲಯದಲ್ಲಿ ಕೂಡ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ವಿಷಯ ಏನೇ ಇರಲಿ, ಆದರೆ ದೈಹಿಕವಾಗಿ ತಮ್ಮದೇ ಕಕ್ಷಿದಾರನ ಮೇಲೆ ನಟರಾಜ್ ಕೈ ಮಾಡಬಾರದಿತ್ತು ಎನ್ನುವ ವಾದವನ್ನು ಕೂಡ ಸದ್ಯ ಹಲವರು ಮಾಡುತ್ತಿದ್ಧಾರೆ. ವಕೀಲರು ಆರೋಪಿಯ ಮೇಲೆ ಕೈ ಮಾಡುವುದು ನ್ಯಾಯಾಂಗ ನಿಂದನೆ ಅಥವಾ ವೃತ್ತಿಪರ ನಡವಳಿಕೆಯ ಉಲ್ಲಂಘನೆ ಎಂದು ಪರಿಗಣಿಸಲ್ಪಡಬಹುದು. ಈ ಕಾರಣಕ್ಕಾಗಿ ನಟರಾಜ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಕೂಡ ಕೇಳಿಬರುತ್ತಿದೆ.
ಇನ್ನುಳಿದಂತೆ ದರ್ಶನ್ ಪರ ವಕೀಲರು ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಕೂಡ ನ್ಯಾಯಾಲಯ ವಿಚಾರಣೆಗೆ ಎತ್ತಿಕೊಳ್ಳಲಿದೆ. ಸದ್ಯ ಟ್ರಯಲ್ ನಡೆಯುತ್ತಿದ್ದು ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











