ನಮ್ಮ ಚಿತ್ರಕ್ಕೆ ನೀವೇ ನಾಯಕಿ ಅಂತಾರೆ, ಪ್ರಚಾರ ಮಾಡಿ ಆಮೇಲೆ ಬನ್ನಿ ಮಲಗೋಣ ಅಂತಾರೆ-ಸಂಯುಕ್ತಾ ಹೆಗ್ಡೆ
ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ.
ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಈ ಮೂಲಕ ಪ್ರೇಕ್ಷಕರಿಗೂ ಪ್ರತಿಷ್ಠಿತರ ಅಸಲಿಯತ್ತನ್ನು ಪರಿಚಯ ಮಾಡಿಸಿದ್ದಾರೆ.

ಆದರೂ ಕೂಡ ತಮ್ಮ ಕಾಮತೃಷೆಗೆ ನಾಯಕಿಯರ ಹಿಂದೆ ಬೀಳುವ ಕಾಮಾಂಧರ ಸಂತತಿ ಕಡಿಮೆಯಾಗುತ್ತಿಲ್ಲ. ಇಷ್ಟೆಲ್ಲಾ ಆದರೂ ಕೂಡ ಯಾರಲ್ಲಿಯೂ ಭಯ ಎನ್ನುವುದು ಇಲ್ಲ. ತನ್ನ ಹೆಸರು ಹೊರ ಬಂದರೆ ಕಥೆಯೇನು ಎನ್ನುವ ಚಿಂತೆ ಕೂಡ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಈಗೀಗ ಹಲವರು ತಮ್ಮ ಕಹಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ''ಸಂಯಕ್ತಾ ಹೆಗಡೆ''.
ಹೌದು, ಸಂಯುಕ್ತಾ ಹೆಗಡೆ.. ''ಕಿರಿಕ್ ಪಾರ್ಟಿ'' ಚಿತ್ರದ ಮೂಲಕ ಚಂದನವನಕ್ಕೆ ಬಂದ ಚೆಂದುಳ್ಳಿ ಚೆಲುವೆ. ಮೊದಲ ಚಿತ್ರದಲ್ಲಿಯೇ ಇವರಿಗೆ ಬೇಕಿದ್ದ ಗೆಲುವು ಮತ್ತು ಕೀರ್ತಿ ಎರಡು ಸಿಕ್ಕಿತ್ತು. ಸಂಯುಕ್ತಾ ಹೆಗಡೆ ಕನ್ನಡದ ಭರವಸೆಯ ನಾಯಕಿ ಎಂದು ಕೂಡ ಒಂದು ವರ್ಗ ಮಾತನಾಡಿಕೊಂಡಿತ್ತು.
ಆದರೆ.. ಆ ನಂತರ ಇವರು ಸದ್ದು ಮಾಡಿದ್ದು ಸುದ್ದಿಯಾಗಿದ್ದು ಥರ ಥರದ ಕಿರಿಕ್ಕುಗಳಿಂದಲೇ. ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮೀರ್ ಆಚಾರ್ಯ ಕಪಾಳಕ್ಕೆ ಬಾರಿಸಿದ ಸಂಯುಕ್ತಾ ಕೆಲ ಕಾಲದವರೆಗೆ ಟ್ರೋಲ್ ಪೇಜ್‌ಗಳಿಗೆ ತಾಂಬೂಲವೂ ಆಗಿದ್ದರು. ಉಡುಗೆ ತೊಡುಗೆಯ ವಿಚಾರಕ್ಕೆ ಕೆಲವರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು.
ಇನ್ನು, ಮುಂದಿನ ವರ್ಷ ಬಂದರೆ ಚಿತ್ರರಂಗಕ್ಕೆ ಸಂಯಕ್ತಾ ಹೆಗ್ಡೆ ಬಂದು ಒಂದು ದಶಕ ಪೂರ್ಣವಾಗಲಿದೆ. ಈ 09 ವರ್ಷದಲ್ಲಿ ಕನ್ನಡದ ಆರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸಂಯುಕ್ತಾ ಇದರ ನಡುವೆ ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಕೂಡ ಒಂದು ಸುತ್ತು ಸುತ್ತಿಕೊಂಡು ಬಂದಿದ್ದಾರೆ.

ಆದರೆ, ''ಕಿರಿಕ್ ಪಾರ್ಟಿ''ಯಲ್ಲಿ ಇವರಿಗೆ ಸಿಕ್ಕ ಹೆಸರು ಬೇರೆ ಯಾವ ಚಿತ್ರದಲ್ಲಿ ಕೂಡ ಸಿಗಲಿಲ್ಲ. ಇಂಥಾ ಸಂಯುಕ್ತಾ ಹೆಗ್ಡೆ ಸದ್ಯ ಮತ್ತೊಮ್ಮೆ ತಮ್ಮ ಬದುಕಿನ ಪ್ರಮುಖವಾದ ಪುಟಗಳನ್ನು ರ್ಯಾಪಿಡ್ ರಶ್ಮಿ ಅವರ ಎದುರು ಕುಳಿತು ತಿರುವಿ ಹಾಕಿದ್ದಾರೆ. ಚಿತ್ರರಂಗದಲ್ಲಿನ ತಮ್ಮ ಇಲ್ಲಿಯವರೆಗಿನ ಪ್ರಯಾಣ, ತಮ್ಮ ಪ್ರೇರಣೆ, ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡಿದ ಅನುಭವ, ತಮಿಳು ಚಿತ್ರರಂಗದಲ್ಲಿನ ತಮ್ಮ ಅನುಭವ, ಹೀಗೆ ಹಲವಾರು ವಿಚಾರಗಳ ಕುರಿತು ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಚಿತ್ರರಂಗದಲ್ಲಿ ಕಾಮುಕರು ಹೇಗೆ ತುಂಬಿ ತುಳುಕುತ್ತಿದ್ದಾರೆ, ಹೇಗೆಲ್ಲಾ ಕಾಡುತ್ತಾರೆ ಎನ್ನುವುದನ್ನು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸಂಯುಕ್ತಾ ಹೆಗಡೆ ತಾವು ಕಂಡಂತೆ ಚಿತ್ರರಂಗದಲ್ಲಿ ಹೇಗೆ ಪಾತ್ರಕ್ಕಾಗಿ ಪಲ್ಲಂಗ ಹತ್ತಲು ಹೇಳುತ್ತಾರೆ ಎಂದು ಹೇಳಿದ್ದಾರೆ. ಉದಾಹರಣೆಗೆ ಒಂದು ಚಿತ್ರಕ್ಕೆ ಒಬ್ಬಳು ನಾಯಕಿ ಆಯ್ಕೆಯಾಗಿದ್ದಾಳೆ ಎಂದು ಅಂದುಕೊಳ್ಳಿ, ಇನ್ನೇನು ಕೆಲ ದಿನಗಳಲ್ಲಿ ಆ ಚಿತ್ರದ ಚಿತ್ರೀಕರಣ ಶುರುವಾಗಬೇಕಿರುತ್ತೆ. ನೀವೇ ನಾಯಕಿ ಎಂದು ಘೋಷಣೆಯನ್ನು ಕೂಡ ಮಾಡಿರಲಾಗಿರುತ್ತೆ.
ಇಷ್ಟೇ ಅಲ್ಲ ಟಿವಿ ಮತ್ತು ಪೇಪರ್‌ಗಳಲ್ಲಿ ನಿಮ್ಮ ಹೆಸರು ಬಂದಿರುತ್ತೆ. ನೀವು ಕೂಡ ಖುಷಿಯಲ್ಲಿ ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿರುತ್ತೀರಾ, ನಿಮ್ಮ ಮನೆಯವರು ಊರ್ ತುಂಬಾ ಈ ಸುದ್ದಿಯನ್ನು ಡಂಗುರ ಹೊಡೆದುಕೊಂಡು ಬಂದಿರುತ್ತಾರೆ ಎಂದು ಹೇಳಿರುವ ಸಂಯುಕ್ತಾ ಹೆಗಡೆ ಈ ಸಮಯದಲ್ಲಿ ನಿಜವಾದ ಅಗ್ನಿ ಪರೀಕ್ಷೆ ಶುರುವಾಗುತ್ತೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ಎಲ್ಲೆಡೆ ನೀವೇ ನಾಯಕಿ ಎಂಬ ಸುದ್ದಿಯನ್ನು ಹಬ್ಬಿಸುವ ಮೂಲಕ ಸಂಭ್ರಮದ ಅಲೆಯಲ್ಲಿ ತೇಲುವಂತೆ ಮಾಡುವ ಕೆಲವರು ಆ ನಂತರ ಋಣ ಸಂದಾಯ ಮಾಡುವಂತೆ ಕೇಳುತ್ತಾರೆ ಎಂದು ಹೇಳಿರುವ ಸಂಯುಕ್ತಾ ಈ ಸಂದಿಗ್ದ ಪರಿಸ್ಥಿತಿಯಿಂದಾಗಿ ಕೆಲವರು ಹಾಸಿಗೆ ಹಂಚಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅವರ ಷರತ್ತುಗಳಿಗೆ ಒಪ್ಪದಿದ್ದಾಗ ನಾಯಕಿಯ ಮೇಲೆ ಗೂಬೆ ಕೂರಿಸುತ್ತಾರೆ. ತುಂಬಾ ಗಾಂಚಾಲಿ.. ಧಿಮಾಕು.. ಎಂದೆಲ್ಲ ಅಪಪ್ರಚಾರ ಮಾಡುತ್ತಾರೆ. ಆ ನಂತರ ತಮ್ಮ ಚಿತ್ರದಿಂದ ಹೊರ ಹಾಕಿ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಮೊದಲಾದರೆ ರಾಜಿ.. ಕಾಂಪ್ರಮೈಸ್.. ಎಂಬ ಶಬ್ದಗಳನ್ನಾದರೂ ಪ್ರಯೋಗ ಮಾಡುತ್ತಿದ್ದರು ಆದರೆ ಈಗ ಮಾನ ಮರ್ಯಾದೆ ನಾಚಿಕೆ ಎನ್ನುವುದೇ ಇಲ್ಲ ಎಂದು ಹೇಳಿರುವ ಸಂಯುಕ್ತಾ ಹೆಗಡೆ ನೇರವಾಗಿಯೇ ಈಗ ಬನ್ನಿ ನಮ್ಮ ಜೊತೆ ಮಲಗಿ ಎಂದು ಕೇಳುತ್ತಾರೆ. ಚಿತ್ರದ ಚಿತ್ರೀಕರಣ ಇರಲಿ.. ಇಲ್ಲದಿರಲಿ.. ನಮ್ಮ ಜೊತೆ ನೀವು ಸಮಯ ಕಳೆಯಬೇಕು ಎಂದು ಹೇಳುತ್ತಾರೆ.
ನಿಮಗೆ ಅವರ ಉದ್ದೇಶ ಅರ್ಥ ಆಗಿ ಪ್ರಶ್ನೆ ಮಾಡಿದರೆ ನಿಮಗೇನು ಗೊತ್ತಿಲ್ಲ ಎಂಬಂತೆ ಡ್ರಾಮಾ ಮಾಡಬೇಡಿ ಎಂದು ಅವರು ನಗುತ್ತಾರೆ ಎಂದು ಹೇಳಿರುವ ಸಂಯುಕ್ತಾ ಈ ವಿಚಾರದಲ್ಲಿ ಕಾಸ್ಟಿಂಗ್ ಡೈರೆಕ್ಟರ್.. ಡೈರೆಕ್ಟರ್.. ಪ್ರೊಡ್ಯೂಸರ್.. ಆಕ್ಟರ್.. ಅಂತೇನು ಇಲ್ಲ. ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಕೈ ಜೋಡಿಸಿರುತ್ತಾರೆ, ಎಲ್ಲರು ಒಂದೇ ಒಂದೇ ಎಂದು ಹೇಳಿದ್ದಾರೆ. ಸದ್ಯ ಸಂಯುಕ್ತಾ ಹೆಗ್ಡೆ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.


Click it and Unblock the Notifications











