ಮತ್ತೆ ಕನ್ನಡ ಹೋರಾಟಗಾರರನ್ನು ಕೆಣಕಿದ್ರಾ ಶ್ರದ್ಧಾ? ಅಯ್ಯೋ.. ಯಾಕಿಷ್ಟು ಟ್ರೋಲ್ ಆಗ್ತಿದ್ದಾರೆ?
ನಿರೂಪಕಿ, ಸ್ಟಾಂಡಪ್ ಕಾಮೆಡಿಯನ್ ಶ್ರದ್ಧಾ ಜೈನ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಆಕೆಯ ಸ್ಟ್ಯಾಂಡಪ್ ಕಾಮಿಡಿ ವೀಡಿಯೋ ವೈರಲ್ ಆಗಿದ್ದು ಗೊತ್ತೇಯಿದೆ. 'ಮಿಲೇ ಸುರ್ ಮೇರಾ ತುಮ್ಹಾರಾ' ಹಾಡಿನ ಸುತ್ತಾ ಆಕೆ ಮಾಡಿದ್ದ ವೀಡಿಯೋ ಗಮನ ಸೆಳೆದಿತ್ತು. ಆಗ ಈ ಹಾಡನ್ನು ಹೇಗೆ ಮಾಡಿದ್ರು, ಒಂದು ವೇಳೆ ಈಗ ಇಂತಹ ಹಾಡು ಬಿಡುಗಡೆ ಆಗಿದ್ರೆ ಏನಾಗುತ್ತಿತ್ತು ಎಂದು ತಮಾಷೆಯಾಗಿ ಚರ್ಚಿಸಿದ್ದರು.
ಹಿಂದಿ ಹೇರಿಕೆಯನ್ನು ಶ್ರದ್ಧಾ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಅಂಥದ್ದೇ ಚರ್ಚೆ ಆರಂಭವಾಗಿದೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಜೈನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ನಡೆದ ಅಂಕಿತ ಪುಸ್ತಕ ಪ್ರಕಾಶನದ 3 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರದ್ಧಾ ಜೈನ್ ಭಾಗವಹಿಸಿದ್ದರು. ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೀತು. ವೇದಿಕೆಯಲ್ಲಿ ಮಾತನಾಡಿದ ಶ್ರದ್ಧಾ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ನಾನು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಆರಂಭದಲ್ಲಿ ಕನ್ನಡ ಗೊತ್ತಿರಲಿಲ್ಲ. ನಿಧಾನವಾಗಿ ಕಲಿತೆ. ನನ್ನ ಮೇಲೆ ಕನ್ನಡದ ದೊಡ್ಡ ಸಾಲ ಇದೆ. ಅದನ್ನು ತೀರಿಸಲೇಬೇಕು ಎಂದಿದ್ದಾರೆ.
'ಮಿಲೇ ಸುರ್ ಮೇರಾ ತುಮ್ಹಾರಾ' ಹಾಡನ್ನು ಮತ್ತೆ ಪ್ರಸ್ತಾಪಿಸಿದ ಶ್ರದ್ಧಾ "ಈಗ ಆ ಹಾಡು ಮಾಡಲು ಹೋಗಿದ್ದರೆ ಎಷ್ಟೆಲ್ಲಾ ವಿವಾದ ಆಗುತ್ತಿತ್ತು. ಈಗ ಬಾಲಮುರಳಿ ಕೃಷ್ಣ ತಮಿಳು ಹಾಡು ಹಾಡಿದ್ದರೆ ಭಾರೀ ಚರ್ಚೆ ಗಲಾಟೆ ಆಗ್ತಿತ್ತು, ತೆಲುಗಿನವರಾಗಿ ಹೇಗೆ ತಮಿಳು ಹಾಡು ಹಾಡ್ತೀರಾ ಅಂತ. ವೈವಿಧ್ಯತೆಯಲ್ಲಿ ಏಕತೆ ಬಗ್ಗೆ ಆಗ ಪ್ರೀತಿ ಇತ್ತು. ಈಗ ನಮ್ದು ನಮ್ದು ಅಂತ ನಾವು ಅಂತಿದ್ದೀವಿ. ನನಗೆ ಕನ್ನಡ ಕಲಿಯೋಕೆ ಯಾರು ಹೇಳಲಿಲ್ಲ. ಕಲಿತುಬಿಟ್ಟೆ. ಯಾವುದೇ ವಿಷಯ ಹೇಳದೇ ಮಾಡಿದಾಗ ಆ ಪ್ರೀತಿ ಬೇರೆ, ಯಾರು ಹೇಳದೇ ಕನ್ನಡ ಕಲಿತಿದ್ದಕ್ಕೆ ಇಲ್ಲಿದ್ದೀನಿ" ಎಂದು ಶ್ರದ್ಧಾ ಹೇಳಿದ್ದಾರೆ.
ಮಾತು ಮುಂದುವರೆಸಿರುವ ಶ್ರದ್ಧಾ "ಭಾಷೆ ಕಲಿಯಲೇಬೇಕು ಎಂದು ಒತ್ತಡ ಹೇರಿದಾಗ ಎಲ್ಲೋ ಒಂದು ಕಡೆ ನಾವು ಭಾಷೆಗೆ ನೋವು ಕೊಟ್ಟಂತೆ ಆಗುತ್ತದೆ. ನನಗೆ ಯಾರ ಒತ್ತಡವೂ ಇರಲಿಲ್ಲ. ನಾನೇ ಇಷ್ಟಪಟ್ಟು ಕಲಿತೆ, ಭಾಷೆಗೆ ಸೇವೆ ಮಾಡ್ತೀವಿ ಅನ್ನೋದು ದೊಡ್ಡ ಮಾತಾಗುತ್ತದೆ. ಭಾಷೆಯನ್ನು ಪ್ರೀತಿಸಬೇಕು ಅಷ್ಟೆ. ಅದು ಬಿಟ್ಟು ಭಾಷೆ ರಕ್ಷಣೆ ಮಾಡ್ತೀವಿ ಅನ್ನೋದೆಲ್ಲಾ ನನಗೆ ಗೊತ್ತಿಲ್ಲ. ಆದರೆ ಎಲ್ಲರೂ ಪ್ರೀತಿ ಮಾಡಬಹುದು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ಜನ ಶ್ರದ್ಧಾ ಜೈನ್ ಹೇಳುವುದು ಸರಿಯಿದೆ ಎಂದು ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪರಭಾಷೆಗಳ ಹಾವಳಿ ನಡುವೆ ನನ್ನ ಭಾಷೆಯನ್ನು ಉಳಿಸಿ ಬೆಳೆಸಲು ಕೊಂಚ ಗಟ್ಟಿಯಾಗಿಯೇ ಹೇಳಬೇಕು. ಯಾವುದನ್ನು ಬಲವಂತ ಮಾಡಬಾರದು ಅಂದರೆ ಹಿಂದಿನ ಹೇರಿಕೆ ಯಾಕೆ ಮಾಡುತ್ತಿದ್ದಾರೆ. ಜನ ಬೇಕಿದ್ದರೆ ಇಷ್ಟಪಟ್ಟು ಹಿಂದಿ ಕಲಿಯುತ್ತಾರೆ. ಆ ಬಗ್ಗೆ ಶ್ರದ್ಧಾ ಯಾಕೆ ಮಾತನಾಡಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ತಾರಕ್ಕೇರಿದೆ.
ಕನ್ನಡ ಹೋರಾಟಗಾರರನ್ನು ಶ್ರದ್ಧಾ ಜೈನ್ ಪರೋಕ್ಷವಾಗಿ ಕೆಣಕಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿ ಹೇರಿಕೆ ಅಜೆಂಡಾ ಇದರ ಹಿಂದೆ ಇದೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪದೇ ಪದೆ ಕನ್ನಡ ಭಾಷೆಯ ಹೆಸರಿನಲ್ಲೇ ಶ್ರದ್ಧಾ ಯಾಕೆ ಮಾತನಾಡುತ್ತಾರೆ, ಹಿಂದಿ ಉದಾಹರಣೆ ಕೊಟ್ಟು ಯಾಕೆ ಮಾತನಾಡಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.


Click it and Unblock the Notifications











