»   » ಕನ್ನಡಕ್ಕೆ ಕಾಲಿಟ್ಟ ಬಾಲಿವುಡ್ ನಟ ಶ್ರೇಯಸ್ ತಲ್ಪಡೆ

ಕನ್ನಡಕ್ಕೆ ಕಾಲಿಟ್ಟ ಬಾಲಿವುಡ್ ನಟ ಶ್ರೇಯಸ್ ತಲ್ಪಡೆ

Posted By:
Subscribe to Filmibeat Kannada
ಸ್ಯಾಂಡಲ್ ವುಡ್ ಅಂಗಳಕ್ಕೆ ಮತ್ತೊಬ್ಬ ಬಾಲಿವುಡ್ ನಟನ ಪ್ರವೇಶವಾಗಲಿದೆ. ನಾನಾ ಪಾಟೇಕರ್, ಜಾಕಿ ಶ್ರಾಫ್ ಕನ್ನಡ ಚಿತ್ರಗಳಲ್ಲಿ ನಟಿಸಿ ಹೋದ ನಂತರ ಇದೀಗ ಹಿಂದಿ ಹಾಗೂ ಮರಾಠಿ ಚಿತ್ರಗಳ ನಟ ಶ್ರೇಯಸ್ ತಲ್ಪಡೆ ಕನ್ನಡಕ್ಕೆ ಬರುತ್ತಿದ್ದಾರೆ. ಅಣಜಿ ನಾಗರಾಜ್ ನಿರ್ಮಿಸಲಿರುವ ಬರಲಿರುವ ಚಿತ್ರದಲ್ಲಿ ಈ ನಟ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ. 30 ಕ್ಕೂ ಹೆಚ್ಚು ಬಾಲಿವುಡ್ ಹಾಗೂ ಮರಾಠಿಯಲ್ಲಿ ಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ ತಲ್ಪಡೆ, ಹೆಚ್ಚಾಗಿ ಹಾಸ್ಯ ಪಾತ್ರಗಳನ್ನೇ ಮಾಡಿದ್ದಾರೆ. ಆದರೆ ಈಗವರು ನಟಿಸಲಿರುವ ತ್ರಿಭಾಷಾ ಚಿತ್ರದ ಸಬ್ಜೆಕ್ಸ್ 'ರೊಮ್ಯಾಂಟಿಕ್ ಥ್ರಿಲ್ಲರ್'. ಈ ಚಿತ್ರದಲ್ಲಿ ಶ್ರೇಯಸ್ 'ಹಾರ್ಡ್‌ವೇರ್ ಎಂಜಿನಿಯರ್' ಪಾತ್ರ ಮಾಡಲಿದ್ದಾರೆ.

ಅಣಜಿ ನಿರ್ಮಾಣದ ಈ ಚಿತ್ರದಲ್ಲಿ ನಾಯಕರು ಬೇರೆ ಬೇರೆ. ಕನ್ನಡದಲ್ಲಿ ಶ್ರೀನಗರ ಕಿಟ್ಟಿ, ತೆಲುಗಿನಲ್ಲಿ ತರುಣ್ ಹಾಗೂ ಹಿಂದಿಯಲ್ಲಿ ಮಿಥುನ್ ಚಕ್ರವರ್ತಿ ಮಹಾಕ್ಷಯ್ ಚಕ್ರವರ್ತಿ ನಾಯಕರಾಗಿರುತ್ತಾರೆ. ಆದರೆ ಈ ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರ ಹಿಂದಿ, ಕನ್ನಡ ಮತ್ತು ತೆಲುಗು ಮೂರರಲ್ಲೂ ಇರಲಿದೆ. ಹಾಗೇ, ನಟಿ ಟಿಯಾ ಬಾಜಪೇಯಿ ಕೂಡ ಮೂರೂ ಭಾಷೆಗಳಲ್ಲಿ ಇರಲಿದ್ದಾರೆ.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಟಿಯಾ ಬಾಜಪೇಯಿ, 'ಸರಿಗಮಪ ಚಾಲೆಂಜ್ 2005' ಮೂಲಕ ಬೆಳಕಿಗೆ ಬಂದ ಪ್ರತಿಭೆ. ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಹೆಚ್ಚು ಖ್ಯಾತಿ ಪಡೆದಿಲ್ಲ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಒರಿಸ್ಸಾ ಮೂಲದ ಹಿಂದಿ ನಟ ಪಿಟೋಬಾಶ್ ಹಾಗೂ ಅಜಯ್ ಕೂಡ ನಟಿಸಲಿದ್ದಾರೆ. ಹೆಚ್ಚಾಗಿ ವಿದೇಶಗಳಲ್ಲೇ ಚಿತ್ರೀಕರಣ ನಡೆಯಲಿದ್ದು ಬ್ಯಾಂಕಾಕ್ ಮತ್ತು ಜೋರ್ಡಾನ್‌ ಪ್ರಮುಖ ಚಿತ್ರೀಕರಣ ತಾಣವಾಗಿದೆ.

ವಿದೇಶಗಳನ್ನು ಹೊರತುಪಡಿಸಿ ಬೆಂಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ ಚಿತ್ರತಂಡ. ಅಣಜಿ ನಿರ್ಮಾಣದ ಈ ಚಿತ್ರವು 'ನಮ್ಮಣ್ಣ ಫಿಲಂಸ್' ಬ್ಯಾನರ್ ಅಡಿಯಲ್ಲಿ ರು. 15 ಕೋಟಿ ಬಜೆಟ್ ನಲ್ಲಿ ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಹೆಸರಿಡದ ಈ ಚಿತ್ರವನ್ನು ನವೀನ್ ಕೌಶಿಕ್ ಮತ್ತು ವಿಜಯ್ ಕಿರಣ್ (ಪ್ರದೀಪ್) ನಿರ್ದೇಶಿಸಲಿದ್ದಾರೆ.

ಅರ್ಜುನ್ ಜನ್ಯ ಸಂಗೀತವಿರುವ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ಕವಿರಾಜ್ ಸಾಹಿತ್ಯ ಹಾಗೂ ರಾಜೇಶ್ ಕಟ್ಟಾ ಛಾಯಾಗ್ರಾಹಣವಿದೆ. ಭೀಮಾ ತೀರದಲ್ಲಿ (ಚಂದಪ್ಪ) ನಂತರ ಅಣಜಿ ನಾಗರಾಜ್ ನಿರ್ಮಾಣದ ಚಿತ್ರ ಇದಾಗಿದೆ. ಪರಭಾಷೆಯ ನಟ ಶ್ರೇಯಸ್ ತಲ್ಪಡೆ ತಮ್ಮ ಪಾತ್ರಕ್ಕೆ ಸ್ವತಃ ತಾವೇ ಡಬ್ಬಿಂಗ್ ಮಾಡಲಿದ್ದಾರಂತೆ. ಒಟ್ಟಿನಲ್ಲಿ ಅಣಜಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
The Bollywood actor, Shreyas Talpade who is often seen in comic roles, is making his debut in the Srinagar Kitty starrer next film. It is a trilingual movie simultaneously made in Kannada, Telugu and Hindi. Shreyas will be acting in all three versions.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada