ಅರ್ಜುನ್ ಜನ್ಯ '45' ಸೆಟ್ಟಿಗೆ ಸ್ವಾಮೀಜಿ ಭೇಟಿ; ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಸಿನಿಮಾಗೆ ಸಿಕ್ಕಿತು ಆಶೀರ್ವಾದ
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ '45'. ಈ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲವಿದೆ. ಅರ್ಜುನ್ ಜನ್ಯ ಅವರ ವಿಶಿಷ್ಟ ಕಾನ್ಸೆಪ್ಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ದೊಡ್ಡ ಸ್ಟಾರ್ ಕಾಸ್ಟ್ ಟೀಮ್ ಕೂಡ ಇದೆ. ಹೀಗಾಗಿ '45' ಸಿನಿಮಾಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮೂವರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾದ ಚಿತ್ರೀಕರಣ ಕೂಡ ಅದ್ಧೂರಿಯಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ.

ಅದ್ಧೂರಿ ವೆಚ್ಚದಲ್ಲಿ ಸೆಟ್ಟಿನಲ್ಲಿ ಸಾಹಸ ನಿರ್ದೇಶಕ ರವಿವರ್ಮಾ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಸದ್ಯ ಸಿನಿಮಾ ಆಕ್ಷನ್ ಸೀನ್‌ಗಳ ಶೂಟಿಂಗ್ ನಡೆಯುತ್ತಿದೆಯಾ? ಇಲ್ಲ ದೃಶ್ಯದ ಚಿತ್ರೀಕರಣನಾ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಆದರೆ, ಈ ಸೆಟ್ಟಿಗೆ ಸ್ವಾಮೀಜಿಯೊಬ್ಬರು ಭೇಟಿ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಈ ವೇಳೆ ಸೆಟ್ಟಿನಲ್ಲಿ ಶಿವಣ್ಣ ಕೂಡ ಕಾಣಿಸಿಕೊಂಡಿದ್ದಾರೆ.
'45' ಸಿನಿಮಾದ ಶೂಟಿಂಗ್ ಸ್ಪಾಟ್‌ಗೆ ಆನಂದಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು ಭೇಟಿ ನೀಡಿ ಚಿತ್ರತಂಡದವರನ್ನು ಆಶೀರ್ವದಿಸಿದ್ದಾರೆ. ಅಲ್ಲದೆ ಸಿನಿಮಾದ ಕೆಲವು ದೃಶ್ಯಗಳನ್ನು ವೀಕ್ಷಣೆ ಕೂಡ ಮಾಡಿ ಶುಭ ಕೋರಿದ್ದಾರೆ. ಸಿನಿಮಾದ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಆಧ್ಯಾತ್ಮಿಕ ಗುರುಗಳು ಭೇಟಿ ಕೊಟ್ಟಿರುವ ಚಿತ್ರತಂಡಕ್ಕೆ ಹೊಸ ಹುರುಷು ಬಂದಿದೆ.
ಆಧ್ಯಾತ್ಮಿಕ ಗುರುಗಳ ಭೇಟಿಯ ವೇಳೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಪತ್ನಿ ಗೀತಾ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕ ರಮೇಶ್ ರೆಡ್ಡಿ, ಸಾಹಸ ನಿರ್ದೇಶಕ ರವಿವರ್ಮ ಸೇರಿದಂತೆ ಚಿತ್ರತಂಡದ ಹಲವರು ಉಪಸ್ಥಿತಿಯಿತ್ತು.
ಇನ್ನೂ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜರು ತಮ್ಮ ಹರಿಧಾಮ ಸಾಯಿ ಟ್ರಸ್ಟ್ ನ ಮೂಲಕ ಪ್ರತಿದಿನ ಸಾವಿರಾರು ಜನರಿಗೆ ಅನ್ನದಾನ ಮಾಡುತ್ತಿದ್ದಾರೆ. ಭಾರತದಲ್ಲಿ ಒಬ್ಬ ವ್ಯಕ್ತಿಯೂ ಹಸಿವಿನಿಂದ ಇರಬಾರದು ಎಂಬ ಸಂಕಲ್ಪ ಮಾಡಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ '45' ಸಿನಿಮಾದಲ್ಲಿಯೂ ಇಂತಹ ಮಹಾತ್ಮರು, ಆಧ್ಯಾತ್ಮಿಕ ಗುರುಗಳ ಅಂಶಗಳಿವೆ. ಹೀಗಾಗಿ "ನಮ್ಮ '45' ಸಿನಿಮಾದ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜರು ಆಶೀರ್ವದಿಸಿದ್ದು ಬಹಳ ಸಂತೋಷವಾಗಿದೆ. ಈ ಸಂದರ್ಭದಲ್ಲಿ ಅವರಿಗೆ ಅನಂತ ನಮಸ್ಕಾರಗಳೊಂದಿಗೆ ಶ್ರೀಗಳವರಿಗೆ ಧನ್ಯವಾದ ಹೇಳುತ್ತೇನೆ" ಎಂದು ನಿರ್ಮಾಪಕ ರಮೇಶ್ ರೆಡ್ಡಿ ಹೇಳಿದ್ದಾರೆ.
ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ, ಕನ್ನಡ ಚಿತ್ರರಂಗಕ್ಕೆ ಇದೊಂದು ವಿಶಿಷ್ಟ ಸಿನಿಮಾ ಆಗಲಿದೆ ಎಂದು ಅರ್ಜುನ್ ಜನ್ಯ ಈಗಾಗಲೇ ಹೇಳಿದ್ದಾರೆ. ಹಲವು ದಿನಗಳಿಂದ ನಡೆಯುತ್ತಿರುವ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಸ್ವತ: ಅರ್ಜುನ್ ಜನ್ಯ ನಿರ್ದೇಶನದ ಜೊತೆಗೆ ಸಂಗೀತವನ್ನೂ ನೀಡುತ್ತಿದ್ದಾರೆ. ಸಿನಿಮಾದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಸಿನಿಮಾ ಬಿಡುಗಡೆ ವೇಳೆ ಕತೆಯ ಬಗ್ಗೆ ಹಿಂಟ್ ಸಿಗಬಹುದು.


Click it and Unblock the Notifications











