ಟಾಕ್ಸಿಕ್ ನಲ್ಲಿ ಯಶ್‌ಗೆ ಇಬ್ಬರು ನಾಯಕಿಯರು ; ಒಬ್ಬರು ಕರೀನಾ ಕಪೂರ್, ಮತ್ತೊಬ್ಬರು ಯಾರು..?
ಶ್ರುತಿ ಹಾಸನ್ ಗೊತ್ತಲ್ಲವಾ..? ಕಮಲ್ ಹಾಸನ್ ಪುತ್ರಿ. 2017ರಲ್ಲಿ ಕನ್ನಡ ಸಿನಿಮಾಗಳಲ್ಲಿ ನಟಿಸುವ ಯಾವ ಆಲೋಚನೆಯೂ ಇಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರುತಿ ಹಾಸನ್, ಆ ನಂತರ ಕನ್ನಡಿಗರೇ ನಿರ್ದೇಶಿಸಿ, ನಿರ್ಮಿಸಿದ್ದ ಸಲಾರ್ ಚಿತ್ರಕ್ಕೆ ಓಡೋಡಿ ಹೋಗಿದ್ದರು.
ನಿಜಾ, ಸಲಾರ್ ಸಿನಿಮಾದ ಮೂಲಕ ಇವರಿಗೆ ಸಿಗಬೇಕಿದ್ದ ಕೀರ್ತಿ ಸಿಗಲಿಲ್ಲ. ಖುದ್ದು ಶ್ರುತಿಗೆ ಈ ವಿಚಾರದಲ್ಲಿ ಬೇಸರ ಇರಬಹುದು. ಸಲಾರ್ 02 ಗೆ ಶ್ರುತಿ ಹಾಸನ್ ಎದುರು ನೋಡ್ತಿರಬಹುದು.
ಆದರೆ ಇದೀಗ ಇದರ ನಡುವೆ ಶ್ರುತಿ ಹಾಸನ್ ಇನ್ನೊಂದು ಕನ್ನಡ ಚಿತ್ರದ ಭಾಗವಾಗಲಿದ್ದಾರೆ. ಆ ಚಿತ್ರದ ಹೆಸರು ಟಾಕ್ಸಿಕ್. ಹೀಗೊಂದು ಸುದ್ದಿ ಸದ್ಯಕ್ಕೆ ಟೌನ್ ನಲ್ಲಿ ಕೇಳಿ ಬರುತ್ತಿದೆ.

ಹೌದು, ಮೊನ್ನೆಯಷ್ಟೇ ಟಾಕ್ಸಿಕ್ ಚಿತ್ರದಲ್ಲಿ ಕರೀನಾ ಕಪೂರ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಮಾತಿಗೆ ಮರು ಜೀವ ಸಿಕ್ಕಿತ್ತು. ಖುದ್ದು ಕರೀನಾ ದಕ್ಷಿಣದ ಬಹುದೊಡ್ಡ ಸಿನಿಮಾದ ಭಾಗವಾಗುತ್ತಿದ್ದೇನೆ ಎಂದು ಹೇಳಿದ ಕಾರಣಕ್ಕೆ, ಕರೀನಾ ಹೇಳ್ತಿರುವ ಆ ದೊಡ್ಡ ಸಿನಿಮಾ ಟಾಕ್ಸಿಕ್ ಎಂದೇ ಅಂದಾಜಿಸಲಾಗಿತ್ತು.
ಈಗ ಈ ಚಿತ್ರದಲ್ಲಿ ಒಬ್ಬರಲ್ಲ ಇಬ್ಬರು ನಾಯಕಿಯರು ಎಂಬ ಸುದ್ದಿಯನ್ನ ತೇಲಿ ಬಿಡಲಾಗಿದೆ. ಕರೀನಾ ಕಪೂರ್ ಜೊತೆ ಶ್ರುತಿ ಹಾಸನ್ ಕೂಡ ಕನ್ನಡದ ರಾಕಿ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇನ್ನೂ ಶ್ರುತಿ ಹಾಸನ್ ಕೇವಲ ನಾಯಕಿ ಅಷ್ಟೇ ಅಲ್ಲ ಗಾಯಕಿಯೂ ಹೌದು. 03 ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಟಾಕ್ಸಿಕ್ ಚಿತ್ರದ ಟೀಸರ್ ಗಾಗಿ ಶ್ರುತಿ ಹಾಸನ್ ತಮ್ಮ ಕಂಠವನ್ನ ಕುಣಿಸಿದ್ದರು ಕೂಡ. ಹೀಗಾಗಿಯೇ ಟಾಕ್ಸಿಕ್ ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸುವುದು ಖಚಿತವೆನ್ನುವ ಅಭಿಪ್ರಾಯ ಸದ್ಯಕ್ಕೆ ವ್ಯಕ್ತವಾಗ್ತಿದೆ. ಶ್ರುತಿ ಹಾಸನ್ ಟಾಕ್ಸಿಕ್ ಚಿತ್ರದ ಗಾಯಕಿಯೂ ಹೌದು, ನಾಯಕಿಯೂ ಹೌದು ಅನ್ನುವ ಮಾತು ಕೇಳಿ ಬರುತ್ತಿದೆ.

ಉಳಿದಂತೆ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಸಿದ್ಧವಾಗ್ತಿರುವ ಟಾಕ್ಸಿಕ್ ಚಿತ್ರಕ್ಕಾಗಿ ಯಶ್ ತಮ್ಮ ಜೀವನದ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದಾರೆ. ಕಳೆದೆರಡು ವರ್ಷಗಳಿಂದ ಕಥೆ ಆಯ್ಕೆ, ಲೊಕೇಶನ್ ಹುಡುಕಾಟ, ತಂತ್ರಜ್ಞರ ಹುಡುಕಾಟ, ಪಾತ್ರ ತಯಾರಿ ಇತ್ಯಾದಿ ಕೆಲಸಗಳಲ್ಲಿ ಯಶ್ ತೊಡಗಿಸಿಕೊಂಡಿದ್ದಾರೆ. ಈಗ ಕೊನೆಗೂ ಶೂಟಿಂಗ್ ಶುರುವಾಗಿದೆ.

ಒಟ್ಟಿನಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಾಣದಡಿ ಸಿದ್ಧವಾಗುತ್ತಿರುವ ಟಾಕ್ಸಿಕ್ ಚಿತ್ರದಲ್ಲಿ ಯಶ್ ಅವರ ಜೊತೆ ಇಬ್ಬರು ನಾಯಕಿಯರು ತೆರೆ ಹಂಚಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಆ ಇಬ್ಬರು ನಾಯಕಿಯರು ಬೇರೆ ಯಾರು ಅಲ್ಲ ಬದಲಿಗೆ ಕರೀನಾ ಕಪೂರ್ ಹಾಗೂ ಶ್ರುತಿ ಹಾಸನ್ ಎಂಬ ಅಭಿಪ್ರಾಯವೂ ವ್ಯಕ್ತವಾಗ್ತಿದೆ. ನಿಜಕ್ಕೂ ಶ್ರುತಿ ಹಾಸನ್ ಹಾಗೂ ಕರೀನಾ ಕಪೂರ್ ಖಾನ್ ಟಾಕ್ಸಿಕ್ ನಲ್ಲಿದ್ದಾರಾ..? ಉತ್ತರ ಸದ್ಯದಲ್ಲಿಯೇ ಸಿಗುವ ನಿರೀಕ್ಷೆ ಇದೆ.


Click it and Unblock the Notifications











