ಡಾ. ವಿಷ್ಣುವರ್ಧನ್ ಸಮಾಧಿ ಧ್ವಂಸ ; ''ನನಗೆ ಗೊತ್ತಿದ್ದರೆ ನನ್ನ ಜಾಗವನ್ನೇ ಕೊಡುತ್ತಿದ್ದೆ'' - ಶ್ರುತಿ
ಕನ್ನಡದ ಮೇರು ನಾಯಕ ಡಾ.ವಿಷ್ಣುವರ್ಧನ್. ಆದರೂ ಅವರು ದುರಂತ ನಾಯಕನಾಗಿದ್ದು ಮಾತ್ರ ಈ ನೆಲದ ಬಹುದೊಡ್ಡ ದುರಂತ. ಹೇಳದೇ.. ಕೇಳದೇ.. ಅಸಂಖ್ಯಾತ.. ಅಗಣಿತ ಅಭಿಮಾನಿಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ, ಬೆಲೆ ಕೊಡದೇ..ಅಭಿಮಾನದ ಪ್ರತೀಕದಂತೆ ಇದ್ದ ''ಅಭಿಮಾನ್ ಸ್ಟುಡಿಯೋ''ದಲ್ಲಿನ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ? ಗೊತ್ತಿಲ್ಲವಾದರೂ ಬಾಲಣ್ಣ ಮನೆಯ ಸದಸ್ಯರ ವಿರುದ್ಧ ಸದ್ಯ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ತಡವಾದರು ಕೂಡ ಕನ್ನಡ ಚಿತ್ರರಂಗ ಈ ನಡೆಯನ್ನು ಸದ್ಯ ಖಂಡಿಸುತ್ತಿದೆ. ಸಾಹಸಸಿಂಹನಿಗಾದ ಅವಮಾನ.. ಅಭಿಮಾನಿಗಳಿಗಾದ ಅನ್ಯಾಯದ ಕುರಿತು ಮಾತನಾಡುತ್ತಿದೆ. ವಿಜಯ್ ರಾಘವೇಂದ್ರ .. ಧ್ರುವಾ ಸರ್ಜಾ.. ಈ ಕುರಿತು ತಮ್ಮ ಅಸಮಾಧಾನ ಹೊರ ಹಾಕಿದ್ದು ಈಗ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಈ ಕುರಿತು ಮಾತನಾಡಿದ್ದಾರೆ. ಹೀಗೆ ಆಗುತ್ತೆ ಅಂತ ಗೊತ್ತಿದ್ದರೆ ನನ್ನದೇ ಜಾಗ ಕೊಡುತ್ತಿದ್ದೆ ಎಂದಿದ್ದಾರೆ.

ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿರುವ ಶ್ರುತಿ ನಾವು ಮಣ್ಣಾಗಿ ಹೋದರು ಕೂಡ ಅವರ ನೆನಪು ಮಣ್ಣಾಗಲ್ಲ. ಇವತ್ತು ಅವರನ್ನು ಮಣ್ಣು ಮಾಡಿದ ಜಾಗದ ಕುರಿತು ಇಷ್ಟೊಂದು ಮಾತು ಕೇಳಿ ಬರುತ್ತೆ.. ಇಷ್ಟೊಂದು ಗೊಂದಲವಾಗುತ್ತೆ.. ಇಷ್ಟೊಂದು ವರ್ಷಗಳು ಬೇಕಾಗುತ್ತೆ.. ಇದೆಲ್ಲದಕ್ಕೆ ವಿಷ್ಣು ಸರ್ ಅರ್ಹ ವ್ಯಕ್ತಿಯಲ್ಲ ಅವರನ್ನು ನಾವು ತುಂಬಾ ಪ್ರೀತಿಯಿಂದ ನೆನಪು ಮಾಡಿಕೊಳ್ಳಬೇಕಿತ್ತು, ಪ್ರತಿ ವರ್ಷ ನಾವು ಆ ಜಾಗಕ್ಕೆ ಹೋಗಬೇಕಿತ್ತು, ಭಾವನಾತ್ಮಕವಾದ ಸಂಬಂಧ ಇತ್ತು ಎಂದು ಹೇಳಿದ್ದಾರೆ. ಈ ತರ ಆಗಬಾರದಿತ್ತು ಎನ್ನುವ ನೋವು ದುಖ ನಮ್ಮೆಲ್ಲರಲ್ಲಿ ಇದೆ ಎಂದು ಹೇಳಿದ್ದಾರೆ.
ಮುಂದುವರೆದು ವಿಷ್ಣು ಸರ್ ನಮ್ಮನ್ನು ಅಗಲಿದಾಗಲೇ ಈ ತರಹದ ಪ್ರಶ್ನೆ ಉದ್ಭವವಾಗುತ್ತೆ ಎನ್ನುವುದಾಗಿದ್ದರೆ, ಈ ತರಹದ ದಿನ ಬರುತ್ತೆ ಎಂದು ಗೊತ್ತಿದ್ದರೆ ನಮ್ಮ ಹೃದಯದಲ್ಲಿ ಜಾಗ ಕೊಟ್ಟಿರುವ ಒಬ್ಬ ಕಲಾವಿದನಿಗೆ ನಮ್ಮ ಮನೆಯಲ್ಲಿ ಒಂದು ಜಾಗ ಕೊಡಲ್ವಾ ? ನಮ್ಮ ಜಮೀನಿನಲ್ಲಿ ಜಾಗ ಕೊಡಲ್ವಾ ? ಖಂಡಿತ ಕೊಡ್ತಿದ್ವಿ ಆದರೆ ಹೀಗೆ ಗೊಂದಲ ಇದೆ ಎನ್ನುವುದು ಯಾರಿಗೆ ಗೊತ್ತಿತ್ತು ಎಂದು ಹೇಳಿದ್ದಾರೆ.

ಆ ಜಾಗದಲ್ಲಿ ಗೊಂದಲ ಇದೆ ಎನ್ನುವುದೇ ನಮಗೆ ಗೊತ್ತಿರಲಿಲ್ಲವಲ್ಲಾ ಎಂದಿರುವ ಶ್ರುತಿ ಗೊಂದಲ ಇದ್ದಿದ್ದು ಗೊತ್ತಾಗಿದ್ದರೆ ನಾವು ಅಭಿಮಾನಿಗಳು ಯಾವತ್ತೋ ರೆಡಿಯಾಗ್ತಿದ್ವಿ, ನನ್ನದು ಒಂದು ಜಮೀನು ಇದೆ, ಪುಟ್ಟ ಜಾಗ ಇದೆ, ಖಂಡಿತವಾಗಿಯೂ ದೇವರ ಮನೆಯಲ್ಲಿ ನಾವು ಹೇಗೆ ವಿಷ್ಣು ಸರ್‌ಗೆ ಜಾಗ ಕೊಟ್ಟಿದೀವಿ, ಅಂತಹದ್ದರಲ್ಲಿ ನಮ್ಮ ಜಮೀನಿನಲ್ಲಿ ಜಾಗ ಕೊಡ್ತಿರಲಿಲ್ವಾ ? ಖಂಡಿತ ಕೊಡ್ತಿದ್ವಿ ಆದರೆ ನಮಗೆ ಗೊತ್ತಿರಲಿಲ್ಲ ಅಷ್ಟೇ ಎಂದು ಹೇಳಿದ್ದಾರೆ. ಆ ಜಾಗ ವ್ಯಾಜ್ಯದಲ್ಲಿದೆ ಈ ತರಹದ ಕಥೆ ಆಗುತ್ತೆ ಎಂದು ಯಾರಿಗೂ ಗೊತ್ತಿರಲಿಲ್ಲವಲ್ಲಾ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಮಾತನಾಡಿದ್ದ ಬಾಲಣ್ಣನ ಮಗಳು ಗೀತಾ ಬಾಲಿ, ವಿಷ್ಣುವರ್ಧನ್ ಸಮಾಧಿ ಧ್ವಂಸ ಮಾಡಿರುವುದರಲ್ಲಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದರು. ಆ ಜಾಗದ ಮೇಲೆ ರಾಜಕಾರಣಿಯೊಬ್ಬರ ಕಣ್ಣಿದ್ದು ಆಸ್ತಿಯನ್ನೆಲ್ಲ ಲಪಟಾಯಿಸಲು ಸಂಚು ಮಾಡಲಾಗುತ್ತಿದೆ ಎಂದು ಹೇಳಿದ್ದ ಗೀತಾ ಈ ಕೇಸ್ ತುಂಬಾ ದೊಡ್ಡ ಕಥೆ. ಇದರಲ್ಲಿ ಬಹಳಷ್ಟು ನಡೆದು ಹೋಗಿದೆ. ಬಹಿರಂಗವಾಗಿ ಹಾಗೂ ಪಬ್ಲಿಕ್‌ನಲ್ಲಿ ಕೆಲವೊಂದು ವಿಚಾರವನ್ನು ಹೇಳಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದರು. ನನ್ನ ಗಮನಕ್ಕೆ ತಾರದೇ ಅಲ್ಲಿನ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವುಗೊಳಿಸಿದ್ದಾರೆ ಎಂದು ಹೇಳಿದ್ದರು.


Click it and Unblock the Notifications











