»   » ಆಗ ಶೂಟಿಂಗ್‌ ನಡೆಯುತ್ತಿರಲಿಲ್ಲ . ಶ್ರುತಿ ಸಿನಿಮಾ ಡೈಲಾಗನ್ನು ಉರು ಹೊಡೆಯುತ್ತಲೂ ಇರಲಿಲ್ಲ . ಅಂತರಂಗದ ಕನಸುಗಳನ್ನು ತೋಡಿಕೊಳ್ಳುತ್ತಿದ್ದರು. ಅಲ್ಲಿ ನೂರೆಂಟು ಕನಸು..

ಆಗ ಶೂಟಿಂಗ್‌ ನಡೆಯುತ್ತಿರಲಿಲ್ಲ . ಶ್ರುತಿ ಸಿನಿಮಾ ಡೈಲಾಗನ್ನು ಉರು ಹೊಡೆಯುತ್ತಲೂ ಇರಲಿಲ್ಲ . ಅಂತರಂಗದ ಕನಸುಗಳನ್ನು ತೋಡಿಕೊಳ್ಳುತ್ತಿದ್ದರು. ಅಲ್ಲಿ ನೂರೆಂಟು ಕನಸು..

Subscribe to Filmibeat Kannada

ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆ...

ಈ ಒಂದು ಹಾಡಿಗಾಗಿ ಕರ್ಪೂರದ ಗೊಂಬೆ ಸಿನಿಮಾ ನೋಡಿದವರುಂಟು. ಶ್ವೇತಾಳನ್ನು ತಬ್ಬಿಕೊಂಡು ಅಳುವ ಶ್ರುತಿಯನ್ನು ಕಂಡು- ಆ ತಬ್ಬಲಿಗಳ ದುಃಖದಲ್ಲಿ ತಾವೂ ಭಾಗಿಯಾದವರುಂಟು. ಹೆತ್ತ ಕರುಳು ಮೂಲಕ ಕರುಳು ಕತ್ತರಿಸುವ ಚಿತ್ರಗಳಿಗೆ ಎಂಟ್ರಿ ಪಡೆದ ಶ್ರುತಿ ಕರ್ಪೂರದ ಗೊಂಬೆ ಹೊತ್ತಿಗೆ ಅಳುವಲ್ಲಿ , ಅಳಿಸುವಲ್ಲಿ ಪರಿಣತಿ ಪಡೆದಿದ್ದರು. ಕರ್ಪೂರದ ಗೊಂಬೆ ಚಿತ್ರ ಓಡಿದ್ದು ಶ್ರುತಿಯ ಅಭಿನಯದಿಂದಲೇ. ಚಿತ್ರದ ನಿರ್ದೇಶಕ ಎಸ್‌.ಮಹೇಂದರ್‌ ಹಾಗೂ ಶ್ರುತಿ ನಡುವೆ ಪ್ರೇಮ ಕುದುರಿದ್ದು ಆಗಲೇ. ಈಗ ಇಬ್ಬರಿಗೂ ಮದುವೆಯಾಗಿದೆ. ಮಾಲಾಶ್ರೀ, ಸುಧಾರಾಣಿಯಂತೆ ತೊಟ್ಟಿಲು ತೂಗಲು ಶ್ರುತಿ ಇನ್ನೂ ಮನಸ್ಸು ಮಾಡಿಲ್ಲ.


ಮುತ್ತು ಚಿತ್ರದ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ಸಕಲೇಶಪುರಕ್ಕೆ ಬಂದಿದ್ದ ಶ್ರುತಿ ಪತ್ರಕರ್ತರೊಂದಿಗೆ ಮಾತಿಗೆ ಸಿಕ್ಕಾಗ ನೆನಪಾದದ್ದು ಕರ್ಪೂರದ ಗೊಂಬೆಯ ತಬ್ಬಲಿ ಹಾಡು. ಶ್ರುತಿ ಮಾತನಾಡಿದ್ದೆಲ್ಲ ನಿರ್ಗತಿಕರ ಬಗ್ಗೆ , ತಬ್ಬಲಿ ಮಕ್ಕಳ ಬಗ್ಗೆ . ಆ ಮಟ್ಟಿಗೆ ಶ್ರುತಿ ಅವರ ಅಭಿನಯದೊಂದಿಗೆ ಮನಸ್ಸೂ ಮಾಗಿದೆ ಎಂದಾಯಿತು.

ಅನಾಥ ಮಕ್ಕಳ ಸೇವೆ ಮಾಡುವಾಸೆ

ಅನಾಥಾಶ್ರಮ ಕಟ್ಟಬೇಕು, ತಬ್ಬಲಿ ಮಕ್ಕಳ, ನಿರ್ಗತಿಕರ ಸೇವೆ ಮೂಲಕ ಧನ್ಯತೆ ಪಡೆಯಬೇಕು ಎಂದು ಶ್ರುತಿ ಹೇಳಿದಾಗ, ಬೆಚ್ಚಿಬೀಳುವ ಸರದಿ ಸುದ್ದಿಗಾರರದು. ಶ್ರುತಿ ಅಭಿನಯಿಸುತ್ತಿರಲಿಲ್ಲ , ಕನಸುಗಳನ್ನು ತೋಡಿಕೊಳ್ಳುತ್ತಿದ್ದರು. ಅನಾಥ ಮಕ್ಕಳ ಸೇವೆ ಮಾಡುವುದು ನನ್ನ ದೊಡ್ಡ ಕನಸು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇನೆ ಎಂದರು.

ಅನಾಥಾಶ್ರಮ ಕಟ್ಟಲಿಕ್ಕಾಗಿ ಭೂಮಿ ಮಂಜೂರು ಮಾಡುವಂತೆ ಶ್ರುತಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಾಳುಬೆಟ್ಟದ ಸಮೀಪ ದೇವಸ್ಥಾನದ ಅಕ್ಕಪಕ್ಕದಲ್ಲಿ 25 ಎಕರೆ ಭೂಮಿ ನೀಡುವಂತೆ ಸರ್ಕಾರವನ್ನು ಕೋರಿದ್ದೇನೆ. ಸರ್ಕಾರ ಭೂಮಿ ನೀಡುತ್ತದೆಂದು ನಂಬಿದ್ದೇನೆ. ಭೂಮಿ ಮಂಜೂರಾದ ತಕ್ಷಣ ಅನಾಥಾಶ್ರಮ ಕಟ್ಟುವ ಕೆಲಸ ಪ್ರಾರಂಭಿಸುತ್ತೇನೆ ಎಂದು ಶ್ರುತಿ ಹೇಳಿದರು.

ಬೆಂಗಳೂರಲ್ಲಿ ಅಥವಾ ಸುತ್ತಮುತ್ತ ಭೂಮಿ ಕೇಳಬಹುದುತ್ತಿಲ್ಲ ?

ಕೇಳಬಹುದಿತ್ತು . ಆದರೆ, ಬೆಂಗಳೂರಿನಂತಹ ಮಹಾನಗರದೊಳಗೆ ಅನಾಥಾಶ್ರಮ ಕಟ್ಟುವ ನನ್ನ ಪ್ರಯತ್ನ ಲೋಭಕ್ಕೆ ತಿರುಗಿದರೆ? ಶ್ರುತಿಯ ಮರುಪ್ರಶ್ನೆಗೆ ಸುದ್ದಿಗಾರರು ಮೌನ.

ಭಾವತೀವ್ರತೆಯಲ್ಲಿ ಮುಳುಗಿದ್ದ ಶ್ರುತಿ ಅವರನ್ನು ಮುತ್ತು ಚಿತ್ರದ ಬಗ್ಗೆ ಕೆದಕಿದ ಸುದ್ದಿಗಾರರು ಮತ್ತೆ ಮಾತಿಗೆಳೆದರು. ಮುತ್ತು ಸಾಂಸಾರಿಕ ಚಿತ್ರ. ಚಿತ್ರಕಥೆ ವಿಭಿನ್ನವಾಗಿದೆ. ಮುತ್ತು ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ ಎಂದು ಚಿತ್ರದ ಬಗ್ಗೆ ಶ್ರುತಿ ವಿಶ್ವಾಸ ವ್ಯಕ್ತಪಡಿಸಿದರು.

ಕೊನೆಯದಾಗಿ ಶ್ರುತಿ ಹೇಳಿದ್ದು- ಸಾಧಿಸಬೇಕಾದುದನ್ನು ಹೇಳಿ ತೋರಿಸುವುದಿಲ್ಲ . ಸಾಧಿಸಿಯೇ ಸಾಧಿಸುತ್ತೇನೆ.

ಶ್ರುತಿ ಗೆಲ್ಲಲಿ. ಅವರು ಅಂದುಕೊಂಡಿದ್ದನ್ನು ಸಾಧಿಸಲಿ. ತಬ್ಬಲಿಗಳಿಗೊಂದು ತವರು ಸಿಕ್ಕಲಿ ಎಂದು ಸುದ್ದಿಗಾರರು ಹಾರೈಸಿದರು. ಆ ಹೊತ್ತಿಗೆ ಶ್ರುತಿ ಮತ್ತೆ ಮೈ ಮರೆತಿದ್ದರು. ಈ ಬಾರಿ ಅವರು ಸಕಲೇಶಪುರದ ಪ್ರಕೃತಿ ಸಿರಿಯಲ್ಲಿ ಮುಳುಗಿದ್ದರು.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada