»   » ಕಣ್ಣೀರ ಕೋಡಿ ಹರಿಸಿಯೇ ಕನ್ನಡ ಚಿತ್ರರಸಿಕರ ಮನಗೆದ್ದ ಶ್ರುತಿ ತಮ್ಮ ನೂರೊಂದನೇ ಚಿತ್ರದಲ್ಲಿ ಎಲ್ಲರನ್ನೂ ನಗಿಸಲು ಅಣಿಯಾಗುತ್ತಿದ್ದಾರೆ....

ಕಣ್ಣೀರ ಕೋಡಿ ಹರಿಸಿಯೇ ಕನ್ನಡ ಚಿತ್ರರಸಿಕರ ಮನಗೆದ್ದ ಶ್ರುತಿ ತಮ್ಮ ನೂರೊಂದನೇ ಚಿತ್ರದಲ್ಲಿ ಎಲ್ಲರನ್ನೂ ನಗಿಸಲು ಅಣಿಯಾಗುತ್ತಿದ್ದಾರೆ....

Subscribe to Filmibeat Kannada

ಈಕೆ ಕಣ್ಣೀರು ಸುರಿಸಲೆಂದೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರಲ್ಲ. ಆದರೆ, ಕಣ್ಣೀರು ಹರಿಸಿದ್ದರಿಂದಲೇ ಈಕೆ ಕಲಾಭಿಮಾನಿಗಳ ಹಾಗೂ ಚಿತ್ರ ನಿರ್ಮಾಪಕರ ಕಣ್ಮಣಿ ಆದದ್ದು. ಸೆಂಟಿಮೆಂಟ್‌ ಪಾತ್ರಗಳ ಮೂಲಕ ತಾವೂ ಅತ್ತು, ಹೆಂಗರುಳ ಪ್ರೇಕ್ಷಕರನ್ನೂ ಅಳಿಸಿದ್ದರಿಂದಲೇ ಈಕೆ ಇಷ್ಟು ವರ್ಷ ಚಿತ್ರರಂಗದಲ್ಲಿ ನಾಯಕಿಯಾಗಿ ಮೆರೆದದ್ದು.

ಆಕೆ ಯಾರೆಂದು ನಿಮಗೆ ಗೊತ್ತಾಗಿರಬೇಕು ಅಲ್ಲವೇ? ಆ್ಹ ಅಂದ ಹಾಗೆ ಆಕೆಯ ಪೂರ್ವಾಶ್ರಮದ ಹೆಸರು ‘ಗಿರಿಜಾ’ ಚಿತ್ರರಂಗಕ್ಕೆ ಕಾಲಿಟ್ಟಾಗ ‘ಪ್ರಿಯದರ್ಶಿನಿ’ ದ್ವಾರಕೀಶ್‌ ನಿರ್ಮಾಣದ ಚಿತ್ರ ಹಿಟ್‌ ಆದಮೇಲೆ ಆ ಚಿತ್ರದ ಹೆಸರೇ ಈಕೆಯ ಹೆಸರೂ ಆಯ್ತು.


ಈಗ ನಿಮಗೆ ಗೊತ್ತಾಗಿರಲೇಬೇಕು ಅಲ್ಲವೇ? ಹೌದು ಆಕೆಯೇ ಶ್ರುತಿ. ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ತಂಗಿಯ ಪಾತ್ರ ನಿರ್ವಹಿಸಿದ ‘ಗಿರಿಜಾ’ ಉರುಫ್‌ ಪ್ರಿಯದರ್ಶಿನಿ ಅಲಿಯಾಸ್‌ ಶ್ರುತಿ, ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ನಿಲ್ಲಲು ಕಾರಣವೇ ಕಣ್ಣೀರು!

ಶ್ರುತಿಗೆ ಸಿಕ್ಕಿರುವ 99% ಚಿತ್ರಗಳಲ್ಲಿ ಅಳುವೇ ಪ್ರಧಾನ. ಹೆಂಗರುಳ, ಮೃದು ಮನಸ್ಸಿನ ಪ್ರೇಕ್ಷಕರ ಒಡನಾಡಿಯಾಗಿದ್ದ ಶ್ರುತಿ, ನಿರ್ಮಾಪಕರ ಕಣ್ಣಣಿಯಾಗಿದ್ದೂ ಕಣ್ಣೀರಿನಿಂದಲೇ. ಆಕೆ ಕಣ್ಣೀರಧಾರೆ ಹರಿಸಿದ ಚಿತ್ರಗಳೆಲ್ಲ ಗಲ್ಲಾ ಪೆಟ್ಟಿಗೆ ಝಣಝಣ ಎನ್ನುವಂತೆ ಮಾಡಿದವು.

ಶ್ರುತಿ ಈವರೆಗೆ 99 ಚಿತ್ರದಲ್ಲಿ ನಟಿಸಿದ್ದಾರೆ. ಹೆಚ್ಚೂ ಕಡಿಮೆ ಬಹುತೇಕ ಎಲ್ಲ 99ಚಿತ್ರದಲ್ಲೂ ಲೀಟರ್‌ ಗಟ್ಟಲೆ ಗ್ಲಿಸರಿನ್‌ ಖಾಲಿ ಮಾಡಿದ್ದಾರೆ. ಆದರೆ, ತಮ್ಮ 101ನೇ ಚಿತ್ರದಲ್ಲಿ, ಕಣ್ಣೀರಧಾರೆಗೆ ಬ್ರೇಕ್‌ ಕೊಟ್ಟು, ತಾವೂ ನಕ್ಕು, ಪ್ರೇಕ್ಷಕರನ್ನೂ ನಗಿಸಲು ಅಣಿ ಆಗುತ್ತಿದ್ದಾರೆ.

ಶ್ರುತಿಯ ನೂರನೇ ಚಿತ್ರ ‘ಕೆರೆಗೆ ಹಾರ’ ಎಂದು ಕಳೆದ ವಾರ ಅಧಿಕೃತವಾಗಿ ಘೋಷಿಸಲಾಗಿದೆ. ಈ ಚಿತ್ರವನ್ನು ಶ್ರುತಿಯ ಪತಿ ಮಹೇಂದರ್‌ ನಿರ್ದೇಶಿಸುತ್ತಿದ್ದಾರೆ. ಅಂದ ಹಾಗೆ ಶ್ರುತಿ ಈಗ ‘ಹೆಂಡ್ತಿ ಅಂದ್ರೆ ಹೆಂಡ್ತಿ’ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದುವೇ ಅವರ ನೂರೊಂದನೆ ಚಿತ್ರ ಎನ್ನಬಹುದು.

ಈ ಚಿತ್ರದಲ್ಲೇ ಶ್ರುತಿ ನಿಮ್ಮನ್ನು ನಗಿಸುವ ಸಾಹಸಕ್ಕೆ ಕೈ ಹಾಕಿರೋದು. ಈ ಚಿತ್ರದ ನಾಯಕ ಸಂಸತ್‌ ಸದಸ್ಯ ಶಶಿಕುಮಾರ್‌. ಈ ಚಿತ್ರ ಸಂಪೂರ್ಣ ಹಾಸ್ಯ ಪ್ರಧಾನವಂತೆ. ಚಿತ್ರಕಥೆಯ ಸ್ಕಿೃಪ್ಟ್‌ ಓದಿದ ಶ್ರುತಿ ಹೊಟ್ಟೆ ಹುಣ್ಣಾಗುಷ್ಟು ನಕ್ಕರಂತೆ. ಆ ದಿನದಿಂದ ಇಲ್ಲಿ ತನಕ ಶ್ರುತಿ ನಗುವುದನ್ನು ನಿಲ್ಲಿಸಿಯೇ ಇಲ್ಲ.

ರಂಜಿತ, ತವರಿನ ತೇರು, ಹೆತ್ತಕರುಳು, ತಾಯಿ ಇಲ್ಲದ ತವರು, ಕರ್ಪೂರದ ಗೊಂಬೆ, ತವರಿನ ತೊಟ್ಟಿಲು, ಆಘಾತ, ಕಾದಂಬರಿ, ಮಹಾಲಕ್ಷ್ಮೀ, ಗಟ್ಟಿಮೇಳ... ಹೀಗೆ ಎಲ್ಲ 99 ಚಿತ್ರಗಳಲ್ಲಿ ಯಥೇಚ್ಛವಾಗಿ ಅತ್ತ ಶ್ರುತಿ ಪ್ರೇಕ್ಷರನ್ನು ಹೇಗೆ ನಗಿಸುತ್ತಾರೆ ಎಂಬುದು ಕುತೂಹಲದ ಸಂಗತಿ. ಇದನ್ನು ತಿಳಿಯಲು ‘ಹೆಂಡ್ತಿ ಅಂದ್ರೆ ಹೆಂಡ್ತಿ’ ಚಿತ್ರ ನೋಡದೇ ವಿಧಿ ಇಲ್ಲ.

ಬಾಲಂಗೋಚಿ : ನಗೋ ಗಂಡನ್ನು, ಅಳುವ ಹೆಣ್ಣನ್ನು ನಂಬಬಾರದು ಅಂತ ಗಾದೆ ಇದೆ. ಇದು ಶ್ರುತಿಗೆ ಅನ್ವಯಿಸಲ್ಲ ಬಿಡಿ.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada