»   » ಜಗ್ಗೇಶ್‌ಗೆ ವಯಸ್ಸಾಯಿತೇ ? ರಕ್ತದ ಒತ್ತಡ ಜಾಸ್ತಿಯಾಗಿದೆಯೇ ? ರಾಘವೇಂದ್ರ ಸ್ವಾಮಿಗಳ ಕೃಪೆ ಇದ್ದಕ್ಕಿದ್ದಂತೆ ಕೈ ಕೊಟ್ಟಿತೇ ? ಶುಕ್ರದೆಸೆ ಕೈಕೊಟ್ಟರೆ ಹೀಗೆಲ್ಲ ಆಗುತ್ತದೆ......

ಜಗ್ಗೇಶ್‌ಗೆ ವಯಸ್ಸಾಯಿತೇ ? ರಕ್ತದ ಒತ್ತಡ ಜಾಸ್ತಿಯಾಗಿದೆಯೇ ? ರಾಘವೇಂದ್ರ ಸ್ವಾಮಿಗಳ ಕೃಪೆ ಇದ್ದಕ್ಕಿದ್ದಂತೆ ಕೈ ಕೊಟ್ಟಿತೇ ? ಶುಕ್ರದೆಸೆ ಕೈಕೊಟ್ಟರೆ ಹೀಗೆಲ್ಲ ಆಗುತ್ತದೆ......

Subscribe to Filmibeat Kannada

*ಬಿ.ಎನ್‌. ಹೂಗಾರ

ಜಗ್ಗೇಶ್‌ಗೆ ವಯಸ್ಸಾಯಿತೇ ? ರಕ್ತದ ಒತ್ತಡ ಜಾಸ್ತಿಯಾಗಿದೆಯೇ ? ರಾಘವೇಂದ್ರ ಸ್ವಾಮಿಗಳ ಕೃಪೆ ಇದ್ದಕ್ಕಿದ್ದಂತೆ ಕೈ ಕೊಟ್ಟಿತೇ ? ಹಿರಿಯ ಪತ್ರಕರ್ತರೊಬ್ಬರು ಕೇಳಿದ ಒಂದೇ ಒಂದು ಪ್ರಶ್ನೆಗೆ ಜಗ್ಗೇಶ್‌ ಸಿಡಿದೆದ್ದರು. ಅನುಭವಿ ನಟನಿಗೆ ಇರಬೇಕಾದ ಸಂಯಮ, ಸೌಜನ್ಯಗಳೆಲ್ಲವನ್ನೂ ಗಾಳಿಗೆ ತೂರಿದರು.

ಪ್ರಶ್ನೆ : ನಿಮ್ಮ ಶುಕ್ರದೆಸೆ ಚಿತ್ರದ ಬಗ್ಗೆ ಎಲ್ಲೆಡೆ ಕೆಟ್ಟ ರಿಪೋರ್ಟ್‌ ಕೇಳಿ ಬರ್ತಾ ಇದೆಯಲ್ಲಾ ?

ಉತ್ತರ : ನೀವು ಸಿನಿಮಾ ನೋಡುವಾಗ ಕನ್ನಡಕ ಹಾಕಿರಲಿಲ್ಲ ಎಂದು ಕಾಣಿಸುತ್ತದೆ, ಇನ್ನೊಮ್ಮೆ ಕನ್ನಡಕ ಧರಿಸಿ ಚಿತ್ರ ನೋಡಿ....

ನಾನು ಸಿನಿಮಾ ನೋಡುವ ಹೊತ್ತಲ್ಲಿ ಕನ್ನಡಕ ಹಾಕಿ ಕೊಂಡಿದ್ದೆ

ಉತ್ತರ : ಹಾಗಿದ್ದಲ್ಲಿ ಬೆಳಿಗ್ಗೆಯೇ ಗುಂಡು ಹಾಕುವ ಅಭ್ಯಾಸ ಮಾಡಿಕೊಂಡಿದ್ದೀರಿ ಅನಿಸುತ್ತೆ. ಇಲ್ಲದೇ ಇದ್ದಲ್ಲಿ ನೀವು ಇಂಥಾ ಮಾತಾಡುತ್ತಿರಲಿಲ್ಲ.

ಎಂಬಲ್ಲಿಗೆ ಜಗ್ಗೇಶ್‌ ಅವರ ಲೆವೆಲ್‌ ಬಹಿರಂಗವಾಯಿತು . ತಮಾಷೆಯೆಂದರೆ ಶುಕ್ರದೆಸೆ ಚಿತ್ರದ ಬಗ್ಗೆ ರಿಪೋರ್ಟ್‌ ಕೆಟ್ಟದಾಗಿದೆ ಎಂದು ಜಿತೇಂದ್ರ ನಿರ್ಮಾಪಕ ಕುಮಾರಸ್ವಾಮಿಯವರೇ ಅನಂತರ ಪರೋಕ್ಷವಾಗಿ ಒಪ್ಪಿಕೊಂಡರು. ಹಾಗಿದ್ದೂ ಜಗ್ಗೇಶ್‌ ಅವರನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದರ ಬಗ್ಗೆ ಸ್ವಾಮಿ ಬೇರೆಯೇ ತತ್ವ ಮಂಡಿಸಿದರು. ಅವರು ಈ ಹಿಂದೆ ವಿಷ್ಣು ನಾಯಕತ್ವದಲ್ಲಿ ಸೂರ್ಯವಂಶ ಮಾಡಿದಾಗಲೂ, ವಿಷ್ಣುಗೆ ಮಾರ್ಕೆಟ್‌ ಇರಲಿಲ್ಲವಂತೆ. ಅದೇ ಥರ ಗಲಾಟೆ ಅಳಿಯಂದ್ರು ನಿರ್ಮಿಸುವ ಹೊತ್ತಲ್ಲಿ ಶಿವರಾಜ್‌ ಕುಮಾರ್‌ ಫ್ಲಾಪ್‌ ಹೀರೋ ಆಗಿದ್ದರು. ಆದರೆ ಆ ಎರಡು ಚಿತ್ರಗಳೂ ಹಿಟ್‌ ಆದವು. ಹಾಗಾಗಿ ನಾಯಕನ ಸ್ಥಿತಿಗತಿ ತಮಗೆ ಮುಖ್ಯವಲ್ಲ, ಕತೆಗೆ ಆತ ಹೊಂದಿಕೊಳ್ಳುತ್ತಾನೆಯೇ ಅನ್ನೋದಷ್ಟೇ ಮುಖ್ಯ ಅನ್ನುತ್ತಾರೆ ಸ್ವಾಮಿ. ಸೋ... ಜಿತೇಂದ್ರ ಚಿತ್ರದ ನಾಯಕನ ಪಾತ್ರಕ್ಕೆ ಜಗ್ಗೇಶ್‌ ಅವರೇ ಲಾಯಕ್ಕು ಎಂದು ಸ್ವಾಮಿ ನಿರ್ಧಾರಕ್ಕೆ ಬಂದಿದ್ದಾರೆ ಎಂದಾಯಿತು.

ಜಿತೇಂದ್ರ ಚಿತ್ರದ ಬಜೆಟ್‌ ವಿಚಾರದಲ್ಲಿ ಮಾತ್ರ ಕುಮಾರ ಸ್ವಾಮಿ ಜಗ್ಗೇಶ್‌ ಲೆವೆಲ್‌ನ್ನೇ ಕಾಪಾಡಿಕೊಳ್ಳಲು ನಿರ್ಧರಿಸಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಆಸುಪಾಸಲ್ಲಿ 28 ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್‌ ಮುಗಿಯಲಿದೆ. ಅಂದರೆ 35 ಲಕ್ಷದಲ್ಲಿ ಚಿತ್ರದ ಮೊದಲ ಪ್ರಿಂಟ್‌ ಸ್ವಾಮಿ ಕೈಗೆ ಬರಬಹುದು.

ಪುಟ್ಟಣ್ಣ ಕಣಗಾಲರ ಪಡುವಾರ ಹಳ್ಳಿ ಪಾಂಡವರು ಚಿತ್ರದ ಕೃಷ್ಣನ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ವಿಶ್ವನಾಥ್‌ ಅವರು ಜಿತೇಂದ್ರ ಚಿತ್ರದ ಕತೆಗಾರ ಮತ್ತು ನಿರ್ದೇಶಕ. ಶಿವಾ ತೆಲುಗು ಚಿತ್ರದ ಖಳನಾಯಕನಾಗಿ ಹೆಸರು ಮಾಡಿದ್ದ ವಿಶ್ವನಾಥ್‌ಗೆ ಇತ್ತೀಚಿನ ದಿನಗಳಲ್ಲಿ ಅವಕಾಶವಿಲ್ಲದೇ ಬದುಕು ಸಾಗಿಸುವುದೇ ಕಷ್ಟವಾಗಿತ್ತು.

ಜಿತೇಂದ್ರ ಚಿತ್ರದ ಕತೆ ಉಪೇಂದ್ರ ಚಿತ್ರದ ಕತೆಯ ತದ್ವಿರುದ್ಧ ರೂಪ ಎಂಬ ಸುದ್ದಿ ಇದೆ. ಅದೇ ಕಾರಣಕ್ಕೆ ಜಗ್ಗೇಶ್‌ ಈ ಚಿತ್ರವನ್ನು ಸಂತೋಷದಲ್ಲಿ ಒಪ್ಪಿಕೊಂಡಿರುವ ಸಾಧ್ಯತೆಯೂ ಇದೆ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...