ರಾಬರಿ ಕೇಸ್ ಬೆನ್ನು ಹತ್ತಿ 'ರಹದಾರಿ'ಯಲ್ಲಿ ಬಂದ್ರು ಶ್ವೇತಾ ಶ್ರೀವಾತ್ಸವ್
ನಟಿ ಶ್ವೇತಾ ಶ್ರೀವಾತ್ಸವ್ ಕೆಲ ವರ್ಷಗಳಿಂದ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ, ರಾಬರಿ ಕೇಸ್ ಹಿಡಿಯಲು 'ರಹದಾರಿ' ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ.
ತಾಯಿ ಆದ ನಂತರ ಬಿಡುವು ತೆಗೆದುಕೊಂಡಿದ್ದ, ಶ್ವೇತಾ ಶ್ರೀವಾತ್ಸವ್ ಮೂರು ವರ್ಷಗಳ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಈ ಬಾರಿ ಯುವ ಹಾಗೂ ಪ್ರತಿಭಾವಂತ ನಿರ್ದೇಶಕನ ಚಿತ್ರದಲ್ಲಿ ಶ್ವೇತ ಶ್ರೀವತ್ಸವ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ಪೊಲೀಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಶ್ವೇತಾ ಶ್ರೀವಾತ್ಸವ್ ಕಡಿಮೆ ಸಿನಿಮಾ ಮಾಡಿದ್ದರೂ, ಶಕ್ತಿಯುತ ಪಾತ್ರಗಳನ್ನು ಆರಿಸಿಕೊಂಡಿದ್ದಾರೆ. ಇದೀಗ 'ರಹದಾರಿ'ಯಲ್ಲಿ ಮತ್ತೊಮ್ಮೆ ಸವಾಲಿನ ಪಾತ್ರವನ್ನು ಸ್ವೀಕರಿಸಿದ್ದಾರೆ. ಗಿರೀಶ್ ವೈರಮುಡಿ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಒಂದ್ ಕಥೆ ಹೇಳ್ಲಾ' ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದರು.

ಗಿರೀಶ್ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ. ಎರಡನೇ ಸಿನಿಮಾಗೆ ಮೊದಲೇ ಈ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಸಿನಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ಹೆಚ್ಚು ಇರುವ ಕಾರಣ 'ರಹದಾರಿ' ಚಿತ್ರ ಮೊದಲು ಶುರು ಮಾಡಿದ್ದಾರೆ. ಮುಕ್ತಾಂಬ ಬಸವರಾಜು ಹಾಗೂ ಮಂಜುನಾಥ್ ಶಾಮನೂರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರೋಣದ ಬಕ್ಕೇಶ್ ಹಾಗೂ ಕೆ ಸಿ ರಾವ್ ಸಂಗೀತ ನೀಡುತ್ತಿದ್ದಾರೆ.

ಅಂದಹಾಗೆ, ಈ ಸಿನಿಮಾ ಒಂದು ನೈಜ ಘಟನೆ ಆಧಾರವಾಗಿ ಇಟ್ಟುಕೊಂಡು ಮಾಡಲಾಗಿದೆ. ಸಖತ್ ಕ್ರೇಜಿಯಾದ ರಾಬರಿಯ ಕಥೆ ಚಿತ್ರದಲ್ಲಿ ಇರಲಿದೆಯಂತೆ. ಇದೊಂದು ಕುತೂಹಲಕಾರಿ ಘಟನೆಯಾಗಿದ್ದು, ಎಲ್ಲೂ ಹೆಚ್ಚು ಬೆಳಕಿಗೆ ಬಂದಿಲ್ಲ ಎನ್ನುತ್ತಾರೆ ಗಿರೀಶ್.


Click it and Unblock the Notifications











