ಸಿದ್ದರಾಮಯ್ಯ ಜೀವನಾಧಾರಿತ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್, ಪೋಸ್ಟರ್ ರಿವೀಲ್; ಸಿದ್ದು ಪಾತ್ರದ ನಟ ಇವರೇ!
ಕನ್ನಡದಲ್ಲಿ ಹಲವಾರು ವ್ಯಕ್ತಿಗಳ ಬಯೋಪಿಕ್‌ಗಳು ಬೆಳ್ಳಿತೆರೆ ಮೇಲೆ ಮೂಡಿಬಂದಿವೆ. ಇನ್ನು ಬಯೋಪಿಕ್ ವಿಚಾರಕ್ಕೆ ಬಂದರೆ ಕನ್ನಡದಲ್ಲಿ ರೌಡಿಗಳ ಜೀವನಾಧಾರಿತ ಚಿತ್ರಗಳೇ ಹೆಚ್ಚಾಗಿ ಮೂಡಿ ಬಂದಿವೆ. ಇವುಗಳನ್ನು ಹೊರತುಪಡಿಸಿ ಬೇರೆಯವರ ಬಯೋಪಿಕ್ ಹುಡುಕಿದರೆ ಸಿಗುವುದು ಅಲ್ಲೊಂದು ಇಲ್ಲೊಂದು.
ಇನ್ನು ಸಿನಿಮಾಗಳಲ್ಲಿ ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳು ಬಂದಿರುವುದು ತುಂಬಾ ಕಡಿಮೆಯೇ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಬಯೋಪಿಕ್‌ಗೆ ಸಿನಿ ರಸಿಕರು ತುಸು ಆಸಕ್ತಿ ತೋರಿದಂತಿದೆ. ಹೌದು, 2019ರಲ್ಲಿ ನರೇಂದ್ರ ಮೋದಿ ಅವರ ಬಯೋಪಿಕ್ ಪಿ ಎಂ ನರೇಂದ್ರ ಮೋದಿ ತೆರೆಗೆ ಬಂದಿತ್ತು. ಅಲ್ಲದೇ 2021ರಲ್ಲಿ ತಮಿಳುನಾಡಿನ ಕ್ರಾಂತಿಕಾರಿ ರಾಜಕಾರಣಿ ಜಯಲಲಿತಾ ಅವರ ಬಯೋಪಿಕ್ ತಲೈವಿ ಸಹ ಬಿಡುಗಡೆಯಾಗಿತ್ತು. ಕೇವಲ ಬಯೋಪಿಕ್ ಚಲಚಿತ್ರ ಮಾತ್ರವಲ್ಲದೇ ಜಯಲಲಿತಾ ಜೀವನಾಧಾರಿತ ವೆಬ್ ಸರಣಿ ಕ್ವೀನ್ ಸಹ ಬಿಡುಗಡೆಯಾಗಿತ್ತು.

ಜಯಲಲಿತಾ ಬಯೋಪಿಕ್‌ನಲ್ಲಿ ಜಯಲಲಿತಾ ಪಾತ್ರದಲ್ಲಿ ಮಿಂಚಿದ್ದ ನಟಿ ಕಂಗನಾ ರನೌತ್ ಇದೀಗ ಮತ್ತೋರ್ವ ರಾಜಕಾರಣಿ ಇಂದಿರಾ ಗಾಂಧಿ ಬಯೋಪಿಕ್ ಚಿತ್ರದಲ್ಲಿಯೂ ಸಹ ಬಣ್ಣ ಹಚ್ಚಿದ್ದಾರೆ. ಹೀಗೆ ಪರ ರಾಜ್ಯಗಳ ರಾಜಕಾರಣಿಗಳ ಬಯೋಪಿಕ್ ಸೆಟ್ಟೇರಿತು, ಟ್ರೈಲರ್ ಬಿಡುಗಡೆಯಾಯಿತು, ಚಿತ್ರ ಹಾಗಿದೆಯಂತೆ, ಚಿತ್ರ ಇಷ್ಟು ಗಳಿಸಿತಂತೆ ಎಂದು ಕೇಳುತ್ತಿದ್ದ ಕನ್ನಡಿಗರಿಗೆ ಇದೀಗ ಕರ್ನಾಟಕದ ರಾಜಕಾರಣಿಯ ಬಯೋಪಿಕ್ ಅನ್ನು ತೆರೆ ಮೇಲೆ ನೋಡುವ ಅವಕಾಶ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.
ಹೌದು, ಕಾಂಗ್ರೆಸ್ ಪಕ್ಷದ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಭರದ ಸಿದ್ಧತೆಗಳು ನಡೆದಿವೆ. ಈ ಚಿತ್ರದ ಕುರಿತು ಹೆಚ್ಚೇನೂ ಸುದ್ದಿ ಹೊರಬಿದ್ದಿರಲಿಲ್ಲ. ಆದರೀಗ ಚಿತ್ರದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿದ್ದರಾಮಯ್ಯ ಬಯೋಪಿಕ್ ಚಿತ್ರದ ಟೈಟಲ್ ಏನೆಂಬುದು ರಿವೀಲ್ ಆಗಿದೆ.

ಇಂದು ( ಮಾರ್ಚ್ 30 ) ಶ್ರೀ ರಾಮನವಮಿ ಹಬ್ಬದ ಈ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದೆ. ಚಿತ್ರಕ್ಕೆ ಲೀಡರ್ ಎಂದು ಹೆಸರಿಡಲಾಗಿದ್ದು, ಎ ಕಿಂಗ್ ರೈಸ್ಡ್ ಬೈ ದ ಪೀಪಲ್ ಎಂಬ ಅಡಿಬರಹವನ್ನು ಬರೆಯಲಾಗಿದೆ. ಈ ಚಿತ್ರಕ್ಕೆ ನಿರ್ದೇಶಕ ಸತ್ಯರತ್ನಂ ನಿರ್ದೇಶನ ಹಾಗೂ ಚಿತ್ರಕಥೆ ಇದ್ದು, ಎಂ ಎಸ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ. ಇನ್ನು ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ.
ಇನ್ನು ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ತಮಿಳಿನ ಪ್ರತಿಭಾವಂತ ನಟ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ನೆಟ್ಟಿಗರು ಸಿದ್ದರಾಮಯ್ಯ ಪಾತ್ರ ನಿರ್ವಹಿಸಲು ಇವರೇ ತಕ್ಕ ನಟ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ರಾಮನವಮಿ ಹಬ್ಬದ ಶುಭ ಕೋರಿ ಬಿಡುಗಡೆಯಾಗಿರುವ ಈ ಪೋಸ್ಟರ್‌ನಲ್ಲಿ ಮೈಸೂರಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಯುತ್ತಿರುವ ಚಿತ್ರವಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸುತ್ತಿದ್ದಾರೆ. ಇದು ಸಿದ್ದರಾಮಯ್ಯ ಹೇಗೆ ರಾಜಕೀಯದತ್ತ ಮುಖ ಮಾಡಿದರು ಹಾಗೂ ಯಾವ ಸವಾಲುಗಳನ್ನು ಎದುರಿಸಿ ಜನ ನಾಯಕನಾದರು ಎಂಬ ಕಥೆಯನ್ನು ತೆರೆದಿಡಲಿದ್ದು, ನಿರ್ದೇಶಕರು ಯಾವ ರೀತಿ ಚಿತ್ರಕಥೆ ಬರೆದು ಗೆಲ್ಲಲಿದ್ದಾರೆ ಕಾದು ನೋಡಬೇಕಿದೆ. ನಿರ್ದೇಶಕ ಸತ್ಯರತ್ನಂ ಕನ್ನಡದ ಕಥಾಲೇಖನ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.


Click it and Unblock the Notifications











