'ಸೀಟ್ ಎಡ್ಜ್'ನಲ್ಲಿ ಒಂದು ಹಾರರ್ ಸಸ್ಪೆನ್ಸ್ ಕಹಾನಿ
ಹಾರರ್ ಸಿನಿಮಾಗಳಿಗೆ ಒಂದು ಪ್ರೇಕ್ಷಕ ವರ್ಗ ಇದೆ. ಹಾಗಾಗಿ ಪದೇ ಪದೇ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಪ್ರಯತ್ನವನ್ನು ಫಿಲ್ಮ್ ಮೇಕರ್ಸ್ ಮಾಡ್ತಿರ್ತಾರೆ. ಇದೀಗ ಹೊಸಬರ ತಂಡ 'ಸೀಟ್ ಎಡ್ಜ್' ಅನ್ನೋ ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ಅದೃಷ್ಟ ಪರೀಕ್ಷೆಗೆ ಬರ್ತಿದೆ. ಕಿರುತೆರೆ ನಟ ಸಿದ್ದು ಮೂಲಿಮನಿ ಹೀರೊ ಆಗಿ ನಟಿಸಿರೋ ಎರಡನೇ ಸಿನಿಮಾ ಇದು.
ಹಾರರ್ ಜೊತೆಗೆ ಕಾಮಿಡಿ ಟಚ್ ಇರುವ ಈ ಚಿತ್ರಕ್ಕೆ ಚೇತನ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಹಿಟ್ ಆಗಿದ್ದು ವ್ಲಾಗ್-1 ದಿ ಲೂಪ್ ಹೆಸರಿನಲ್ಲಿ ಟೀಸರ್ ಝಲಕ್ ರಿಲೀಸ್ ಮಾಡಿದ್ದಾರೆ. ಆಕಾಶ್ ಪರ್ವ ಸಂಗೀತ ಚಿತ್ರಕ್ಕಿದ್ದು 'ಹಂಗೋ ಹಿಂಗೋ' ಸಾಂಗ್ ಹಿಟ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹುಕ್ ಸ್ಟೆಪ್ ಸಖತ್ ವೈರಲ್ ಆಗ್ತಿದೆ.

'ಸೀಟ್ ಎಡ್ಜ್' ಚಿತ್ರಕ್ಕೆ ಗಿರಿಧರ ಟಿ. ವಸಂತಪುರ ಬಂಡವಾಳ ಹೂಡಿದ್ದಾರೆ. ಇದು ಅವರ ಚೊಚ್ಚಲ ಪ್ರಯತ್ನ. ಶಾಲಾ ಕಾಲೇಜು ದಿನಗಳಲ್ಲೇ ಸಿನಿಮಾ ಕಡೆ ಇದ್ದ ಒಲವು ಈಗ ಅವರು ಕನ್ನಡ ಸಿನಿಮಾ ನಿರ್ಮಾಣ ಮಾಡುವಂತೆ ಪ್ರೇರೇಪಿಸಿದೆ. 45 ದಿನಗಳ ಕಾಲ ಸಿನಿಮಾ ಚಿತ್ರೀಕರಣವಾಗಿದೆ. ಗೋವಾ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರದ ದೃಶ್ಯಗಳನ್ನು ಸೆರೆಹಿಡಿದಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.
ಚಿತ್ರದಲ್ಲಿ ನಾಯಕ ಸಿದ್ದು ಮೂಲಿಮನಿ ಅವರಿಗೆ ನಾಯಕಿಯಾಗಿ ರವೀಕ್ಷಾ ಶೆಟ್ಟಿ ನಟಿಸಿದ್ದಾರೆ. ಗಿರೀಶ್ ಶಿವಣ್ಣ, ರಘು ರಾಮನಕೊಪ್ಪ, ಮಿಮಿಕ್ರಿ ಗೋಪಿ ಚಿತ್ರದ ತಾರಾಗಣದಲ್ಲಿದ್ದಾರೆ. ಅರ್ಮಾನ್ ಮಲ್ಲಿಕ್ ಹಾಗೂ ಟಿಪ್ಪು ಚಿತ್ರದ ಹಾಡುಗಳಿಗೆ ದನಿಯಾಗಿರುವುದು ವಿಶೇಷ. ಯಾವುದಕ್ಕೂ ರಾಜಿಯಾಗದೇ ಕಥೆ ಕೇಳಿದ್ದನ್ನೆಲ್ಲಾ ಕೊಟ್ಟು ಗಿರಿಧರ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದು ಸೋಶಿಯಲ್ ಮೀಡಿಯಾ ಜಮಾನ. ಯೂಟ್ಯೂಬ್ ವ್ಲಾಗ್ಲರ್ ಕಾರುಬಾರು ಜೋರಾಗಿದೆ. ಚಿತ್ರದ ನಾಯಕ ಸಿದ್ದು ಕೂಡ ವ್ಲಾಗ್ಲರ್ ಆಗಿ ಕಾಣಿಸಿಕೊಂಡಿರುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ಒಂದು ನಿಗೂಢ ಸ್ಥಳಕ್ಕೆ ಹೋಗಿ ಅಲ್ಲಿ ದೆವ್ವ ಇದ್ಯಾ? ಇಲ್ವಾ? ಎಂದು ನಾಯಕ ಸಿದ್ದು ವೀಡಿಯೋ ಮಾಡಿ ತೋರಿಸುವ ಸಾಹಸಕ್ಕೆ ಮುಂದಾಗುತ್ತಾನೆ. ಏನೋ ಮಾಡಲು ಹೋಗಿ ಮತ್ತೇನೋ ಆಗಿ ಆತ ಹೇಗೆ ಸಮಸ್ಯೆಗೆ ಸಿಲುಕುತ್ತಾನೆ? ಅದರಿಂದ ಹೇಗೆ ಹೊರ ಬರ್ತಾನೆ, ಈ ಹಾದಿಯಲ್ಲಿ ಜೊತೆಯಾಗುವವರ ಕಥೆ ಏನು? ಅನ್ನೋದು ಸಿನಿಮಾ ಕಥೆ.
ಇತ್ತೀಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ 'ಸೀಟ್ ಎಡ್ಜ್' ಚಿತ್ರದ ಬಗ್ಗೆ ಚಿತ್ರತಂಡ ಮಾತಾಡಿದೆ. "ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೀವ್ಸ್ ಪಡೆಯುವ ವ್ಲಾಗ್ಲರ್ಸ್ ಏನೆಲ್ಲಾ ಸಾಹಸ ಮಾಡುತ್ತಾರೆ ಎನ್ನುವ ಎಳೆ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಡಾರ್ಕ್ ಕಾಮಿಡಿ ಜೊತೆ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದೆ. ಎಲ್ಲಾ ತರಹದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ, ಮನರಂಜನೆ ಗ್ಯಾರಂಟಿ" ಎಂದು ಹೇಳಿದ್ದಾರೆ.
ನಟ ಸಿದ್ದು ಕಾರ್ಯಕ್ರಮದ ನಿರೂಪಣೆ ಕೂಡ ಮಾಡಿದ್ದರು. "ಚಿತ್ರದಲ್ಲಿ ನಾನು ಯೂಟ್ಯೂಬ್ ವ್ಲಾಗ್ಲರ್ ಪಾತ್ರದಲ್ಲಿ ನಟಿಸಿದ್ದೀನಿ. ಒಂದು ಭಯಾನಕ ಜಾಗದಲ್ಲಿ ವ್ಲಾಗ್ ವೀಡಿಯೋ ಮಾಡುವ ಸಾಹಸಕ್ಕೆ ಕೈ ಹಾಕಿ ಏನೆಲ್ಲಾ ಆಗುತ್ತದೆ. ಘೋಸ್ಟ್ ಹಂಟಿಂಗ್ ವಿಡಿಯೋ ಮಾಡಲು ಹೋಗಿ ಏನೆಲ್ಲಾ ಆಗುತ್ತದೆ ಅನ್ನೋದು ಸಿನಿಮಾ ಕಥೆ, ನನ್ನ ಪಾತ್ರ" ಎಂದು ತಿಳಿಸಿದ್ದಾರೆ.
ನಿರ್ಮಾಪಕ ಗಿರಿಧರ ಟಿ. ವಸಂತಪುರ ಮಾತನಾಡಿ "ತಂಡದ ಸಹಕಾರದಿಂದ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದ್ದೇವೆ. ಗ್ರಾಫಿಕ್ಸ್ ಕೆಲಸಗಳು ಜಾಸ್ತಿಯಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಎಲ್ಲರಿಗೂ ಈ ಸಿನಿಮಾ ಇಷ್ಟವಾಗುತ್ತದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











