ಹಾರರ್ ಕಾಮಿಡಿ ಸಸ್ಪೆನ್ಸ್ 'ಸೀಟ್ ಎಡ್ಜ್' ಸಿನಿಮಾ ಬಿಡುಗಡೆಗೆ ಸಜ್ಜು
ಸಿದ್ದು ಮೂಲಿಮನಿ ನಟನೆಯ 'ಸೀಟ್ ಎಡ್ಜ್' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಚೇತನ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಘೋಸ್ಟ್ ಹಂಟಿಂಗ್ ಕಥೆಯಿದೆ. ವ್ಲಾಗರ್ ಒಬ್ಬನ ಜೀವನದ ಏಳುಬೀಳಿನ ಜರ್ನಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ರವೀಕ್ಷಾ ಶೆಟ್ಟಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಗಿರೀಶ್ ಶಿವಣ್ಣ, ರಾಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್, ಪುನೀತ್ ಬಾಬು, ತೇಜು ಪೊನ್ನಪ್ಪ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಗಿರಿಧರ ಟಿ ವಸಂತಪುರ ಹಾಗೂ ಶ್ರೀಮತಿ ಸುಜಾತಾ ಗಿರಿಧರ ಸೇರಿ 'ಸೀಟ್ ಎಡ್ಜ್' ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಮೈಸೂರು ಹಾಗೂ ಕುದುರೆ ಮುಖ ಸುತ್ತಾಮುತ್ತಾ ಚಿತ್ರದ ಚಿತ್ರೀಕರಣ ನಡೆದಿದೆ. ದೀಪಕ್ ಕುಮಾರ್ ಛಾಯಾಗ್ರಹಣ, ಆಕಾಶ್ ಪರ್ವ ಸಂಗೀತ ಚಿತ್ರಕ್ಕಿದೆ. ರಘು ಆರ್‌ಜೆ ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಜನವರಿ 30ರಂದು 'ಸೀಟ್ ಎಡ್ಜ್' ಸಿನಿಮಾ ತೆರೆಗೆ ಬರಲಿದೆ.
ಇತ್ತೀಚೆಗೆ ಹೊಸ ವರ್ಷದ ಸಂಭ್ರಮದಲ್ಲಿ ಚಿತ್ರದ ಹೊಸದೊಂದು ಹಾಡು ಬಿಡುಗಡೆ ಆಗಿತ್ತು. 'ಲೈಫು ಯಾಕೋ ಖಾಲಿ ಖಾಲಿ' ಅಂತ ಶುರುವಾಗುವ ಹಾಡಿನಲ್ಲಿ ಸಿದ್ದು ಜೊತೆ ರಾಘು ರಾಮನಕೊಪ್ಪ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಕಾಸ್ಟ್ಯೂಮ್‌ಗಳಲ್ಲಿ ಬಿಂದಾಸ್ ಆಗಿ ಕುಣಿದಿದ್ದಾರೆ. ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದು ಸಿದ್ದಾರ್ಥ್ ಬೆಳ್ಮಣ್ಣು ಹಾಡಿಗೆ ದನಿಯಾಗಿದ್ದಾರೆ.

ಇದಕ್ಕೂ ಮುನ್ನ 'ಹಂಗೋ ಹಿಂಗೋ' ಹಾಗೂ 'ಸಾರಿ ಹೇಳುವೆ' ಎಂಬ ಮತ್ತೆರಡು ಹಾಡುಗಳು ರಿಲೀಸ್ ಆಗಿ ಹಿಟ್ ಲಿಸ್ಟ್ ಸೇರಿತ್ತು. 'ಹಂಗೋ ಹಿಂಗೋ' ಹಾಡಿನ ಹುಕ್ ಸ್ಟೆಪ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿತ್ರದಲ್ಲಿ ಕೂಡ ಸಿದ್ದು ಎಂಬ ವ್ಲಾಗರ್ ಪಾತ್ರದಲ್ಲಿ ಮೂಲಿಮನಿ ನಟಿಸಿದ್ದಾರೆ. ಬಹಳ ಉತ್ಸಾಹಿ ಯುವಕ ವ್ಲಾಗರ್ ಆಗಿ ಏನಾದರೂ ಸಾಧನೆ ಮಾಡಬೇಕು ಎಂದು ಒಂದು ಸಾಹಸಕ್ಕೆ ಕೈ ಹಾಕುತ್ತಾನೆ. ಆ ಹಾದಿಯಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳೇ ಸಿನಿಮಾ ಕಥೆ. ಇತ್ತೀಚೆಗೆ ಸಿದ್ದು ನಟಿಸಿದ್ದ 'ಲವ್ ಯು ಮುದ್ದು' ಸಿನಿಮಾ ತೆರೆಗೆ ಬಂದಿತ್ತು. ಇದೀಗ 'ಸೀಟ್ ಎಡ್ಜ್' ಕಥೆ ಹೇಳಲು ಬರ್ತಿದ್ದಾರೆ.
ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್, ಉತ್ತರ ಭಾರತದ ಘೋಸ್ಟ್ ಹಂಟರ್ ಖ್ಯಾತಿಯ ಗೌರವ್ ತಿವಾರಿ ಜೀವನದ ಕೆಲ ಘಟನೆಗಳೇ 'ಸೀಟ್ ಎಡ್ಜ್' ಚಿತ್ರಕ್ಕೆ ಸ್ಫೂರ್ತಿ ಎನ್ನಲಾಗ್ತಿದೆ. ಇದರ ನಡುವೆ ಕಾಮಿಡಿ, ನಾಯಕ ಸಿದ್ದು ಲವ್ ಟ್ರ್ಯಾಕ್ ಕೂಡ ಸಿನಿಮಾದಲ್ಲಿದೆ. ಹಾಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ವಿಜಯ್ ಸಿನಿಮಾಸ್ ಬ್ಯಾನರ್ ಮೂಲಕ ನಿರ್ಮಾಪಕರು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.
ಇದು ಸೋಶಿಯಲ್ ಮೀಡಿಯಾ ಜಮಾನ. ಜನ ದಿನದ ಬಹುತೇಕ ಸಮಯವನ್ನು ಫೋನ್ ನೋಡುತ್ತಾ ಕಳೆಯುತ್ತಿದ್ದಾರೆ. ಯುವಕರಿಗೆ ಸೋಶಿಯಲ್ ಮೀಡಿಯಾ ಸಾಕಷ್ಟು ಅವಕಾಶಗಳನ್ನು ತಂದೊಡ್ಡಿದೆ. ಅದರಲ್ಲಿ ಯೂಟ್ಯೂಬ್ ವಿಡಿಯೋ, ರೀಲ್ಸ್ ಅಂತೆಲ್ಲಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇನ್ನು ಕೆಲವರು ಲೈಕ್ಸ್, ವೀವ್ಸ್ ಹಾಗೂ ಜನಪ್ರಿಯತೆಗಾಗಿ ಸಾಹಸ ಮಾಡಲು ಮುಂದಾಗುತ್ತಾರೆ. ಆ ಹಾದಿ ಅಷ್ಟು ಸುಲಭವಾಗಿರುವುದಿಲ್ಲ. ಅದೇ ರೀತಿ ಘೋಸ್ಟ್ ಹಂಟಿಂಗ್ ಬಗ್ಗೆ ಸಾಕಷ್ಟು ಜನರಿಗೆ ಆಸಕ್ತಿ, ಕುತೂಹಲ ಸಹ ಇರುತ್ತದೆ. ಅಂತಹ ವಿಚಾರಗಳ ಸುತ್ತಾ 'ಸೀಟ್ ಎಡ್ಜ್' ಸಿನಿಮಾ ನಿರ್ಮಾಣವಾಗಿದೆ.


Click it and Unblock the Notifications











