ಸೈಮಾ 2018: 'ರಾಜಕುಮಾರ'ನ ಮುಡಿಗೆ ಐದು ಪ್ರಶಸ್ತಿಯ ಗರಿಗಳು.!
Recommended Video

2017 ರಲ್ಲಿ ಬಿಡುಗಡೆ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ 'ರಾಜಕುಮಾರ'ನ ತಕಧಿಮಿತಾ ಜೋರಾಗಿತ್ತು. ಪ್ರೇಕ್ಷಕರ ಮನಗೆಲ್ಲುವಲ್ಲಿ 'ರಾಜಕುಮಾರ' ಯಶಸ್ವಿ ಆಯ್ತು.
ಇದೀಗ ಇದೇ 'ರಾಜಕುಮಾರ' ಸಿನಿಮಾ ಐದು ಸೈಮಾ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಾಗ್ನೋಡಿದ್ರೆ, ಸೈಮಾ 2018 ರೇಸ್ ನಲ್ಲಿ ಒಂಬತ್ತು ವಿವಿಧ ವಿಭಾಗಗಳಲ್ಲಿ 'ರಾಜಕುಮಾರ' ಚಿತ್ರ ನಾಮಿನೇಟ್ ಆಗಿತ್ತು. ಒಂಬತ್ತರಲ್ಲಿ 'ರಾಜಕುಮಾರ'ನ ಮುಡಿಗೆ ಐದು ಪ್ರಶಸ್ತಿಯ ಗರಿಗಳು ಲಭಿಸಿವೆ.
ಯಾವ್ಯಾವ ವಿಭಾಗಗಳಲ್ಲಿ 'ರಾಜಕುಮಾರ' ಚಿತ್ರ ನಾಮಿನೇಟ್ ಆಗಿತ್ತು.?
ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಾಸ್ಯ ಕಲಾವಿದ, ಅತ್ಯುತ್ತಮ ಖಳನಟ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಗಾಯಕ ಮತ್ತು ಅತ್ಯುತ್ತಮ ಛಾಯಾಗ್ರಾಹಕ ವಿಭಾಗಗಳಲ್ಲಿ 'ರಾಜಕುಮಾರ' ಚಿತ್ರದ ತಾರೆಯರು ಹಾಗೂ ತಂತ್ರಜ್ಞರು ನಾಮಿನೇಟ್ ಆಗಿದ್ದರು.

ಯಾರ್ಯಾರಿಗೆ ಪ್ರಶಸ್ತಿ ಸಿಕ್ತು.?
ಸೈಮಾ 2018 ರೇಸ್ ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ 'ರಾಜಕುಮಾರ' ಪಾಲಾಯಿತು. ಇದೇ ಚಿತ್ರದ ಅಭಿನಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು.
'ರಾಜಕುಮಾರ' ಅಂತಹ ಮನಮಿಡಿಯುವ ಸಿನಿಮಾ ನೀಡಿದ ಸಂತೋಷ್ ಆನಂದ್ ರಾಮ್ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಗೀತ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದರು. ಇನ್ನೂ 'ಬೊಂಬೆ ಹೇಳುತೈತೆ...' ಹಾಡಿಗೆ ಸೊಗಸಾದ ರಾಗ ಸಂಯೋಜನೆ ಮಾಡಿದ್ದ ವಿ.ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.
ಒಟ್ನಲ್ಲಿ, ಸೈಮಾ 2018 ರಲ್ಲಿ ಕನ್ನಡ ಚಿತ್ರರಂಗದ 'ರಾಜಕುಮಾರ' ರಾರಾಜಿಸಿತು.


Click it and Unblock the Notifications











