ಸೈಮಾ 2022: ಪ್ರಶಸ್ತಿ ಬೇಟೆಯಲ್ಲಿ ಖಾತೆ ತೆರೆದ ದರ್ಶನ್ ಚಿತ್ರ ರಾಬರ್ಟ್; ಕನ್ನಡದ ಮೊದಲ ಅವಾರ್ಡ್!

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ಅದ್ದೂರಿಯಾಗಿ ಜರುಗುತ್ತಿದೆ. ಇಂದು ( ಸೆಪ್ಟೆಂಬರ್ 10 ) ಆರಂಭವಾಗಿರುವ ಸೈಮಾ ಅವಾರ್ಡ್ಸ್ ನಾಳೆಯೂ ಸಹ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಚಂದನವನದ ರಾಕಿಂಗ್ ಸ್ಟಾರ್ ಯಶ್, ತೆಲುಗು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ವಿಜಯ ದೇವರಕೊಂಡ, ತಮಿಳು ಚಿತ್ರರಂಗದ ಉಳಗನಾಯಗನ್ ಕಮಲ್ ಹಾಸನ್ ಮತ್ತು ಹಿಂದಿ ಚಿತ್ರರಂಗದ ನಟ ರಣವೀರ್ ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.
ಇನ್ನು ಈ ಬಾರಿಯ ಸೈಮಾ ಪ್ರಶಸ್ತಿಯಲ್ಲಿ ಕನ್ನಡದ ಪರ ರಾಬರ್ಟ್ 10 ವಿಭಾಗಗಳಲ್ಲಿ ನಾಮಿನೇಟ್ ಆಗಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆದ ಸ್ಯಾಂಡಲ್ ವುಡ್ ಸಿನಿಮಾ ಎನಿಸಿಕೊಂಡಿತ್ತು. ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಗರುಡಗಮನ ವೃಷಭವಾಹನ 8 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ 7 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಹೀಗೆ ಈ 3 ಚಿತ್ರಗಳ ನಡುವೆ ಈ ಬಾರಿಯ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಜಿದ್ದಾಜಿದ್ದಿ ಏರ್ಪಡಲಿದ್ದು, ಯಾವ ಚಿತ್ರ ಹೆಚ್ಚು ಪ್ರಶಸ್ತಿಗಳನ್ನು ತನ್ನ ಚೀಲಕ್ಕೆ ಹಾಕಿಕೊಳ್ಳಲಿದೆ ಎಂಬ ಕುತೂಹಲ ಮೂಡಿತ್ತು. ಇನ್ನು ಸದ್ಯ ಪ್ರಶಸ್ತಿ ವಿತರಣೆ ಆರಂಭವಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಈ ಬಾರಿಯ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡದ ಪರ ಮೊದಲನೇ ಪ್ರಶಸ್ತಿಯನ್ನು ಬಾಚಿಕೊಳ್ಳುವುದರ ಮೂಲಕ ಖಾತೆಯನ್ನು ತೆರೆದಿದೆ.

ಖಾತೆ ತೆರೆದ ರಾಬರ್ಟ್
ಈ ಬಾರಿಯ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್‌ನಲ್ಲಿ 10 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದ ರಾಬರ್ಟ್ ಚಿತ್ರದ ಛಾಯಾಗ್ರಾಹಕ ಸುಧಾಕರ್ ರಾಜ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಬರ್ಟ್ ಚಿತ್ರದಲ್ಲಿನ ತನ್ನ ಅದ್ಭುತ ಕ್ಯಾಮೆರಾ ಕೈಚಳಕಕ್ಕೆ ಸುಧಾಕರ್ ರಾಜ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಉತ್ತಮ ಗೀತರಚನೆಕಾರ ವಾಸುಕಿ ವೈಭವ್
ಇನ್ನು ಈ ಸೈಮಾ ಕಾರ್ಯಕ್ರಮದಲ್ಲಿ ಕನ್ನಡದ ಎರಡನೇ ಪ್ರಶಸ್ತಿ ಕೂಡ ಘೋಷಣೆಗೊಂಡಿದ್ದು, ಅಣ್ಣಾವ್ರ ಮೊಮ್ಮಗಳು ಧನ್ಯ ರಾಮ್‌ಕುಮಾರ್ ಅಭಿನಯಿಸಿದ್ದ ನಿನ್ನ ಸನಿಹಕೆ ಚಿತ್ರದ ನೀ ಪರಿಚಯ ಹಾಡನ್ನು ಬರೆದಿದ್ದ ಗಾಯಕ ವಾಸುಕಿ ವೈಭವ್ ಕನ್ನಡ ವಿಭಾಗದ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಸದ್ಯ ಈ ಎರಡು ಪ್ರಶಸ್ತಿಗಳು ಮಾತ್ರ ಘೋಷಣೆಯಾಗಿದ್ದು, ಮುಂದೆ ಯಾರಿಗೆ ಪ್ರಶಸ್ತಿ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸೈಮಾ ಕಾರ್ಯಕ್ರಮಕ್ಕೆ ಆಗಮಿಸಿದ ಶಿವಣ್ಣ, ತರುಣ್ ಸುಧೀರ್
ಇನ್ನು ಈ ಸೈಮಾ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಹಾಗೂ ತರುಣ್ ಸುಧೀರ್ ಆಗಮಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಶಿವಣ್ಣ ಭಜರಂಗಿ 2 ಚಿತ್ರದ ಮೂಲಕ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್ ಆಗಿದ್ದು, ತರುಣ್ ಸುಧೀರ್ ರಾಬರ್ಟ್ ಚಿತ್ರದ ಮೂಲಕ ಅತ್ಯುತ್ತಮ ನಿರ್ದೇಶಕ ಕೆಟಗರಿಯಲ್ಲಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ಇಬ್ಬರ ಆಗಮನ ಸದ್ಯ ಪ್ರೇಕ್ಷಕರಲ್ಲಿ ಈ ಇಬ್ಬರಿಗೂ ಈ ಪ್ರಶಸ್ತಿಗಳು ಲಭಿಸಲಿವೆಯಾ ಎಂಬ ಕುತೂಹಲವನ್ನು ಹುಟ್ಟು ಹಾಕಿವೆ.


Click it and Unblock the Notifications











