SIIMA 2023: ಸೈಮಾ ಸಂಭ್ರಮದಲ್ಲಿ ಭಾಗಿಯಾಗಲು ಪತ್ನಿ ಜೊತೆಗೆ ದುಬೈಗೆ ತೆರಳಿದ ನಟ ರಿಷಬ್ ಶೆಟ್ಟಿ
ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಸಂಭ್ರಮಕ್ಕೆ ದುಬೈ ಸಿದ್ಧವಾಗಿದೆ. ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದಕ್ಷಿಣ ಭಾರತದ ತಾರೆಯರು ಒಬ್ಬೊಬ್ಬರೇ ದುಬೈಗೆ ತೆರಳುತ್ತಿದ್ದಾರೆ.
ದುಬೈಗೆ ಹಾರಿದ ರಿಷಬ್ ದಂಪತಿ
ಕಾಂತಾರ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ದುಬೈಗೆ ತೆರಳಿದ್ದಾರೆ. ಸೈಮಾ ಸಂಭ್ರಮದಲ್ಲಿ ಭಾಗಿಯಾಗಲು ತಮ್ಮ ಪತ್ನಿ ಪ್ರಗತಿ ಶೆಟ್ಟಿ ಜೊತೆಗೆ ದುಬೈಗೆ ಪ್ರಯಾಣ ಮಾಡಿದ್ದಾರೆ. ಈ ಬಾರಿ ಸೈಮಾ ಕನ್ನಡ ಸಿನಿಮಾ ಪಟ್ಟಿಗಳಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ ಕೂಡ ಇದೆ.

ದುಬೈಗೆ ತೆರಳಿರುವ ಫೋಟೋವನ್ನು ಹಂಚಿಕೊಂಡಿರುವ ಪ್ರಗತಿ ಶೆಟ್ಟಿ, ಯು ಆರ್ ಮೈ ಹ್ಯಾಪಿ ಪ್ಲೇಸ್ ಎಂದು ಕ್ಯಾಪ್ಶನ್ ಕೊಟ್ಟು ಹಾರ್ಟ್ ಎಮೋಜಿ ಸೇರಿಸಿದ್ದಾರೆ. ಇದರ ಜೊತೆಗೆ ನಟ ರಿಷಬ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಸೈಮಾ2023, ದುಬೈ ಅಗೈನ್ ಎಂಬ ಹ್ಯಾಶ್ಟ್ಯಾಗ್ ಹಾಕಿದ್ದಾರೆ.
ಕಾಂತಾರಕ್ಕೆ ಒಲಿಯಲಿದೆಯೇ ಸೈಮಾ ಅವಾರ್ಡ್?
2022ರಲ್ಲಿ ಬಿಡುಗಡೆಯಾದ ದಕ್ಷಿಣ ಭಾರತದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಸೈಮಾ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ತಿಂಗಳು ನಾಮಿನೇಷನ್ ಲಿಸ್ಟ್ ಪ್ರಕಟಿಸಲಾಗಿತ್ತು. ಕನ್ನಡ ಸಿನಿಮಾಗಳ ಪೈಕಿ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ನಿರ್ದೇಶನಕ ಕಾಂತಾರ ಸ್ಥಾನ ಪಡೆದುಕೊಂಡಿದೆ.

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಹೊಂಬಾಳೆ ಫಿಲ್ಮ್ಸ್‌ನ ಕಾಂತಾರ ಮತ್ತು KGF ಚಾಪ್ಟರ್- 2 ಎರಡೂ ಇವೆ. ಇವುಗಳ ಜೊತೆಗೆ ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್, ಇನ್ವೇನಿಯೋ ಒರಿಜಿನ್ ನಿರ್ಮಾಣದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಕೃಷ್ಣ ಟಾಕೀಸ್‌ನ ಲವ್ ಮಾಕ್‌ಟೇಲ್ 2, ಪರಂವಾ ಸ್ಟುಡಿಯೋಸ್‌ನ 777 ಚಾರ್ಲಿ ಕೂಡ ಪಟ್ಟಿಯಲ್ಲಿವೆ. ಈ ಬಾರಿ ಕಾಂತಾರ ಅಥವಾ KGF ಚಾಪ್ಟರ್- 2 ನಡುವೆ ಸಕತ್ ಕಾಂಪಿಟೇಷನ್ ಇದೆ ಎಂದು ಹೇಳಲಾಗುತ್ತಿದೆ.
SIIMA 2023
ಸೈಮಾ ಪ್ರಶಸ್ತಿಗಾಗಿ ರಿಷಬ್ ಶೆಟ್ಟಿ ಅವರ 'ಕಾಂತಾರ' ಮತ್ತು ಯಶ್ ಅವರ 'ಕೆಜಿಎಫ್ ಅಧ್ಯಾಯ 2' ನಾಮನಿರ್ದೇಶನಗಳಲ್ಲಿ ಮುನ್ನಡೆ ಸಾಧಿಸಿದ್ದು, 11 ಪ್ರತಿಷ್ಠಿತ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಪಡೆದುಕೊಂಡಿವೆ. ಹೀಗಾಗಿ ಕನ್ನಡದಲ್ಲಿ ಇವೆರಡರ ನಡುವೆ ಕಠಿಣ ಸ್ಪರ್ಧೆ ಇದೆ. ಸೈಮಾ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆಪ್ಟೆಂಬರ್ 15 ಮತ್ತು 16 ರಂದು ದುಬೈನಲ್ಲಿ ನಡೆಯಲಿದೆ.


Click it and Unblock the Notifications











