ಸರ್ಕಸ್ ದೀಪ..ಮೌನ ವೇದನೆ ; ಯಶ್ ‘ಟಾಕ್ಸಿಕ್’ನಲ್ಲಿನ ಕಿಯಾರಾ ಅಡ್ವಾಣಿ ಫಸ್ಟ್ ಲುಕ್- ಕತ್ತಲ ಲೋಕದಲ್ಲಿ ದಂತದ ಗೊಂಬೆ
ಕೆಲ ಚಿತ್ರಗಳೇ ಹಾಗೆ. ಆರಂಭದಿಂದ್ಲೇ ಕುತೂಹಲ ಹುಟ್ಟಿಸಿ ಬಿಡುತ್ತವೆ. ಯಶ್ ಅಭಿನಯದ ''ಟಾಕ್ಸಿಕ್'' ಇದೇ ಸಾಲಿಗೆ ಸೇರುವಂತಹ ಸಿನಿಮಾ. ಕಳೆದ ಡಿಸೆಂಬರ್‌ನಲ್ಲಿ ಅಧಿಕೃತವಾಗಿ ಘೋಷಿಸಲಾದ ಈ ಸಿನಿಮಾ ''ಕೆ.ಜಿ.ಎಫ್'' ಚಿತ್ರವನ್ನೂ ಮೀರಿಸುತ್ತೆ ಅನ್ನುವುದು ರಾಕಿಂಗ್ ಸ್ಟಾರ್ ಯಶ್ ಅವರ ಭಕ್ತಗಣದ ನಂಬಿಕೆ. ಇದಕ್ಕೆ ಪೂರಕವಾಗಿ ಯಶ್ ತಮ್ಮ ತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ ಕೂಡ.
ಇನ್ನು ''ಟಾಕ್ಸಿಕ್'' ಚಿತ್ರಕ್ಕೆ ಕೇವಲ ಕೆ.ವಿ.ಎನ್ ಸಂಸ್ಥೆ ಹಣ ಹೂಡುತ್ತಿಲ್ಲ. ಯಶ್ ಪಾಲು ಕೂಡ ನಿರ್ಮಾಣದಲ್ಲಿದೆ. ಇಷ್ಟೇ ಅಲ್ಲ..ಕೇವಲ ನಿರ್ಮಾಪಕ ಮಾತ್ರ ಅಲ್ಲ ಯಶ್ ಈ ಚಿತ್ರದ ಕಥಾ ಲೇಖಕ ಕೂಡ ಹೌದು. ಈ ಕಾರಣಕ್ಕೆ ತಮ್ಮ ಚಿತ್ರಕ್ಕೆ ಯಾರು ಬೇಕು ಯಾರು ಬೇಡ ಎಂದು ಅಳೆದು ತೂಗಿ ಯಶ್ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಹೆಕ್ಕಿ ಹೆಕ್ಕಿ ಹುಡುಕಿದ್ದಾರೆ.

ಆ ಪೈಕಿ ಬಾಲಿವುಡ್‌ನ ದಂತದ ಗೊಂಬೆ ಕಿಯಾರ ಅಡ್ವಾಣಿ ಕೂಡ ಒಬ್ಬರು. ಸದ್ಯ ಕಿಯಾರ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹಲವರ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಯಶ್ ಮತ್ತು ಕಿಯಾರಾ ಅವರ ಅಭಿಮಾನಿಗಳಿಗೆ ಈ ಫಸ್ಟ್ ಲುಕ್ ಕಿಕ್ ಕೊಡುತ್ತಿದೆ.
ಸರ್ಕಸ್ ಹಿನ್ನೆಲೆಯಲ್ಲಿ ಕಿಯಾರಾ ಫಸ್ಟ್ ಲುಕ್ ಪೋಸ್ಟರ್ ಮೂಡಿ ಬಂದಿದೆ. ಇವರ ಪಾತ್ರದ ಹೆಸರು ನಾದಿಯಾ. ಇನ್ನೂ ಕಿಯಾರಾ ಇಲ್ಲಿ ಕೇವಲ ಗ್ಲ್ಯಾಮರ್ ಗೊಂಬೆಯಲ್ಲ. ಫಸ್ಟ್ ಲುಕ್ ಈ ಸಂದೇಶವನ್ನು ಸ್ಪಷ್ಟವಾಗಿ ರವಾನೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸರ್ಕಸ್ ದೀಪಗಳ ಕೆಳಗೆ ನಿಂತಿರುವ ಕಿಯಾರಾ ಅಲಿಯಾಸ್ ನಾದಿಯಾ ಮುಖದಲ್ಲಿ ಇಲ್ಲಿ ದುಃಖ ಇದೆ. ವಿಷಾದ ಇದೆ. ಆತಂಕ ಇದೆ. ಸರ್ಕಸ್ ಇಲ್ಲಿ ಸಂತೋಷದ ಸಂಕೇತ ಅಲ್ಲ. ಬದಲಿಗೆ ಇಲ್ಲಿ ಭಾವನೆಗಳ ತೋಳಲಾಟ ಇದೆ.
ಇನ್ನು ಕಿಯಾರಾ ಅಡ್ವಾಣಿ ತಮ್ಮ ವೃತ್ತಿ ಬದುಕಿನಲ್ಲಿ ಮರ ಸುತ್ತುವ ಪಾತ್ರವನ್ನು ಮಾಡಿದ್ದಾರೆ. ''ಕಬೀರ್ ಸಿಂಗ್''.. ''ಶೇರ್‌ಶಾ''.. ಸೇರಿ ಮುಂತಾದ ಚಿತ್ರಗಳಲ್ಲಿ ಪಾತ್ರವನ್ನು ಜೀವಿಸಿ ತಮ್ಮ ಅಭಿನಯದ ಸಾಮರ್ಥ್ಯದ ಪ್ರದರ್ಶನವನ್ನು ಕೂಡ ಮಾಡಿದ್ದಾರೆ. ತಮ್ಮ ಅಭಿನಯದಿಂದ ಅಭಿಮಾನಿಗಳ ಹೃದಯವನ್ನು ಕೂಡ ಗೆದ್ದಿದ್ದಾರೆ. ಈ ಸಾಲಿಗೆ ಸೇರುವಂತಹ ಸಿನಿಮಾ ''ಟಾಕ್ಸಿಕ್'' ಫಸ್ಟ್ ಲುಕ್ ನೋಡುತ್ತಿದ್ದರೆ ಸ್ಪಷ್ಟವಾಗಿ ಗೊತ್ತಾಗುತ್ತೆ. ಕಿಯಾರಾ ಕೇವಲ ದಕ್ಷಿಣದಲ್ಲಿ ತಮ್ಮ ಬ್ರ್ಯಾಂಡ್ ವಿಸ್ತರಿಸುವ ಉದ್ದೇಶದಿಂದ ಈ ಚಿತ್ರ ಮಾಡಿಲ್ಲ. ಬದಲಿಗೆ ಇವರ ಪಾತ್ರಕ್ಕಿಲ್ಲಿ ತೂಕ ಇದೆ ಎನ್ನುವುದು ಕೂಡ ಈ ಫಸ್ಟ್ ಲುಕ್ ಸಾಬೀತು ಮಾಡಿದೆ.

ಇನ್ನು ''ಕೆಜಿಎಫ್ ಚಾಪ್ಟರ್ 2'' ನಂತರ ''ಟಾಕ್ಸಿಕ್'' ಚಿತ್ರಕ್ಕೆ ಜಾತಕ ಪಕ್ಷಿಯಂತೆ ಹಲವರು ಕಾಯುತ್ತಿದ್ದಾರೆ. ಯಶ್ ಈ ಬಾರಿ ಯಾವ ಕಥೆ ಹೊತ್ತು ಬರುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಬೆಟ್ಟದಷ್ಟು ನಿರೀಕ್ಷೆಯನ್ನು ಈ ಚಿತ್ರದ ಮೇಲೆ ಇಟ್ಟುಕೊಂಡಿದ್ದಾರೆ. ಸದ್ಯ ಬಿಡುಗಡೆಯಾದ ಫಸ್ಟ್ ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಅಂದ್ಹಾಗೇ ಯಶ್ ಈ ಬಾರಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಬೆನ್ನತ್ತಿದಂತೆ ಕಾಣುತ್ತಿಲ್ಲ. ಬದಲಿಗೆ ಪ್ರೇಕ್ಷಕರ ಮನಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೇ ಉಳಿಯುವಂತಹ ಸಿನಿಮಾ ಮಾಡುವ ಪ್ರಯತ್ನವನ್ನು ಮಾಡಿದಂತೆ ಇದೆ ಎಂಬ ಅಭಿಪ್ರಾಯ ಕೂಡ ಈ ಫಸ್ಟ್ ಲುಕ್ ಬಿಡುಗಡೆಯಾದ ನಂತರ ವ್ಯಕ್ತವಾಗುತ್ತಿದೆ.
ಇನ್ನುಳಿದಂತೆ ರಾಷ್ಟ್ರ ಪ್ರಶಸ್ತಿ ವಿಜೇತ ಕ್ಯಾಮರಾಮ್ಯಾನ್ ರಾಜೀವ್ ರವಿ ಈ ಚಿತ್ರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಜ್ವಲ್ ಕುಲಕರ್ಣಿ ಸಂಕಲನ ಮತ್ತು ಟಿ ಪಿ ಅಬಿದ್ ನಿರ್ಮಾಣ ವಿನ್ಯಾಸ ಚಿತ್ರಕ್ಕಿದ್ದು ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ (ಜಾನ್ ವಿಕ್) ಮತ್ತು ಅನ್ಬರಿವ್ ಈ ಚಿತ್ರದ ಸಾಹಸ ಸನ್ನಿವೇಶಗಳನ್ನು ಸಂಯೋಜನೆ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಈ ಚಿತ್ರದ ಚಿತ್ರೀಕರಣ ನಡೆದಿರುವುದು ವಿಶೇಷ. ಬೇರೆ ಭಾಷೆಗಳಿಗೆ ಡಬ್ ಆಗಿ ಈ ಚಿತ್ರ ತೆರೆಗೆ ಬರಲಿದೆ. ಮಾರ್ಚ್ 19ರಂದು ಬೆಳ್ಳಿಪರದೆಯ ಮೇಲೆ ''ಟಾಕ್ಸಿಕ್'' ಧಗಧಗಿಸಲಿದೆ.


Click it and Unblock the Notifications











