»   » ಮೈಸೂರಿನ ಸಿರಿವಂತ ಲಲಿತಮಹಲಿನಲ್ಲಿ ‘ಸೀಮಂತ’ದ ಸಂಭ್ರಮ

ಮೈಸೂರಿನ ಸಿರಿವಂತ ಲಲಿತಮಹಲಿನಲ್ಲಿ ‘ಸೀಮಂತ’ದ ಸಂಭ್ರಮ

Posted By: Super
Subscribe to Filmibeat Kannada

ಅರಮನೆಗಳ ನಗರಿ ಮೈಸೂರಿನ ಲಲಿತ ಮಹಲ್‌ನಲ್ಲಿ ಕಳೆದ ವಾರ ಭಾರಿ ಸಡಗರ, ಸಂಭ್ರಮ. ಅರಮನೆ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ದೊಡ್ಡ ದೊಡ್ಡ ಹರಿವಾಣಗಳ ತುಂಬೆಲ್ಲಾ ಭಕ್ಷ್ಯಭೋಜ್ಯಗಳು, ಬಣ್ಣಬಣ್ಣದ ಹೂವುಗಳು, ಹರಿಶಿನ - ಕುಂಕುಮ ತುಂಬಿದ ತಟ್ಟೆ ಹೊತ್ತು ಸಡಗರದಿಂದ ಓಡಾಡುತ್ತಿದ್ದ ಸಾಲಂಕೃತ ಸುಂದರಿಯರು.

ಅದೇನು ಸಂಭ್ರಮ - ಸಡಗರ. ಅದೊಂದು ವೈಭವದ ಸೀಮಂತ ಸಮಾರಂಭ. ಸಿಂಹಾದ್ರಿ ವಂಶದ ಕಿರಿಯ ಸೊಸೆ ಅರ್ಥಾತ್‌ ಜಮೀನ್ದಾರ ಎರಡನೇ ಮಗನ ಹೆಂಡತಿ 7 ತಿಂಗಳ ಗರ್ಭಿಣಿ. ಬಸುರಿಯ ಬಯಕೆ ತೀರಿಸುವ ಸೀಮಂತಕ್ಕೆ ಸಕಲ ಸಜ್ಜು. ಝಗಮಗಿಸುವ ಬೆಳಕಲ್ಲಿ ಸರಿಸಾಟಿಯಿಲ್ಲದ ಅದ್ಧೂರಿಯ ಅಲಂಕಾರ.

ಊರಿನ ಮುತ್ತೆೈದೆಯರೆಲ್ಲಾ ಸೇರಿ 'ಬರ್ತಾನವ್ವ ಭೂಪ ಬರ್ತಾನವ್ವ, ಬಂಗಾರಿ ಮಡಿಲಿನಲಿ.." ಎಂದು ಹಾಡಿದರು. ಸಿಂಹಾದ್ರಿ ವಂಶದಲ್ಲೊಬ್ಬ ಹೊಸ ಗಂಡು ಅತಿಥಿ ಬರುವನೆಂದು ಹರಸಿದರು. ಇದಿಷ್ಟೂ ವಿಷ್ಣುವರ್ಧನ್‌ ತ್ರಿಪಾತ್ರದಲ್ಲಿ ನಟಿಸುತ್ತಿರುವ 'ಸಿಂಹಾದ್ರಿಯ ಸಿಂಹ" ಚಿತ್ರದ ಗೀತೆಯ ದೃಶ್ಯದ ಚಿತ್ರೀಕರಣದ ವೈಶಿಷ್ಟ್ಯ.

ಗ್ರಾಮೀಣ ಬದುಕಿನ ಸೊಗಡಿನ ಜೊತೆಗೆ ಜಮೀನ್ದಾರಿಕೆಯ ವೈಭವವನ್ನು ಕೌಟುಂಬಿಕ ಸೂಕ್ಷ್ಮತೆಯಿಂದ ಸಮೀಕರಿಸಿ ಹೆಣೆದಿರುವ ಕಥೆಯುಳ್ಳ ಈ ಚಿತ್ರವನ್ನು ಎಸ್‌. ನಾರಾಯಣ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಸಂಭಾಷಣೆ ಬರೆದಿರುವವರೂ ಅವರೇ. ಗೀತ ರಚನೆಯನ್ನೂ ಅವರೇ ಮಾಡಿದ್ದಾರೆ. (ಕನ್ನಡದಲ್ಲಿ ಈಹೊತ್ತು ಒನ್‌ಮ್ಯಾನ್‌ ಷೋ ಟ್ರೆಂಡ್‌ ಬೆಳೀತಿದೆ)

ಸಿಂಹಾದ್ರಿಯ ಸಿಂಹನಿಗೆ ಕರಿಘಟ್ಟ, ಸೋಮನಾಥಪುರ, ಊಟಿಯಲ್ಲಿ ಚಿತ್ರೀಕರಣ ನಡೆದಿದೆ. ಸಂಪತ್‌ರಾಜ್‌ ನೃತ್ಯ, ದೇವಾ ಸಂಗೀತ ನಿರ್ದೇಶನ ಇರುವ ಚಿತ್ರದಲ್ಲಿ ವಿಷ್ಣುವರ್ಧನ್‌, ಭಾನುಪ್ರಿಯ, ಮೀನಾ, ಅಭಿಜಿತ್‌, ಶಿವರಾಂ, ಮುಖ್ಯಮಂತ್ರಿ ಚಂದ್ರು, ಶೋಭರಾಜ್‌, ರಮೇಶ್‌ಭಟ್‌, ತಾರಾ, ಉಮಾಶ್ರೀ ಮೊದಲಾದವರಿದ್ದಾರೆ.

English summary
Vishnu triple acting in Simhadriya simha

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada