ಹೈದರಾಬಾದ್‌ವಿರುದ್ಧ ಸೋತ ಆರ್‌ಸಿಬಿ: ಸಿಂಪಲ್ ಸುನಿ ಹೇಳಿದ್ದೇನು?
ಐಪಿಎಲ್ 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತ ತಲುಪಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್‌ಸಿಬಿ ಟಾಪ್ ಎರಡನೇ ಸ್ಥಾನದ ಮೇಲೆ ಕಣ್ಣಿಟ್ಟಿತ್ತು. ಬುಧವಾರ ರಾತ್ರಿ ಸನ್‌ರೈಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಗೆದ್ದಿದ್ದರೆ ಮೊದಲು ಅಥವಾ ಎರಡನೇ ಸ್ಥಾನ ತಲುಪುವಲ್ಲಿ ಸಫಲವಾಗುತ್ತಿದ್ದರು. ಆರ್‌ಸಿಬಿ ಅಭಿಮಾನಿಗಳು ಸಹ ಇದೇ ಲೆಕ್ಕಾಚಾರದಲ್ಲಿದ್ದರು. ಆದರೆ, ಎಸ್‌ಆರ್‌ಎಚ್ ವಿರುದ್ಧದ ಪಂದ್ಯವನ್ನು ಸೋತು ನಿರಾಸೆ ಮೂಡಿಸಿದರು. ಪ್ಲೇ ಆಫ್ ತಲುಪಿದ್ದರೂ ಟಾಪ್ ಎರಡು ಸ್ಥಾನ ತಲುಪಲು ಈ ಗೆಲುವು ಅಗತ್ಯವಿತ್ತು.
ಎಬಿ ಡಿವಿಲಿಯರ್ಸ್ ಕ್ರೀಸ್‌ನಲ್ಲಿದ್ದರೂ ಆರ್‌ಸಿಬಿ ಪಂದ್ಯ ಸೋತಿದ್ದು ನಿಜಕ್ಕೂ ಬೆಂಗಳೂರಿಗರಿಗೆ ಬೇಸರ ಉಂಟು ಮಾಡಿದೆ. ಆದರೆ ಆರ್‌ಸಿಬಿ ಪ್ಲೇ ಆಫ್‌ಗೆ ತಲುಪಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಹೈದರಾಬಾದ್ ವಿರುದ್ಧ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಸೋತ ನಂತರ ಚಲನಚಿತ್ರ ನಿರ್ದೇಶಕ ಹಾಗೂ ಕ್ರಿಕೆಟ್ ಪ್ರೇಮಿ ಸಿಂಪಲ್ ಸುನಿ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

''ಮೊದಲೇ ಹೇಳಬೇಕಿತ್ತು ಅಭಿಮಾನಿಗಳಿಗೆ,
#ಪ್ಲೇಆಫ್‌ಗೆ ಹೋದರೆ ಒಂದ್ ಮ್ಯಾಚ್ ದೇವರಿಗೆ ಬಿಡ್ತೀನಿ ಅಂತ..
ಹಳೇ ಆರ್‌ಸಿಬಿ ಚಾಳಿ
ಆದರು #ಎಸ್‌ಆರ್‌ಎಚ್ ಪರ ಚೆಂದ ಬ್ಯಾಟಿಂಗ್ ಮಾಡಿದೆ ಪಡಿಕ್ಕಳ್..
ಇನ್ ಮಿಕ್ಕಿದ್ದು ಸಾಮಾನ್ಯ
ಚಾಹಲ್..ಕಮಾಲ್
ಪಟೇಲ್..ಹರ್ಷ
ಶಹಬ್ಬಾಸ್..ಶಬ್ಬಾಜ಼್
ಮ್ಯಾಕ್ಸಿ..ಸೆಕ್ಸಿ'' ಎಂದು ಸುನಿ ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಆಟದ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 52 ಎಸೆತಗಳಲ್ಲಿ 41 ಬಾರಿಸುವ ಮೂಲಕ ಕಡಿಮೆ ಸ್ಟ್ರೈಕ್‌ರೇಟ್ ಹೊಂದಿದ್ದರು. ಮತ್ತು ನಿಧಾನಗತಿಯ ಬ್ಯಾಟಿಂಗ್ ಪಂದ್ಯದ ಸೋಲಿಗೆ ಕಾರಣವಾಯಿತು ಎಂದು ಟೀಕೆ ಎದುರಾಗಿದೆ.
ಪಂದ್ಯದ ಸ್ಕೋರ್ ವಿವರ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್, ಜೇಸನ್ ರಾಯ್ 44, ವೃದ್ಧಿಮಾನ್ ಸಹಾ 13, ಕೇನ್ ವಿಲಿಯಮ್ಸನ್ 31, ಪ್ರಿಯಂ ಗರ್ಗ್ 15, ಅಬ್ದುಲ್ ಸಮದ್ 1, ಅಭಿಷೇಕ್ ಶರ್ಮಾ 13, ಜೇಸನ್ ಹೋಲ್ಡರ್ 16, ರಶೀದ್ ಖಾನ್ 7 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 141 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ 5, ದೇವದತ್ ಪಡಿಕ್ಕಲ್ 41, ಶ್ರೀಕರ್ ಭಾರತ್ 12, ಗ್ಲೆನ್ ಮ್ಯಾಕ್ಸ್‌ವೆಲ್ 40, ಎಬಿ ಡಿವಿಲಿಯರ್ಸ್ 19, ಡೇನಿಯಲ್ ಕ್ರಿಶ್ಚಿಯನ್ 1, ಶಹಬಾಜ್ ಅಹ್ಮದ್ 14, ಜಾರ್ಜ್ ಗಾರ್ಟನ್ 2 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 137 ರನ್ ಗಳಿಸಿತು.
ಆರ್‌ಸಿಬಿ ಪಂದ್ಯ ಗೆಲ್ಲಲು ಕೊನೆಯ ಓವರ್‌ನಲ್ಲಿ 13 ರನ್ ಬೇಕಿತ್ತು. ಭುವನೇಶ್ವರ್ ಕುಮಾರ್ ಬೌಲಿಂಗ್ ಮಾಡಿದರು. ಜಾರ್ಜ್ ಗಾರ್ಟನ್ ಮತ್ತು ಎಬಿ ಡಿವಿಲಿಯರ್ಸ್ ಕ್ರೀಸ್‌ನಲ್ಲಿದ್ದರು. ಆರ್‌ಸಿಬಿ 4 ರನ್‌ಗಳ ಸೋಲು ಕಾಣಬೇಕಾಯಿತು.
ಸಿಂಪಲ್ ಸುನಿ ಚಿತ್ರಗಳು
2019ರಲ್ಲಿ ಬಂದ 'ಬಜಾರ್' ಚಿತ್ರದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸಖತ್' ಎನ್ನುವ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಬಹುತೇಕ ಮುಗಿದಿದೆ. ಗಣೇಶ್ ಜೊತೆ ಅವರ ಪುತ್ರ ವಿಹಾನ್ ಸಹ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಜೊತೆ ಗಣೇಶ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. 'ದಿ ಸ್ಟೋರಿ ಆಫ್ ರಾಯಗಢ' ಹೆಸರಿನಲ್ಲಿ ಚಿತ್ರ ಶುರುವಾಗಿದ್ದು, ಸದ್ಯಕ್ಕೆ ಪೋಸ್ಟರ್‌ಗಳಿಂದ ಸದ್ದು ಮಾಡ್ತಿದೆ.
ಈ ಎರಡು ಚಿತ್ರಗಳಿಗು ಮುಂಚೆ ಶರಣ್ ಅಭಿನಯದ 'ಅವತಾರ್ ಪುರುಷ' ಚಿತ್ರ ಪೂರ್ಣಗೊಳಿಸಿ ಬಿಡುಗಡೆಗೆ ಕಾಯ್ತಿದ್ದಾರೆ. ಜೊತೆಗೆ ರಾಬಿನ್‌ಹುಡ್ ಎನ್ನುವ ಚಿತ್ರವನ್ನು ಘೋಷಣೆ ಮಾಡಿದ್ದಾರೆ.


Click it and Unblock the Notifications











