ನಾಯಕಿಯಾದ ಗಾಯಕಿ ಅನನ್ಯಾ ಭಟ್: ಸೇನಾಪುರ ಟೀಸರ್ ಬಿಡುಗಡೆ
'ಮಾದೇವ' ಹಾಡಿನ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದ ಅನನ್ಯಾ ಭಟ್ ಈಗ ಕನ್ನಡದ ಬೇಡಿಕೆಯ ಗಾಯಕಿ. ಸಂಗೀತ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವಾಗಲೇ ಅನನ್ಯಾ ಭಟ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಅನನ್ಯಾ ಭಟ್ 'ಸೇನಾಪುರ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಟ್ರೇಲರ್ ಇಂದು (ಸೆಪ್ಟೆಂಬರ್ 24)ಕ್ಕೆ ಬಿಡುಗಡೆ ಆಗಿದೆ. ಈ ಸಿನಿಮಾವು ಸತ್ಯ ಘಟನೆಗಳ ಮೇಲೆ ಆಧಾರಿತವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಬಿಸಿಲು ನಾಡು ಬಳ್ಳಾರಿಯ ಗಣಿ ಒಡಲಲ್ಲಿ ನಡೆದಿದ್ದ ವಿದ್ಯಾಮಾನಗಳ ಸುತ್ತ ನಡೆದಂತ ಒಂದಷ್ಟು ನೈಜ ಅಂಶಗಳನ್ನು 'ಸೇನಾಪುರ' ಚಿತ್ರದಲ್ಲಿ ಬಳಸಲಾಗಿದೆ. ಕತೆ ಬರೆದು ನಿರ್ದೇಶನ ಮಾಡಿರುವುದು ಕುಂದಾಪುರ ಗುರುಸಾವನ್. ಇವರಿಗೆ ಇದು ಮೊದಲ ಸಿನಿಮಾ.

ಗುರುಪ್ರಸಾದ್ ಹೇಳಿರುವಂತೆ 'ಸೇನಾಪುರ'ದ ಕತೆಯನ್ನು ವೆಬ್‌ಸೀರೀಸ್‌ಗೆ ಎಂದು ಹೆಣೆಯಲಾಗಿತ್ತು, ಮುಂದೆ ಅದು ಸಿನಿಮಾ ಕತೆಯಾಗಿ ರೂಪಾಂತರಗೊಂಡಿತು. ಸಮಾಜ ಮತ್ತು ಪ್ರಕೃತಿ ಎಲ್ಲರಿಗೂ ಎಲ್ಲವನ್ನು ಸಮನಾಗಿ ನೀಡಿರುತ್ತದೆ. ಇವನು ಶ್ರೀಮಂತ, ಬಡವ ಎಂದು ಬೇಧಬಾವ ತೋರಿಸುವುದಿಲ್ಲ. ನಾವು ಅದನ್ನು ವರ್ಗ ಮಾಡಿಕೊಂಡು ಬದುಕುತ್ತಿದ್ದೇವೆ. ಪ್ರಕೃತಿ, ಸಮಾಜ, ಭೂಮಿ, ನೀರು ಅಂತ ಬಂದಾಗ ನಾವು ಹೆಣ್ಣಿಗೆ ಗೌರವ ಕೊಡುತ್ತೇವೆ. ಅದಕ್ಕಾಗಿ ಆಕೆಯಿಂದಲೇ ಕತೆಯನ್ನು ಹೇಳಿಸಲು ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ ಗುರುಪ್ರಸಾದ್.
ಖ್ಯಾತ ಗಾಯಕಿ, ರಂಗಭೂಮಿ ಹಿನ್ನಲೆಯಿರುವ ಅನನ್ಯ ಭಟ್ ಮೊದಲ ಬಾರಿ ಮಹಿಳಾ ಪ್ರಧಾನ ಕತೆಯಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿರುವುದರ ಜೊತೆಗೆ ಎರಡು ಹಾಡುಗಳಿಗೆ ಸಂಗೀತದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಚಿತ್ರೀಕರಣ ಅನುಭವಗಳನ್ನು ಹಂಚಿಕೊಂಡ ಅನನ್ಯಾ ಭಟ್, ಟೀಸರ್‌ನಲ್ಲಿ ಹಿನ್ನಲೆ ಧ್ವನಿ ನೀಡಿದ್ದು ಛಾಲೆಂಜಿಂಗ್ ಆಗಿತ್ತು ಎಂದರು.
ಭಾವನೆಗಳ ಹೋರಾಟಗಳು, ಅಸಹನೆಯ ಯುದ್ದವು ಇದೆ. ಶಕ್ತರ ಹೊಡೆತ ಪವರ್‌ಫುಲ್ ಆಗಿರುತ್ತೆ. ಅದರೆ ಹಸಿದವರ ಹೊಡೆತ ರೆಬೆಲ್ ಆಗಿರುತ್ತೆ. ಶಕ್ತ-ಅಶಕ್ತರ ನಡುವಿನ ರಣರಂಗವೇ 'ಸೇನಾಪುರ' ಎನ್ನುವ ಡೈಲಾಗ್ ಟೀಸರ್‌ನಲ್ಲಿದೆ. ಅಮಿತ್ ಕುಮಾರ್ ಮತ್ತು ರಾಹುಲ್ ದೇವ್ ಜಂಟಿಯಾಗಿ ವಿಮ್‌ಲಾಸ್ ಎಂಟರ್‌ಟೈನ್‌ಮೆಂಟ್ ಹಾಗೂ ಅಂಸ ಕ್ರಿಯೇಶನ್ಸ್ ಮೂಲಕ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ತಾರಾಂಗಣದಲ್ಲಿ ದಿನೇಶ್ ಮಂಗಳೂರು, ಬಿ.ಎಂ.ಗಿರಿರಾಜ್, ಸಿಂಧೂ, ಶೇಖರ್‌ರಾಜ್, ರೀನ, ಅಮೂಲ್ಯ, ಪರಮೇಶ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಪ್ರಶಾಂತ್‌ಸಾಗರ್, ಅರ್ಜುನ್ ಸಂಕಲನ, ಪ್ರಮೋದ್ ಮರವಂತೆ ಸಾಹಿತ್ಯ, ಅರ್ಜುನ್ ಶ್ರೀನಿವಾಸಯ್ಯ ಸಂಕಲನವಿದೆ. ಮಂಗಳೂರು, ಸಂಪೆಕಟ್ಟೆ ತಾಣದಲ್ಲಿ ಚಿತ್ರೀಕರಣ ನಡೆಸಿ, ಸದ್ಯ ಸಿನಿಮಾದ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.


Click it and Unblock the Notifications











