'ಡೆವಿಲ್' ಚಿತ್ರದ "ಇದ್ರೇ ನೆಮ್ದಿಯಾಗ್ ಇರ್ಬೇಕ್" ಸಾಂಗ್ ಗಾಯಕ ಯಾರು? ಆತನ ಹಿನ್ನೆಲೆ ಏನು?
ಪ್ರಕಾಶ್ ನಿರ್ದೇಶದಲ್ಲಿ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಫಸ್ಟ್ ಸಾಂಗ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. "ಇದ್ರೇ ನೆಮ್ದಿಯಾಗ್ ಇರ್ಬೇಕ್" ಎಂದು ಶುರುವಾಗುವ ಸಾಂಗ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಒಂದೇ ಸಾಲಿನಿಂದ ಬಹಳ ಕುತೂಹಲ ಹುಟ್ಟಾಕ್ಕಿದೆ.
ಅಕ್ಟೋಬರ್ ಕೊನೆಗೆ 'ಡೆವಿಲ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಅಧಿಕೃತವಾಗಿ ಸಿನಿಮಾ ರಿಲೀಸ್ ಡೇಟ್ ರಿವೀಲ್ ಆಗಿಲ್ಲ. ಗಣೇಶ್ ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಬಹುದು ಎನ್ನುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ "ಇದ್ರೇ ನೆಮ್ದಿಯಾಗ್ ಇರ್ಬೇಕ್" ಸಾಂಗ್ ಕೇಳೋಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ದರ್ಶನ್ ಮಾತನಾಡಿದ್ದಾರೆ ಎನ್ನಲಾಗಿದ್ದ ವೈರಲ್ ಆಡಿಯೋದಲ್ಲಿರುವ ಸಾಲನ್ನು ಪ್ರಕಾಶ್ ಈ ಹಾಡಿಗೆ ಬಳಸಿಕೊಂಡಿದ್ದಾರೆ. ಇನ್ನು ಸಾಂಗ್ ಹಾಡಿರೋದು ಯಾರು? ಸಾಹಿತ್ಯ ಬರೆದಿರುವುದು ಯಾರು? ಎನ್ನುವ ಸಸ್ಪೆನ್ಸ್ ಕೂಡ ಇದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಆದರೆ ಗಾಯಕ ಯಾರು ಎನ್ನುವುದನ್ನು ದರ್ಶನ್ ಅಭಿಮಾನಿಗಳು ಹುಡುಕಿಬಿಟ್ಟಿದ್ದಾರೆ. ಬಹುಭಾಷಾ ಗಾಯಕ ದೀಪಕ್ ಬ್ಲೂ ಈ ಹಾಡನ್ನು ಹಾಡಿದ್ದಾರೆ ಎನ್ನಲಾಗ್ತಿದೆ.
ಗಾಯಕ ದೀಪಕ್ ಬ್ಲೂ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ "ಇದ್ರೇ ನೆಮ್ದಿಯಾಗ್ ಇರ್ಬೇಕ್" ಸಾಂಗ್ ರಿಲೀಸ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನನ್ನ ಹೊಸ ಸಾಂಗ್ ಬಿಡುಗಡೆಗಾಗಿ ಕಾತರದಿಂದ ಕಾಯ್ತಿದ್ದೀನಿ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ ಸಹ ಹಾಕಿಕೊಂಡಿದ್ದಾರೆ. ದೀಪಕ್ ಈಗಾಗಲೇ ತೆಲುಗು, ತಮಿಳು, ಕನ್ನಡ ಗೀತೆಗಳಿಗೆ ದನಿಯಾಗಿದ್ದಾರೆ. ಕನ್ನಡಕ್ಕೆ ಡಬ್ ಆಗಿದ್ದ 'ಅಣ್ಣಾತ್ತೆ', 'ಕಂಗುವ' ಚಿತ್ರದ ಹಾಡುಗಳನ್ನು ಅವರು ಹಾಡಿದ್ದರು. ಇತ್ತೀಚೆಗೆ ಬಂದಿದ್ದ 'ಜ್ಯೂನಿಯರ್' ಚಿತ್ರದ ಆಂಥೆಮ್‌ಗೂ ದನಿಯಾಗಿದ್ದರು. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದ ಟೈಟಲ್ ಸಾಂಗ್ ಅನ್ನು ತೆಲುಗು, ತಮಿಳಿನಲ್ಲಿ ದೀಪಕ್ ಅವರಿಂದ ಅಜನೀಶ್ ಹಾಡಿಸಿದ್ದರು.

'KGF'-2 ಚಿತ್ರದ 'ತೂಫಾನ್' ಸಾಂಗ್ ತಮಿಳು ವರ್ಷನ್ ಹಾಡಿದ್ದು ಇದೇ ದೀಪಕ್ ಬ್ಲ್ಯೂ. ಇನ್ನು 'ಪುಷ್ಪ'-2 ಚಿತ್ರದ 'ಪುಷ್ಪ ಪುಷ್ಪ' ಹಾಡಿಗೂ ದನಿಯಾಗಿದ್ದರು. ಸದ್ಯ "ಇದ್ರೇ ನೆಮ್ದಿಯಾಗ್ ಇರ್ಬೇಕ್" ಎನ್ನುತ್ತಾ 'ಡೆವಿಲ್' ಚಿತ್ರಕ್ಕೆ ಹಾಡಿದ್ದಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಲಿರಿಕ್ಸ್ ಯಾರು ಬರೆದಿದ್ದಾರೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಅಂದಹಾಗೆ ಗಾಯಕ ದೀಪಕ್ ಬ್ಲ್ಯೂ ಚೆನ್ನೈ ಮೂಲದವರು. ಅಲ್ಲೇ ಹುಟ್ಟಿ ಬೆಳೆದವರು. ಆದರೆ ತಂದೆ ಆಂಧ್ರ ಹಾಗೂ ತಾಯಿ ಕರ್ನಾಟಕ ಮೂಲದವರು. ಹಾಗಾಗಿ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಮನೆಯಲ್ಲಿ ತಂದೆ, ಅಜ್ಜಿ ಜೊತೆ ತೆಲುಗಿನಲ್ಲಿ ತಾಯಿ ಹಾಗೂ ತಂಗಿ ಜೊತೆ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಕಾಂತಾರ', 'ವಿಕ್ರಾಂತ್ ರೋಣ' ಬಳಿಕ ಅವರ ಸಂಗೀತದ ಆಲ್ಬಮ್ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ 'ಡೆವಿಲ್' ಟೀಸರ್‌ಗಳಲ್ಲಿ ಬಿಜಿಎಂ ಅಭಿಮಾನಿಗಳಿಗೆ ಇಷ್ಟವಾಗಿದೆ. ದರ್ಶನ್ ಅಭಿಮಾನಿಗಳು "ಇದ್ರೇ ನೆಮ್ದಿಯಾಗ್ ಇರ್ಬೇಕ್" ಹಾಡನ್ನು ದೊಡ್ಡದಾಗಿ ಸ್ವಾಗತಿಸಲು ಕಾಯುತ್ತಿದ್ದಾರೆ. ಈ ಸಾಲುಗಳನ್ನು ಬರೆದ ಟೀ-ಶರ್ಟ್‌ಗಳು ವೈರಲ್ ಆಗುತ್ತಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಾಂಗ್ ರಿಲೀಸ್ ಆಗಬೇಕಿತ್ತು. ಅಷ್ಟರಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಾಯಿತು. ಹಾಗಾಗಿ ಸಾಂಗ್ ರಿಲೀಸ್ ಮುಂದೂಡಲಾಗಿತ್ತು. ಆಗಸ್ಟ್ 24ರಂದು ಬೆಳಗ್ಗೆ 10.05 ನಿಮಿಷಕ್ಕೆ ಸಾಂಗ್ ರಿಲೀಸ್ ಮಾಡುವುದಾಗಿ ಹೊಸ ದಿನಾಂಕ ನಿಗದಿಯಾಗಿದೆ.


Click it and Unblock the Notifications











