ಅಣ್ಣಾವ್ರ ಕಂಠವನ್ನು ಅಪಹಾಸ್ಯ ಮಾಡಿದ್ದ ಗಾಯಕ.. ಈಗ ಹೇಳುತ್ತಿರುವುದು ಏನು?
ಗಾಯಕ ಸಂಜಯ್ ನಾಗ್ ಎಂಬುವವರು ಇತ್ತೀಚೆಗೆ ಗಾನಗಂಧರ್ವ ಡಾ. ರಾಜ್‌ಕುಮಾರ್ ಬಗ್ಗೆ ಮಾಡಿದ್ದ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. "ಡಾ. ರಾಜ್‌ಕುಮಾರ್ ಅವರು ಬಹುಶಃ ಅತ್ಯುತ್ತಮ ನಟನಾಗಿರಬಹುದು. ಆದರೆ, ಭಯಾನಕ ಗಾಯಕ" ಎಂದು 'X' ವೇದಿಕೆಯಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಕನ್ನಡಿಗರು ತಿರುಗೇಟು ನೀಡಿದ್ದರು.
ಅಣ್ಣಾವ್ರ ಗಾಯನದ ಬಗ್ಗೆ ವ್ಯಂಗ್ಯವಾಡಿದ್ದ ಸಂಜಯ್ ನಾಗ್‌ಗೆ ತಕ್ಕ ಪಾಠ ಕಲಿಸಿದ್ದರು. ಆಕ್ರೋಶ ಹೆಚ್ಚಾಗುತ್ತಿದ್ದಂತೆ ತನ್ನ ಟ್ವಿಟರ್ ಅಕೌಂಟ್ ಡೀ ಆಕ್ಟೀವೇಟ್ ಮಾಡಿ ಸಂಜಯ್ ಸೈಲೆಂಟ್ ಆಗಿದ್ದರು. ಆದರೂ ಆತ ಮಾಡಿದ್ದ ಟ್ವೀಟ್ ಸ್ಕ್ರೀನ್ ಶಾಟ್ ವೈರಲ್ ಆಗಿತ್ತು. ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಣ್ಣಾವ್ರ ಬಗ್ಗೆಯೇ ಆತನ ಹೇಳಿಕೆಗೆ ನೆಟ್ಟಿಗರು ಕಿಡಿ ಕಾರಿದ್ದರು.

ಇದೀಗ ಸಂಜಯ್ ನಾಗ್ ತಮ್ಮ ಟ್ವಿಟ್ಟರ್ ಅಕೌಂಟ್ ಆಕ್ಟಿವೇಟ್ ಮಾಡಿದ್ದಾರೆ. ಜೊತೆಗೆ ಕನ್ನಡದಲ್ಲೇ ಒಂದು ಪೋಸ್ಟ್ ಮಾಡಿ ಅಣ್ಣಾವ್ರ ಅಭಿಮಾನಿಗಳು ಹಾಗೂ ದೊಡ್ಮನೆಯವರಿಗೆ ಕ್ಷಮೆ ಕೇಳಿದ್ದಾರೆ. ಆದರೂ ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೊದಲು ಕನ್ನಡ ಕಲಿ, ಟ್ವಿಟರ್ ಅಕೌಂಟ್ ಡಿಲೀಟ್ ಮಾಡಿ ಸುಮ್ಮನಾಗಿಬಿಡು, ಅಣ್ಣಾವ್ರ ಅಭಿಮಾನಿಗಳ ಕೈಗೆ ಸಿಗಲೇಬೇಡ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
"ಡಾ. ರಾಜ್‌ಕುಮಾರ್ ಅವರ ಕುರಿತು ನಾನು ಬರೆದ ಮಾತುಗಳಿಗೆ ಮನಃಪೂರ್ವಕ ಕ್ಷಮೆ ಯಾಚಿಸುತ್ತೇನೆ. ನಾನು ಚಿಕ್ಕಂದಿನಿಂದ ಅಣ್ಣಾವ್ರ ಅಭಿಮಾನಿ ಹಾಗು ಅಣ್ಣಾವ್ರ ಬಗ್ಗೆ ಅಪಾರವಾದ ಗೌರವವಿದೆ. ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವುದಲ್ಲ. ಅಚಾತುರ್ಯವಾಗಿ ಹೇಳಿದ ಮಾತಿಗೆ ಅಣ್ಣಾವ್ರ ಪ್ರತಿಯೊಬ್ಬ ಅಭಿಮಾನಿ ದೇವರಿಗೂ ಮತ್ತು ದೊಡ್ಮನೆಯವರಿಗೂ ವೈಯಕ್ತಿಕ ಕ್ಷಮೆ ಯಾಚಿಸುತ್ತೇನೆ, ಧನ್ಯವಾದಗಳು" ಎಂದು ಸಂಜಯ್ ನಾಗ್ ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗ ಮಾತ್ರವಲ್ಲ, ಕನ್ನಡ ಸಂಗೀತ ಕ್ಷೇತ್ರಕ್ಕೆ ಅಣ್ಣಾವ್ರ ಕೊಡುಗೆ ಅಪಾರ. ತಮ್ಮ ಸಿನಿಮಾಗಳು ಮಾತ್ರವಲ್ಲ ಬೇರೆ ನಟರ ಸಿನಿಮಾಗಳಿಗೂ ಡಾ. ರಾಜ್‌ಕುಮಾರ್ ಹಾಡುಗಳನ್ನು ಹಾಡಿದ್ದಾರೆ. ತಮ್ಮ ಅಮೋಘ ಗಾಯನದಿಂದಲೇ ಸಾಕಷ್ಟು ಹಾಡುಗಳನ್ನು ಗೆಲ್ಲಿಸಿದ್ದಾರೆ. ಬರೀ ಸಿನಿಮಾ ಗೀತೆ ಮಾತ್ರವಲ್ಲ ಭಕ್ತಿ ಗೀತೆಗಳು, ಭಾವ ಗೀತೆಗಳನ್ನು ಕ್ಯಾಸೆಟ್‌ಗಳಿಗಾಗಿ ಕೂಡ ಅಣ್ಣಾವ್ರು ಹಾಡಿದ್ದಾರೆ.
ಸಾಕಷ್ಟು ಸಂಗೀತ ರಸಸಂಜೆ ಕಾರ್ಯಕ್ರಮಗಳಲ್ಲಿ ಅಣ್ಣಾವ್ರು ಹಾಡಿ ಜನರನ್ನು ರಂಜಿಸಿದ್ದರು. ಸಹಾಯಾರ್ಥ ಕಾರ್ಯಕ್ರಮಗಳಿಗಾಗಿ ಡಾ. ರಾಜ್ ಸಂಗೀತ ಸಂಜೆಯಲ್ಲಿ ಹಾಡಲು ಒಪ್ಪುತ್ತಿದ್ದರು. ಅವರ ಕ್ರೇಜ್ ಹೇಗಿತ್ತು ಅಂದ್ರೆ 35 ವರ್ಷಗಳ ಹಿಂದೆ 100 ರೂ. 200 ರೂ. ಟಿಕೆಟ್ ಖರೀದಿಸಿ ಜನ ಕಾರ್ಯಕ್ರಮ ನೋಡಲು ಹೋಗುತ್ತಿದ್ದರು. ಅಷ್ಟರಮಟ್ಟಿಗೆ ಮುತ್ತುರಾಜನ ಗಾಯನಕ್ಕೆ ಅಭಿಮಾನಿಗಳಿದ್ದರು.
'ಓಹಿಲೇಶ್ವರ' ಚಿತ್ರದಿಂದಲೇ ಅವರು ಹಾಡಲು ಆರಂಭಿಸಿದ್ದರು. ಆದರೆ 'ಸಂಪತ್ತಿಗೆ ಸವಾಲ್' ಚಿತ್ರದ 'ಯಾರೇ ಕೂಗಾಡಲಿ' ಹಾಡು ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಹೆಚ್ಚು ಹೆಚ್ಚು ಹಾಡಲು ಆರಂಭಿಸಿದರು. ಇಂತಹ ಗಾನಗಂಧರ್ವನ ಬಗ್ಗೆ ವ್ಯಂಗ್ಯವಾಡಿ ಮಾತನಾಡಿದ್ದ ಸಂಜಯ್ ನಾಗ್‌ಗೆ ಕನ್ನಡಿಗರು ಸರಿಯಾಗಿ ಬುದ್ದಿ ಹೇಳಿದ್ದರು. ಪರಿಣಾಮ ಇದೀಗ ಕ್ಷಮೆ ಯಾಚಿಸಿದ್ದಾರೆ.


Click it and Unblock the Notifications











