'ಸೋನು ನಿಗಮ್ ತಲೆ ಬೋಳಿಸಿದವರಿಗೆ 10 ಲಕ್ಷ' ಎಂದಿದ್ದ ಮೌಲ್ವಿಗೆ ಸವಾಲೆಸೆದ ಗಾಯಕ!
ಮಸೀದಿಗಳಲ್ಲಿ ಮೊಳುಗುವ ಆಝಾನ್ ಕುರಿತಂತೆ ಸೋನು ನಿಗಮ್ ಮಾಡಿದ್ದ ಟ್ವೀಟ್ ವಿರುದ್ಧ ಕಿಡಿಕಾರಿದ್ದ ಮುಸ್ಲಿಂ ಮೌಲ್ವಿಗೆ ಗಾಯಕ ಸೋನು ನಿಗಮ್ ತಿರುಗೇಟು ನೀಡಿದ್ದಾರೆ.
ಸೋನು ನಿಗಮ್ ಅವರ ಹೇಳಿಕೆಯ ಖಂಡಿಸಿದ್ದ ಪಶ್ಚಿಮ ಬಂಗಾಳದ ಮುಸ್ಲಿಂ ಮೌಲ್ವಿಯೊಬ್ಬರು ''ಯಾರಾದರೂ ಸೋನು ನಿಗಮ್ ಅವರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ದೇಶದೆಲ್ಲೆಡೆ ಮೆರವಣಿಗೆ ಮಾಡಿಸಿದರೆ ಅಂತಹವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ'' ಘೋಷಣೆ ಮಾಡಿದ್ದರು.[ವಿವಾದ ಹುಟ್ಟುಹಾಕಿದ ಗಾಯಕ ಸೋನು ನಿಗಮ್ ಟ್ವೀಟ್!]

ಇದಕ್ಕೆ ಸಂಬಂಧಪಟ್ಟಂತೆ ಸೋನು ನಿಗಮ್ ಟ್ವೀಟ್ ಮೂಲಕವೇ ಸವಾಲೆಸೆದಿದ್ದಾರೆ. ''ಇಂದು ಮಧ್ಯಾಹ್ನ 2 ಗಂಟೆಗೆ ಆಲೀಮ್ ನನ್ನ ಜಾಗಕ್ಕೆ ಬರುತ್ತಾನೆ. ನನ್ನ ತಲೆ ಕೂದಲನ್ನ ಬೋಳಿಸುತ್ತಾನೆ. 10 ಲಕ್ಷ ಸಿದ್ದ ಮಾಡ್ಕೊಳ್ಳಿ. ಮಾಧ್ಯಮದವರು ದಯವಿಟ್ಟು ಭಾಗವಹಿಸಿ'' ಎಂದು ಮೌಲ್ವಿಗೆ ಟಾಂಗ್ ಕೊಟ್ಟಿದ್ದಾರೆ.
ಸೋನು ನಿಗಮ್ ವಿವಾದಾತ್ಮಕ ಟ್ವೀಟ್ ನಲ್ಲಿ ಏನಿತ್ತು?
''ನಾನು ಮುಸ್ಲಿಮನಲ್ಲ. ಆದರೂ ಬೆಳಗ್ಗೆ ಆಝಾನ್ ನಿಂದಾಗಿ ಏಳುವಂತಾಗಿದೆ. ನಮ್ಮ ದೇಶದಲ್ಲಿ ಈ ಬಲವಂತದ ಧಾರ್ಮಿಕತೆ ಎಂದು ಕೊನೆಯಾಗುತ್ತದೆ. ಇಸ್ಲಾಂ ಸ್ಥಾಪನೆ ಮಾಡುವಾಗ ಮೊಹಮ್ಮದ್ ಬಳಿ ವಿದ್ಯುತ್ ಇರಲಿಲ್ಲ. ಧಾರ್ಮಿಕತೆಯನ್ನೇ ಪಾಲನೆ ಮಾಡದ ಜನರನ್ನು ಎದ್ದೇಳಿಸಲು ವಿದ್ಯುತ್ ಬಳಕೆ ಮಾಡುವ ದೇಗುಲ ಅಥವಾ ಗುರುದ್ವಾರವನ್ನು ನಾನು ನಂಬುವುದಿಲ್ಲ'' ಎಂದು ಬರೆದುಕೊಂಡಿದ್ದರು.

ಇನ್ನು ಆಝಾನ್ ಕುರಿತು ಸ್ವಷ್ಟನೆ ನೀಡಿರುವ ಸೋನು ನಿಗಮ್ ''ನನ್ನನ್ನು ಮುಸ್ಲಿಂ ವಿರೋಧಿ ಎಂದು ಹೇಳುತ್ತಿರುವವರು...ಎಲ್ಲಿಯಾದರೂ ನಾನು ಮುಸ್ಲಿಮರ ಬಗ್ಗೆ ಮಾತನಾಡಿರುವುದನ್ನು ತೋರಿಸಿ...ನಂತರ ನಾನು ಕ್ಷಮೆಯಾಚಿಸುತ್ತೇನೆ. ನಾನು ಮಾತನಾಡುತ್ತಿದ್ದಾಗ ದೇಗುಲ ಹಾಗೂ ಗುರುದ್ವಾರಗಳನ್ನು ಉಲ್ಲೇಖ ಮಾಡಿದ್ದೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ''
''ನಾನು ಮಾತನಾಡುವಾಗ ದೇಗುಲಗಳು ಮತ್ತು ಗುರುದ್ವಾರಗಳನ್ನು ಉಲ್ಲೇಖ ಮಾಡಿದ್ದೆ. ನಿಮ್ಮ ನಿಲುವು ನಿಮ್ಮ ಬುದ್ಧಿಶಕ್ತಿ (ಐಕ್ಯೂ)ಯನ್ನು ತೋರಿಸುತ್ತದೆ. ಈಗಲೂ ನನ್ನ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಮಸೀದಿ ಹಾಗೂ ದೇಗುಲಗಳಲ್ಲಿ ಧ್ವನಿವರ್ಧಕ ಬಳಕೆಯಾಗಬಾರದು'' ಎಂದು ಸರಣೆ ಟ್ವೀಟ್ ಮೂಲಕ ಹೇಳಿದ್ದಾರೆ.


Click it and Unblock the Notifications










