ಹಿಜಾಬ್ v/s ಕೇಸರಿ ಶಾಲು: ಗಾಯಕಿ ಸುಹಾನಾ ಸೈಯದ್ ಮಾತು ಕೇಳಿ
ಹಿಜಾಬ್ v/s ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಉಗ್ರ ಸ್ವರೂಪ ಪಡೆದಿದೆ. ನಿನ್ನೆಯಷ್ಟೆ ಶಿವಮೊಗ್ಗ ಸೇರಿದಂತೆ ಇತರ ಕಡೆಗಳಲ್ಲಿ ಪ್ರತಿಭಟನೆಯ ವೇಳೆ ಕಲ್ಲು ತೂರಾಟ, ಅಶ್ರು ವಾಯು ಪ್ರಯೋಗ, ಲಾಠಿ ಚಾರ್ಜ್‌ಗಳು ನಡೆದಿವೆ. ಸರ್ಕಾರ ಸಹ ಪರಿಸ್ಥಿತಿ ನಿಯಂತ್ರಿಸಲು ಮೂರು ದಿನಗಳ ಕಾಲ ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದೆ.
ಇಂದು ಹಲವು ಸಿನಿಮಾ ಸೆಲೆಬ್ರಿಟಿಗಳು ಹಿಜಾಬ್ v/s ಕೇಸರಿ ಶಾಲು ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಹುತೇಕರು ಈ ವಿವಾದವು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗಾಯಕಿ ಸುಹಾನಾ ಸೈಯದ್ ಸಹ ಈ ವಿವಾದದ ಬಗ್ಗೆ ವಿಡಿಯೋ ಹರಿಬಿಟ್ಟಿದ್ದು ಕೆಲವು ಮೌಲಿಕ ವಿಷಯಗಳನ್ನು ಅವರು ಜನರ ಮುಂದಿಟ್ಟಿದ್ದಾರೆ.
''ನಾನು ಸಹ ಇಸ್ಲಾಂ ಕುಟುಂಬದಲ್ಲಿಯೇ ಹುಟ್ಟಿ ಬೆಳೆಯುತ್ತಿರುವವಳು. ನಾನು ಹಿಜಾಬ್ ಧರಿಸುವುದಿಲ್ಲ, ಅದು ನನ್ನ ಆಯ್ಕೆ. ಹಾಗೆಂದು ನಾನು ಹಿಜಾಬ್ ವಿರೋಧಿಯಲ್ಲ. ನಾನು ಹಿಜಾಬ್ ಧರಿಸದೇ ಇರುವ ಬಗ್ಗೆಯೂ ಪರ ವಿರೋಧ ಚರ್ಚೆಗಳು ಆಗಿದೆ'' ಎಂದು ಸುಹಾನಾ ಸೈಯದ್ ಸ್ಪಷ್ಟಪಡಿಸಿದ್ದಾರೆ.

ಉಡುಪು ವ್ಯಕ್ತಿಯ ಸ್ವಾತಂತ್ರ್ಯ: ಸುಹಾನಾ
ಮುಂದುವರೆದು, ''ಹಿಜಾದ್ ವಿಷಯದಲ್ಲಿ ನನ್ನ ನಿಲವು ಏನೆಂದರೆ, ಹಿಜಾಬ್ ಸೇರಿದಂತೆ ಯಾವುದೇ ಉಡುಗೆ ಆಗಲಿ ಇದನ್ನು ತೊಡಬೇಕು, ಇದನ್ನು ತೊಡಬಾರದು ಎಂದು ಹೆಣ್ಣು ಮಕ್ಕಳ ಮೇಲೆ ಒತ್ತಡ ಹೇರುವ ಹಕ್ಕು ಯಾರಿಗೂ ಇಲ್ಲ. ಅದು ಉಡುಗೆ ತೊಡುವ ವ್ಯಕ್ತಿಯ ಸ್ವಾತಂತ್ರ್ಯ. ಅವರು ಬೆಳೆದು ಬಂದ ಪರಿಸ್ಥಿತಿಗೆ ತಕ್ಕಂತೆ ಅವರ ಉಡುಗೆ ಸಹ ಇರುತ್ತದೆ'' ಎಂದಿದ್ದಾರೆ ಸುಹಾನಾ.

ಶಿಕ್ಷಣ, ಧರ್ಮಕ್ಕಿಂತಲೂ ಮಿಗಿಲಾದದ್ದು: ಸುಹಾನಾ
''ಆದರೆ ನಾವಿಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಚರ್ಚಿಸುತ್ತಿದ್ದೇವೆ. ಶಿಕ್ಷಣ, ಧರ್ಮವನ್ನೂ ಮೀರಿದ್ದು. ಅದನ್ನು ಕಿತ್ತುಕೊಳ್ಳುವ ಹಕ್ಕು ಯಾವುದೇ ಭಾಷೆ, ಧರ್ಮ, ಜಾತಿ, ಲಿಂಗ, ಬಟ್ಟೆ ಇದ್ಯಾವುದಕ್ಕೂ ಇಲ್ಲ. ಈ ಕಾರಣಗಳಿಂದ ಹೆಣ್ಣುಮಗಳು ಶಿಕ್ಷಣದಿಂದ ವಂಚಿತಳಾಗುತ್ತಾಳೆ ಎಂದರೆ ಅದು ಖಂಡಿತ ತಪ್ಪು. ಇದು ನನ್ನ ವೈಯಕ್ತಿಕ ಅಭಿಪ್ರಾಯ'' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸುಹಾನಾ.

ಸ್ವಾಮಿ ವಿವೇಕಾನಂದರ ಮಾತಿನ ಉಲ್ಲೇಖ
''ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ, ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಓದಿಸಿ, ಆಗ ಆಕೆಯ ನಿರ್ಧಾರಗಳನ್ನು ಆಕೆಯೇ ತೆಗೆದುಕೊಳ್ಳುತ್ತಾಳೆ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಆಕೆಯೇ ಹೇಳುತ್ತಾಳೆ. ಆಕೆಯ ಆಯ್ಕೆಯನ್ನು ಪ್ರಶ್ನಿಸೋಕೆ ನೀವ್ಯಾರು' ಎಂದಿದ್ದಾರೆ. ಮುಂಚೆಯೆಲ್ಲ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬಂದು ಓದಲು ಧೈರ್ಯ ಮಾಡುತ್ತಿರಲಿಲ್ಲ. ಈಗ ಅಂಥಹಾ ವಾತಾವರಣವಿಲ್ಲ. ಅದನ್ನು ನೋಡಿ ಖುಷಿ ಪಡಬೇಕೆ ವಿನಃ ಅದನ್ನು ತಡೆಯುವುದು ಸರಿಯಲ್ಲ. ಒಬ್ಬ ಹೆಣ್ಣು ಮಗಳಾಗಿ ನನಗೆ ಶಿಕ್ಷಣದ ಮಹತ್ವ ಚೆನ್ನಾಗಿ ಅರ್ಥವಾಗಿದೆ. ಧರ್ಮಾತೀತವಾಗಿ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂಬುದು ನನ್ನ ಒತ್ತಾಯ'' ಎಂದಿದ್ದಾರೆ ಸುಹಾನಾ.

ಸುಹಾನಾಗೆ ಬಂದಿದ್ದವು ಬೆದರಿಕೆಗಳು
ಸುಹಾನಾ ಈ ಹಿಂದೆ ಕನ್ನಡದ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಹಾಡು ಹಾಡಿದ್ದರು. ಅವರು ಹಾಡಿದ್ದ ಭಕ್ತಿಗೀತೆ ಜನ ಮನ ಗೆದ್ದಿತ್ತು. ಆದರೆ, ಮುಸ್ಲಿಂ ಆಗಿ ಹಿಂದು ದೇವರುಗಳನ್ನು ಹೊಗಳುವ ಹಾಡನ್ನು ಹಾಡಿದ್ದಾರೆಂದು ಹಲವರು ಆಕ್ಷೇಪ ಎತ್ತಿದ್ದರು. ದುಬೈನಿಂದ ಸುಹಾನಾಗೆ ಬೆದರಿಕೆಗಳು ಬಂದಿದ್ದವು. 'ನಿನ್ನ ಪೋಷಕರು ನರಕಕ್ಕೆ ಹೋಗುವರು, ನೀನು ಧರಿಸಿರುವ ಪರ್ದಾಗೆ ಗೌರವ ಕೊಡು' ಎಂದೆಲ್ಲ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು ಕೆಲವು ಧರ್ಮಾಂದರು. ಬಳಿಕ ಸುಹಾನಾ ಹಿಂದು ದೇವರು, ಅಲ್ಲಾ, ಕ್ರಿಸ್ತ ಎಲ್ಲರ ಹೆಸರುಗಳನ್ನು ಬಳಸಿ 'ಮುಕುಂದ ಮುರಾರಿ, ಹೇ ಅಲ್ಲಾ ಹೇ ಏಸು' ಎಂದು ಹಾಡು ಹಾಡಿ ಸರ್ವಧರ್ಮ ಪ್ರೇಮ ಸಾರಿದ್ದರು. ಆ ಮೂಲದ ಸುಹಾನಾ ಮತ್ತೆ ಜನಮನ ಗೆದ್ದರು.


Click it and Unblock the Notifications











