ವಿಜಯ ಪ್ರಕಾಶ್ ಗಾಗಿ ಜಿಲ್ಲಾಧಿಕಾರಿ ಮತ್ತು ಶಾಸಕನ ನಡುವೆ ಕಿತ್ತಾಟ
Recommended Video
ಖ್ಯಾತ ಗಾಯಕ ವಿಜಯ ಪ್ರಕಾಶ್ ರಿಗೆ ಸನ್ಮಾನ ಮಾಡಬೇಕು ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವೆ ಕಿತ್ತಾಟವಾಗಿದೆ. ಈ ಘಟನೆ ನಡೆದಿರುವುದು ಕೊಪ್ಪಳದಲ್ಲಿ.
ಜನವರಿ 09 ರಂದು ಕೊಪ್ಪಳದ ಆನೆಗೊಂದಿ ಉತ್ಸವದ ಮೊದಲ ದಿನದ ಕಾರ್ಯಕ್ರಮ ಶುರು ಆಗಿತ್ತು. ಇಲ್ಲಿ ಗಾಯಕ ವಿಜಯ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಾಡು ಮಾಡಲಾಗಿತ್ತು. ಅತಿಥಿಯಾಗಿ ಬಂದ ವಿಜಯ್ ಪ್ರಕಾಶ್ ರಿಗೆ ಸನ್ಮಾನ ಮಾಡುವ ತಯಾರಿ ಇತ್ತು.
ಆದರೆ, ಇದೇ ವೇಳೆ ಜಿಲ್ಲಾಧಿಕಾರಿ ಸುನೀಲ್ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ನಡುವೆ ಮನಸ್ತಾಪ ಆಯಿತು. ಸನ್ಮಾನ ಮಾಡುವ ವಿಚಾರಕ್ಕೆ ಕಿತ್ತಾಟ ನಡೆಯಿತು. ಇದರಿಂದ ವಿಜಯ ಪ್ರಕಾಶ್ ಕಕ್ಕಾಬಿಕ್ಕಿಯಾದರು.

ಸನ್ಮಾನ ಮಾಡಲು ಕಿತ್ತಾಟ
ವಿಜಯ್ ಪ್ರಕಾಶ್ ದೊಡ್ಡ ಹೆಸರು ಮಾಡಿರುವ ಗಾಯಕ. ಬಾಲಿವುಡ್ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಅಂತಹ ದೊಡ್ಡ ಗಾಯಕ ತಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಉತ್ಸವ ನಡೆಸುವ ಎಲ್ಲರೂ ಖುಷಿಯಾಗಿದ್ದರು. ಆದರೆ, ವಿಜಯ ಪ್ರಕಾಶ್ ರಿಗೆ ನಾನು ಸನ್ಮಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಸುನೀಲ್ ಮೊದಲು ಸನ್ಮಾನ ಮಾಡಿ ವೇದಿಕೆಯಿಂದ ಹೊರಟು ಬಿಟ್ಟರು.

ಜಿಲ್ಲಾಧಿಕಾರಿ ವಿರುದ್ಧ ಶಾಸಕ ಬೇಸರ
ತಮ್ಮನ್ನು ಬಿಟ್ಟು ಒಬ್ಬರೆ ಹೋಗಿ ವಿಜಯ ಪ್ರಕಾಶ್ ಗೆ ಸನ್ಮಾನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಸುನೀಲ್ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ಬೇಸರಗೊಂಡರು. ಸುನೀಲ್ ವೇದಿಕೆಯಿಂದ ಇಳಿಯುತ್ತಿದ್ದ ಹಾಗೆ ಪರಣ್ಣ ಮುನವಳ್ಳಿ ಸಿಡಿಮಿಡಿಗೊಂಡರು. ಜಿಲ್ಲಾಧಿಕಾರಿ ವರ್ತನೆ ವಿರುದ್ಧ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.

ಕಕ್ಕಾಬಿಕ್ಕಿಯಾದ ವಿಜಯ ಪ್ರಕಾಶ್
ಜಿಲ್ಲಾಧಿಕಾರಿ ಹಾಗೂ ಶಾಸಕರ ಗಲಾಟೆ ನಡುವೆ ವಿಜಯ ಪ್ರಕಾಶ್ ಸಿಕ್ಕಿ ಹಾಕಿಕೊಂಡರು. ತಮ್ಮ ಹಾಡು ಶುರು ಆದರೂ, ಶಾಸಕ ಪರಣ್ಣ ಮುನವಳ್ಳಿ ಅಸಮಾಧಾನ ನಿಲ್ಲಲಿಲ್ಲ. ಸ್ಥಳದಲ್ಲಿದ್ದ ಎಸ್ ಪಿ ಸಂಗೀತಾ ಶಾಸಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಶಾಸಕ ಹಾಗೂ ಜಿಲ್ಲಾಧಿಕಾರಿಗಳ ಕಿತ್ತಾಟದ ನಡುವೆ ಕಾರ್ಯಕ್ರಮದ ಅತಿಥಿ ವಿಜಯ ಪ್ರಕಾಶ್ ಕಕ್ಕಾಬಿಕ್ಕಿಯಾದರು.

ಎರಡನೇ ಬಾರಿಗೆ ಸನ್ಮಾನ
ಶಾಸಕ ಪರಣ್ಣ ಮುನವಳ್ಳಿರನ್ನು ಸಮಾಧಾನ ಮಾಡಲು ಕೊನೆಗೆ ವಿಜಯ್ ಪ್ರಕಾಶ್ ಅವರೇ ಬಂದರು. ವೇದಿಕೆಯಿಂದ ಹಾಡು ನಿಲ್ಲಿಸಿ ತಾವೇ ಅವರನ್ನು ಕರೆದು ಮತ್ತೆ ಸನ್ಮಾನ ಮಾಡಲು ಹೇಳಿದರು. ಶಾಸಕ ಪರಣ್ಣ ಮುನವಳ್ಳಿ ಬಂದು ಮತ್ತೊಮ್ಮೆ ತಮ್ಮ ಕೈಯಾರ ಸನ್ಮಾನ ಮಾಡಿದರು. ಪರಣ್ಣ ಮುನವಳ್ಳಿ ಏನೋ ಇದರಿಂದ ಖುಷಿಯಾದರು. ಆದರೆ, ವಿಜಯ ಪ್ರಕಾಶ್ ಮಾತ್ರ ತಲೆ ಮೇಲೆ ಕೈ ಹೊತ್ತು ನಿಂತರು.


Click it and Unblock the Notifications











