»   » ಸ್ಮೈಲ್‌ : ಶಿವಣ್ಣನ ಸ್ಟೈಲ್‌ ನೋಡೋಕೆ ಸೆಟ್‌ಗೆ ಬಂದರು ರಾಜಣ್ಣ

ಸ್ಮೈಲ್‌ : ಶಿವಣ್ಣನ ಸ್ಟೈಲ್‌ ನೋಡೋಕೆ ಸೆಟ್‌ಗೆ ಬಂದರು ರಾಜಣ್ಣ

Posted By: Super
Subscribe to Filmibeat Kannada

ಮೊನ್ನೆ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಉತ್ಸಾಹದ ಊಟೆಯೋ ಊಟೆ. ಅಬ್ಬಾಯಿ ನಾಯ್ಡು ಸ್ಟುಡಿಯೋ ಸಾಲ ಹನುಮಂತನ ಬಾಲ ಬೆಳೆದಂಗೆ ಬೆಳೆದಿದೆ. ಸ್ಟುಡಿಯೋ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎನ್ನುವ ಆತಂಕಗಳನ್ನೆಲ್ಲಾ ಮೀರಿ ಸ್ಟುಡಿಯೋದಲ್ಲಿ ಹಬ್ಬದ ಕಳೆ.

ಸ್ಟುಡಿಯೋ ಸಂಕಟ ಬಗೆಹರಿಯಿತು ಎಂದರ್ಥವಲ್ಲ ; ಸಂಭ್ರಮದ ಕಾರಣವೇ ಬೇರೆ. ವರನಟ ರಾಜ್‌ ಸ್ಟುಡಿಯೋಕ್ಕೆ ಬಂದಿದ್ದರು. ರಾಜ್‌ ಇದ್ದಲ್ಲಿ ಸಂಭ್ರಮಕ್ಕೇನು ಕೊರತೆ! ಅಪರೂಪದ ಅತಿಥಿ ಮನೆಗೆ ಬಂದಾಗ- ಏನೆಲ್ಲ ನೋವುಗಳಿದ್ದರೂ ನುಂಗಿ ಉಪಚರಿಸುವ ಮನೆಯಾಡತಿಯಂತೆ ಸ್ಟುಡಿಯೋ ಕೂಡ ಸಂಭ್ರಮದ ಸೋಗಿನಲ್ಲಿತ್ತು .

ರಾಜ್‌ ಸ್ಟುಡಿಯೋಕ್ಕೆ ಭೇಟಿ ಕೊಟ್ಟಿದ್ದು- ಸ್ಮೈಲ್‌ ಚಿತ್ರದ ಚಿತ್ರೀಕರಣ ವೀಕ್ಷಿಸಲು. ಎನ್‌.ಕೆ. ಪ್ರಕಾಶ್‌ಬಾಬು ನಿರ್ಮಿಸುತ್ತಿರುವ, ಸೀತಾರಾಮ ಕಾರಂತರ ನಿರ್ದೇಶನದ ಸ್ವಮೇಕ್‌ ಸ್ಮೈಲ್‌ನ ನಾಯಕ ಶಿವಣ್ಣ . ಸ್ಮೈಲ್‌ ಮೂಲಕ ಶಿವಣ್ಣ ಹಾಗೂ ಕಾರಂತ, ಇಬ್ಬರೂ ಯಶಸ್ಸಿನ ನಗೆ ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಅಣ್ಣಾವ್ರು ಬಂದಾಗ ಸ್ಟುಡಿಯೋದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು :
ಓ ಲಾರ ಲಾರ ಸುಂದರಿ
ಸುಂದರಿ ಯಾರೇ ನೀ ಸುಂದರೀ
ಸೋಪಲ್ಲು ಕ್ರೀಮಲ್ಲು ಗುಂಡಲ್ಲು ಸುಂದರಿ
ಎಲ್ಲೆಲ್ಲು ನೋಡುವಂತ ಡ್ರೀಮ್ಸ್‌
ಜಾಹಿರಾತು ಬ್ಯೂಟಿ ಕ್ವೀನ್‌

- ಎಂದು ನದೀಂ ಖಾನ್‌ ನೃತ್ಯ ನಿರ್ದೇಶನದಲ್ಲಿ ಶಿವಣ್ಣ ಹಾಡಿ ಕುಣಿಯುತ್ತಿದ್ದರು. ಶಿವಣ್ಣನ ಜೊತೆ ಮಾಡೆಲ್‌ ಹುಡುಗಿಯರು, ಶಂಕರ್‌ ಭಟ್‌, ಸುರೇಶ್‌ ಅಂಚನ್‌ ಮುಂತಾದವರು ಸುಂದರಿ ಹಾಡಿಗೆ ಹೆಜ್ಜೆ ಬೆರೆಸುತ್ತಿದ್ದರು. ಅಣ್ಣಾವ್ರಿಗೆ ಸಂತೋಷವೋ ಸಂತೋಷ. ಸೆಟ್ಟು ಸಖತ್ತಾಗಿದೆ. ಸಾಂಗ್‌ ನೋಡೋದಿಕ್ಕೆ, ಕೇಳೋದಿಕ್ಕೆ ಬಹಳ ಖುಷಿಯಾಗಿದೆ. ಸ್ಮೈಲ್‌- ಹೆಸರು ಚೆನ್ನಾಗಿದೆ ಎಂದು ರಾಜ್‌ ಸರ್ಟಿಫಿಕೇಟ್‌ ಕೊಟ್ಟರು.

ನಿರ್ದೇಶಕ ಸೀತಾರಾಮ ಕಾರಂತರ ಶೈಲಿಯೂ ರಾಜ್‌ಗೆ ಇಷ್ಟವಾಯಿತು. ರಾಜ್‌ ಸರ್ಟಿಫಿಕೇಟ್‌ ಪಡೆದ ಚಿತ್ರತಂಡ ಇನ್ನಷ್ಟು ಹುರುಪಿನಿಂದ ಶೂಟಿಂಗ್‌ನಲ್ಲಿ ತೊಡಗಿತು.

ಸ್ಮೈಲ್‌ ಬಳಗ :
ಛಾಯಾಗ್ರಹಣ : ಪಿ.ರಾಜನ್‌
ಸಾಹಿತ್ಯ- ಸಂಗೀತ : ವಿ.ಮನೋಹರ್‌
ಸಂಭಾಷಣೆ : ಎಸ್‌.ಕುಮಾರ್‌
ಸಂಕಲನ : ಟಿ.ಗೋವರ್ಧನ್‌
ಸಹ ನಿರ್ದೇಶನ : ಮಲ್ಲಿಕ್‌
ನಿರ್ವಹಣೆ : ವೇಣು.

English summary
Dr.Rajkumar visits Smile shooting spot. Says Bravo to the team

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada