'ಮಾರ್ಟಿನ್' ರಿವ್ಯೂ ಮಾಡಿದ್ದಕ್ಕೆ ಜೀವ ಬೆದರಿಕೆ? ಓಪನ್ ಚಾಲೆಂಜ್ ಹಾಕಿ ತಿರುಗೇಟು
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ 2ನೇ ವಾರದತ್ತ ಮುನ್ನುಗ್ಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಖುಷಿಪಟ್ಟಿದೆ.
ಎಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ವೈಭವಿ ಶಾಂಡಿಲ್ಯ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಧ್ರುವ ದ್ವಿಪಾತ್ರದಲ್ಲಿ ಅಬ್ಬರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕೆಲವರು ಸಿನಿಮಾ ಬಹಳ ಇಷ್ಟವಾಗಿದೆ. ಬಿ, ಸಿ ಸೆಂಟರ್‌ಗಳಲ್ಲಿ ಚಿತ್ರದ ಗಳಿಕೆ ಚೆನ್ನಾಗಿದೆ. ಫಸ್ಟ್ ವೀಕೆಂಡ್ ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಮೊದಲ 2 ದಿನಕ್ಕೆ ಸಿನಿಮಾ 22 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಹೇಳಿತ್ತು.

'ಮಾರ್ಟಿನ್' ಸಿನಿಮಾ ನೆಗೆಟಿವ್ ರಿವ್ಯೂ, ಕಾಮೆಂಟ್ಸ್ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಬೇರೆ ಸ್ಟಾರ್ ನಟನ ಅಭಿಮಾನಿಗಳು ಬೇಕಂತಲೇ ನೆಗೆಟಿವ್ ರಿವ್ಯೂ ಮಾಡಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬರ್ತಿದೆ. ಇನ್ನು ಕೆಲ ರಿವ್ಯೂ ವೀಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ನೆಗೆಟಿವ್ ರಿವ್ಯೂ ಮಾಡಿದವರಿಗೆ ಧ್ರುವ ಸರ್ಜಾ ಅಂಧಾಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಚರ್ಚೆ ಕೂಡ ನಡೀತಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುಧಾಕರ್ ಗೌಡ 'ಮಾರ್ಟಿನ್' ಸಿನಿಮಾ ಬಗ್ಗೆ ರಿವ್ಯೂ ಮಾಡಿದ್ದರು. ಸ್ನೇಹಿತರ ಜೊತೆ ಸಿನಿಮಾ ನೋಡಿ ಬಂದು ತಮ್ಮ ಅಭಿಪ್ರಾಯವನ್ನು ವೀಡಿಯೋ ಮಾಡಿ ಹಂಚಿಕೊಂಡಿದ್ದರು. ಅವರು ಮಾತನಾಡಿದ್ದ ಕೆಲ ವಿಚಾರಗಳ ಬಗ್ಗೆ ಅಭ್ಯಂತರ ವ್ಯಕ್ತವಾಗಿತ್ತು. ಬಳಿಕ ಈ ಬಗ್ಗೆ ಸುಧಾಕರ್ ಗೌಡ ಕ್ಷಮೆ ಕೋರಿ ವೀಡಿಯೋ ಮಾಡಿದ್ದರು. ಸಿನಿಮಾ ನೋಡಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಆದರೂ ನನ್ನ ಕೆಲ ಮಾತುಗಳಿಂದ ಯಾರಿಗಾದರೂ ನೋವು ಮಾಡಿದ್ದರೆ ಕ್ಷಮಿಸಿ ಎಂದಿದ್ದರು.
ಇದೀಗ ತಮ್ಮ ಸಾಕಷ್ಟು ಬೆದರಿಕೆ ಬರ್ತಿದೆ. 'ಮಾರ್ಟಿನ್' ಸಿನಿಮಾ ನೋಡಿ ನನ್ನ ಅಭಿಪ್ರಾಯ ತಿಳಿಸಿದ್ದೇ ತಪ್ಪಾ? ನನ್ನಂತೆಯೇ ಕೆಲವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಯಾರು ಹೀಗೆ ಬೆದರಿಕೆ ಎದುರಿಸುತ್ತಿದ್ದಾರೋ ಅವರೆಲ್ಲಾ ಬನ್ನಿ, ಈ ಬಗ್ಗೆ ಗಟ್ಟಿಯಾಗಿ ನಿಲ್ಲೋಣ ಎಂದು ಹೇಳಿ ಸುಧಾಕರ್ ಗೌಡ ಮತ್ತೊಂದು ವೀಡಿಯೋ ಹಂಚಿಕೊಂಡಿದ್ದಾರೆ. ಈ ರೀತಿ ದೌರ್ಜನ್ಯ ಎಸಗುವವರ ವಿರುದ್ಧ ಹೋರಾಟ ಮಾಡೋಣ ಎಂದಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
ಚಿತ್ರರಂಗದಲ್ಲಿ ಸ್ಟಾರ್ ನಟರ ನಡುವಿನ ಫ್ಯಾನ್ಸ್ ವಾರ್ ಹೊಸದೇನು ಅಲ್ಲ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆದಾಗ ಇದು ಮತ್ತಷ್ಟು ಹೆಚ್ಚಾಗುತ್ತದೆ. ಒಬ್ಬ ನಟನ ಸಿನಿಮಾ ಬಗ್ಗೆ ಮತ್ತೊಬ್ಬ ನಟನ ಅಂಧಾಭಿಮಾನಿಗಳು ನೆಗೆಟಿವ್ ಹರಡುವ ಕೆಟ್ಟ ಸಂಸ್ಕೃತಿ ದೊಡ್ಡದಾಗಿ ಬೆಳೆಯುತ್ತಿದೆ. ಸೋಶಿಯಲ್ ಮೀಡಿಯಾ ಬಂದಮೇಲೆ ಇದು ಮತ್ತಷ್ಟು ಹೆಚ್ಚಾಗಿದೆ.
'ಮಾರ್ಟಿನ್' ಸಿನಿಮಾ ವಿರುದ್ಧ ದರ್ಶನ್ ಅಭಿಮಾನಿಗಳು ನೆಗೆಟಿವ್ ಕಾಮೆಂಟ್ಸ್ ಮಾಡುತ್ತಿದ್ದಾರೆ, ಟ್ರೋಲ್ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬರ್ತಿದೆ. ಈ ಬಗ್ಗೆ ಇತ್ತೀಚೆಗೆ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಧ್ರುವ ಸರ್ಜಾಗೆ ಪ್ರಶ್ನೆ ಎದುರಾಗಿತ್ತು. ದುಡ್ಡು ಕೊಟ್ಟು ಕೆಟ್ಟದಾಗಿ 'ಮಾರ್ಟಿನ್' ಸಿನಿಮಾ ರಿವ್ಯೂ ಮಾಡಿಸುತ್ತಿದ್ದಾರೆ ಎನ್ನುವ ಆರೋಪ ಇದೆ ಅಲ್ವಾ, ಏನಂತೀರಾ ಎನ್ನುವ ಪತ್ರಕರ್ತರು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಧ್ರುವ "ಕರ್ನಾಟಕ ಜನರಿಗೆ ಸ್ವಂತ ಬುದ್ದಿಯಿದೆ. ಎಲ್ಲರೂ ಸಿನಿಮಾ ನೋಡ್ತಿದ್ದಾರೆ. ಯಾರು ಏನು ಮಾಡಕ್ಕಾಗಲ್ಲ" ಎಂದಿದ್ದರು.
ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಮಾಡುವುದಾಗಲಿ ಅಥವಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದವರಿಗೆ ಬೆದರಿಕೆ ಹಾಕುವುದಾಗಲಿ ಸರಿಯಲ್ಲ.


Click it and Unblock the Notifications











