Kaatera Vs Salaar: ದರ್ಶನ್ ಹೇಳಿದ್ದೇನು? 'ಕಾಟೇರ' ನೆಗೆಟಿವ್ ಟ್ರೋಲ್, ಟ್ರೆಂಡ್ ಮಾಡ್ತಿರೋದ್ಯಾರು?
ಒಂದು ವಾರದ ಅಂತರದಲ್ಲಿ 'ಸಲಾರ್' ಹಾಗೂ 'ಕಾಟೇರ' ಸಿನಿಮಾಗಳು ಬಿಡುಗಡೆಯಾಗುತ್ತಿದೆ. ತಮ್ಮ ಸಿನಿಮಾ ಬಗ್ಗೆ ಬಹಳ ಭರವಸೆಯಿಂದ ಇರುವ ದರ್ಶನ್ ಮತ್ತವರ ತಂಡ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು 'ಕಾಟೇರ' ಸಿನಿಮಾ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ.
ಇದ್ದಕ್ಕಿದ್ದಂತೆ 'ಕಾಟೇರ' ಕುರಿತು ನೆಗೆಟಿವ್ ಟ್ರೆಂಡ್, ಟ್ರೋಲ್ ಶುರುವಾಗಿದೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ದರ್ಶನ್ 'ಕಾಟೇರ' ಸಿನಿಮಾ ರಿಲೀಸ್ ಡೇಟ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಕೆಲಸ ನಡೀತಿದೆ. ಇದೇ ವಿಚಾರ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕನ್ನಡ ಸಿನಿಮಾ ಬೆಂಬಲಿಸದೇ ಪರಭಾಷಾ ಸಿನಿಮಾ ಬೆಂಬಲಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ನಟ ದರ್ಶನ್ ಮಾತನಾಡಿ "ಡಿಸೆಂಬರ್ 29ಕ್ಕೆ 'ಕಾಟೇರ' ಚಿತ್ರವನ್ನು ಯಾಕೆ ರಿಲೀಸ್ ಮಾಡುತ್ತಿದ್ದೇವೆ ಅಂದ್ರೆ, ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕ್ರಿ? ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ? ನಮ್ಮ ಕನ್ನಡ ಜನ ಇದ್ದಾರಾ ಇಲ್ವಾ ಅಂತ ನಮಗೆ ಡೌಟ್ ಬಂದು ಬಿಡಬೇಕು. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ." ಎಂದಿದ್ದರು.
ನಟ ದರ್ಶನ್ ಪರಭಾಷೆಯ ಯಾವುದೇ ಸಿನಿಮಾ ಅಥವಾ ನಟನ ಹೆಸರು ಹೇಳದೇ ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದರು. ಆದರೆ ಕೆಲವರು ದರ್ಶನ್ ತೆಲುಗು ಸಿನಿಮಾ 'ಸಲಾರ್' ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್‌ನ ಟಾರ್ಗೆಟ್ ಮಾಡಿದ್ದಾರೆ ಎನ್ನುವ ಅರ್ಥದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ತೆಲುಗು ವಾಹಿನಿಗಳಲ್ಲೂ ಈಗ ಇದೇ ಸುದ್ದಿ ವೈರಲ್ ಆಗುತ್ತಿದೆ. ಕನ್ನಡ ನಟ ದರ್ಶನ್, ಪ್ರಭಾಸ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ ಎನ್ನುವ ಅರ್ಥದಲ್ಲಿ ಸುದ್ದಿಯಾಗುತ್ತಿದೆ.
'ಕಾಟೇರ' ಚಿತ್ರದ ಬಗ್ಗೆ ಕನ್ನಡದ ಬೇರೆ ನಟರ ಅಭಿಮಾನಿಗಳೇ ನೆಗೆಟೀವ್ ಟ್ರೋಲ್ ಹಾಗೂ ಟ್ರೆಂಡ್ ಮಾಡುತ್ತಿರುವುದು ಕಾಣಿಸುತ್ತಿದೆ. ಆದರೆ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಮಾಡುವ ಹುಚ್ಚಾಟಕ್ಕೆ ಸುಖಾ ಸುಮ್ಮನೆ ಎಲ್ಲಾ ಅಭಿಮಾನಿಗಳಿಗೂ ಕೆಟ್ಟ ಹೆಸರು ಬಂದಂತಾಗುತ್ತಿದೆ. ಕನ್ನಡ ಚಿತ್ರಕ್ಕೆ ಕನ್ನಡಿಗರೆಲ್ಲರೂ ಒಂದಾಗಬೇಕು ಎನ್ನುವ ಕೂಗು ಜೋರಾಗಿದೆ. ದರ್ಶನ್ ಅಭಿಮಾನಿಗಳು ಎಲ್ಲಾ ನೆಗೆಟಿವ್ ಟ್ರೋಲ್, ಟ್ರೆಂಡ್ ಮೀರಿ ಸಿನಿಮಾ ಗೆಲ್ಲಿಸುವ ಪಣ ತೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ 'ಕಾಟೇರ' ಟ್ರೈಲರ್ ಲಾಂಚ್ ಈವೆಂಟ್‌ಗೆ ಸಿದ್ಧತೆ ನಡೀತಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 29ಕ್ಕೆ ಸಿನಿಮಾ ಅದ್ಧೂರಿಯಾಗಿ ತೆರೆಗಪ್ಪಳಿಸಲಿದೆ.
ಕೆ. ಜಿ ರಸ್ತೆಯ ಅಕ್ಕಪಕ್ಕದ ಚಿತ್ರಮಂದಿರಗಳಲ್ಲಿ 'ಸಲಾರ್' ಹಾಗೂ 'ಕಾಟೇರ' ಸಿನಿಮಾ ಬಿಡುಗಡೆಯಾಗಲಿದೆ. ಸಂತೋಷ್ ಚಿತ್ರಮಂದಿರದಲ್ಲಿ 'ಸಲಾರ್' ಬಿಡುಗಡೆಯಾದ ಒಂದು ವಾರಕ್ಕೆ ಪಕ್ಕದ ನರ್ತಕಿ ಚಿತ್ರಮಂದಿರದಲ್ಲಿ 'ಕಾಟೇರ'ನ ದರ್ಶನವಾಗಲಿದೆ. ಕರ್ನಾಟಕದಲ್ಲಿ 'ಸಲಾರ್' ಚಿತ್ರವನ್ನು ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲು ಹೊಂಬಾಳೆ ಸಂಸ್ಥೆ ಮುಂದಾಗಿದೆ. ಕನ್ನಡಕ್ಕೂ ಡಬ್ ಆಗಿ 'ಸಲಾರ್' ಸಿನಿಮಾ ಬರಲಿದೆ.
'ಕಾಟೇರ' ಚಿತ್ರವನ್ನು ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗುತ್ತಿದೆ. ಕುಲುಮೆಯಲ್ಲಿ ಕೆಲಸ ಮಾಡುವ ಯುವಕನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ಕುಮಾರ್ ಗೋವಿಂದ್, ಶ್ರೀನಿವಾಸ್ ಮೂರ್ತಿ, ಶ್ರುತಿ, ಬಿರಾದಾರ್, ಆರಾಧನಾ ಚಿತ್ರದ ತಾರಾಗಣದಲ್ಲಿದ್ದಾರೆ.


Click it and Unblock the Notifications











