ನಮ್ಮನ್ನು ತುಳಿಯುತ್ತಿದಾರೆ, ಎಲ್ಲಾ ಗೊತ್ತಾಗ್ತಿದೆ ಎಂದು ಆಕ್ರೋಶಗೊಂಡ ಡಾಲಿ, ಯೋಗಿ!
ನಟನಾಗಿ ಚಿತ್ರರಂಗ ಪ್ರವೇಶಿಸಿ ಟಗರು ಚಿತ್ರದ ವಿಲನ್ ರೋಲ್ ಮೂಲಕ ದೊಡ್ಡ ತಿರುವು ಪಡೆದುಕೊಂಡ ಧನಂಜಯ್ ನಂತರ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡರು. ಕನ್ನಡದ ನಂತರ ಟಾಲಿವುಡ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ ಧನಂಜಯ ಅಲ್ಲು ಅರ್ಜುನ್ ಅಭಿನಯದ ಪುಷ್ಪದಂತಹ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಹೀಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಧನಂಜಯ್ ನಿರ್ಮಾಪಕನಾಗಿಯೂ ಬಡ್ತಿ ಪಡೆದಿದ್ದಾರೆ.
ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್ ಚಿತ್ರದಲ್ಲಿ ಅಭಿನಯಿಸುವುದರ ಜತೆಗೆ ಹಣವನ್ನು ಹೂಡಿದ್ದ ಧನಂಜಯ್ ನಿರ್ಮಾಪಕನಾಗಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದ್ದರು. ಸದ್ಯ ಧನಂಜಯ್ ನಿರ್ಮಾಪಕನಾಗಿ ಎರಡನೇ ಬಾರಿಗೆ ಹಣವನ್ನು ಹೂಡಿದ್ದು, ಹೆಡ್ ಬುಷ್ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿಯೇ ಬಂಡವಾಳ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ.
ಇನ್ನು ಹೆಡ್ ಬುಷ್ ಚಿತ್ರ ನಿನ್ನೆಯಷ್ಟೇ ( ಅಕ್ಟೋಬರ್ 21 ) ಬಿಡುಗಡೆಗೊಂಡಿದ್ದು, ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಬಿಡುಗಡೆಯ ದಿನಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋನಿಂದಲೂ ಉತ್ತಮ ವಿಮರ್ಶೆ ಪಡೆದುಕೊಳ್ಳುತ್ತಿರುವ ಹೆಡ್ ಬುಷ್ ಹಿಟ್ ಆಗಲಿದೆ ಎಂಬ ಟಾಕ್ ಕೂಡ ಇದೆ. ಇದು ಸಾಮಾನ್ಯ ರೌಡಿಸಂ ಚಿತ್ರವಲ್ಲ, ಒಂದೊಳ್ಳೆ ಸಂದೇಶವಿದೆ ಎಂದು ಕೆಲ ಸಿನಿಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರ ವೀಕ್ಷಿಸಲು ಮೊದಲ ದಿನ ಮುಖ್ಯ ಚಿತ್ರಮಂದಿರಕ್ಕೆ ಆಗಮಿಸಿದ್ದ ಡಾಲಿ ಧನಂಜಯ್ ಹಾಗೂ ಯೋಗಿ ವೀಕ್ಷಕರ ಪ್ರತಿಕ್ರಿಯೆ ಕಂಡು ಭಾವುಕರಾಗಿ ಮಾಧ್ಯಮದವರ ಜತೆ ಮಾತನಾಡಿದರು.

ಎರಡನೇ ಬಾರಿಗೆ ಜನ ನನ್ನ ನಂಬಿದ್ರು ಎಂದ ಡಾಲಿ ಬೇಸರವನ್ನೂ ವ್ಯಕ್ತಪಡಿಸಿದ್ರು
ತುಂಬಾ ಹೆಮ್ಮೆಯಾಗುತ್ತಿದೆ ಎಂದು ಮಾತನಾಡಲು ಆರಂಭಿಸಿದ ಡಾಲಿ ಧನಂಜಯ್ ಬಡವ ರಾಸ್ಕಲ್ ಬಳಿಕ ಮತ್ತೊಮ್ಮೆ ತನ್ನನ್ನು ನಂಬಿ ತನ್ನ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದಿದ್ದಾರೆ ಎಂದರು. ಈ ವಿಷಯವಾಗಿ ತುಂಬಾ ಖುಷಿಯಿದೆ ಹಾಗೂ ಹೆಮ್ಮೆ ಇದೆ ಎಂದಿರುವ ಡಾಲಿ ಧನಂಜಯ್ ತುಂಬಾ ವಿಶ್ವಾಸದಿಂದ ಹೇಳುತ್ತಿದ್ದೇನೆ ನಾವು ಸಾಮಾನ್ಯ ಚಿತ್ರ ಮಾಡಿಲ್ಲ, ತುಂಬ ಒಳ್ಳೆ ಸಿನಿಮಾ ಮಾಡಿದ್ದೇವೆ ಎಂದರು. ಇದರ ನಡುವೆ ಏನೇನೋ ನಡೆಯುತ್ತಿದೆ, ಅದು ನನಗೂ ಅನುಭವಕ್ಕೆ ಬಂದಿದೆ, ಎಲ್ಲಾ ಗೊತ್ತಾಗ್ತಿದೆ, ಬುದ್ಧಿವಂತರು ಏನೇನೋ ಯೋಚ್ನೆ ಮಾಡ್ತಾರೆ ಆದರೆ ನನ್ನ ಜನ ಹೃದಯದಿಂದ ಯೋಚ್ನೆ ಮಾಡ್ತಾರೆ ಎಂದು ಧನಂಜಯ್ ಎದೆತಟ್ಟಿಕೊಂಡು ಹೇಳಿದರು. ಈ ಮೂಲಕ ತಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬುದನ್ನು ಧನಂಜಯ್ ಪರೋಕ್ಷವಾಗಿ ತಿಳಿಸಿದರು.

ನಮ್ಮನ್ನು ತುಳಿಯುತ್ತಿದ್ದಾರೆ ಎಂದ ಯೋಗಿ
ಇನ್ನು ಹೆಡ್ ಬುಷ್ ಚಿತ್ರದಲ್ಲಿ ಗಂಗಾ ಪಾತ್ರಧಾರಿಯಾಗಿರುವ ನಟ ಲೂಸ್ ಮಾದ ಯೋಗೇಶ್ ಕೂಡ ಚಿತ್ರಕ್ಕೆ ಜನ ತೋರಿಸುತ್ತಿರುವ ಪ್ರತಿಕ್ರಿಯೆ ಕಂಡು ಕೈಮುಗಿದು ಧನ್ಯವಾದ ಅರ್ಪಿಸಿದರು ಹಾಗೂ ಇದೇ ವೇಳೆ ನಮ್ಮ ಸಿನಿಮಾವನ್ನು ಅನೇಕರು ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಓಪನ್ ಆಗಿ ಹೇಳಿದರು. ಅಷ್ಟೇ ಅಲ್ಲದೆ ಅವರು ಎಷ್ಟೇ ತುಳಿದರೂ ಸಹ ಮೈ ಕೊಡವಿಕೊಂಡು ಮತ್ತೆ ಎದ್ದು ಬರುತ್ತೇವೆ ಎಂದು ಯೋಗಿ ಆಕ್ರೋಶದಿಂದ ಮಾತನಾಡಿದರು.

ಜನ ಮೆಚ್ಚಿಕೊಂಡಾಯ್ತು ಇನ್ನು ನೆಗೆಟಿವ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ
ಇನ್ನೂ ಮುಂದುವರಿದು ಮಾತನಾಡಿದ ನಟ ಯೋಗಿ ಚಿತ್ರವನ್ನು ವೀಕ್ಷಿಸಿದ ಜನರು ಚಿತ್ರವನ್ನು ಮೆಚ್ಚಿಕೊಂಡಾಗಿದೆ, ಇನ್ನು ನೆಗೆಟಿವ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಇಷ್ಟು ದೊಡ್ಡ ಮಟ್ಟದ ಒಪನಿಂಗ್ ಕಂಡು ಅದೆಷ್ಟೋ ವರ್ಷಗಳೇ ಆಗಿದ್ದವು ಎಂದು ಹೇಳಿಕೆ ನೀಡಿದರು.


Click it and Unblock the Notifications











