twitter
    For Quick Alerts
    ALLOW NOTIFICATIONS  
    For Daily Alerts

    'ಕೋಟಿಗೊಬ್ಬ 3' ರಿಲೀಸ್ ಮಾಡ್ಬೇಡಿ ಎಂದು ಚಿತ್ರಮಂದಿರಕ್ಕೆ ಕರೆ ಮಾಡಿದ್ರು, ಸಾಕ್ಷ್ಯ ಇದೆ: ಸುದೀಪ್

    |

    'ಕೋಟಿಗೊಬ್ಬ 3' ಸಿನಿಮಾದ ಬಿಡುಗಡೆ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಅಕ್ಟೋಬರ್ 14 ರಂದು ಬಿಡುಗಡೆ ಆಗಬೇಕಿತ್ತು, ಆದರೆ ವಿತರಕರು ಕೊಟ್ಟ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಆಗಲಿಲ್ಲ ಎಂದು ನಿರ್ಮಾಪಕ ಸಂದೇಶ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ಸುದೀಪ್, ''ಯಾರು ಇದರ ಹಿಂದೆ ಇದ್ದಾರೆಂಬುದು ಗೊತ್ತಿದೆ'' ಎಂದಿದ್ದರು.

    ಸಿನಿಮಾವು ಅಕ್ಟೋಬರ್ 15 ರಂದು ಬಿಡುಗಡೆ ಆಯಿತಾದರೂ ವಿವಾದ ತಣ್ಣಗಾಗಿಲ್ಲ. ಇಂದು ಮಾಧ್ಯಮದೊಂದಿಗೆ ಮಾತನಾಡಿರುವ ಕಿಚ್ಚ ಸುದೀಪ್, ''ಭೂಮಿಕಾ ಚಿತ್ರಮಂದಿರಕ್ಕೆ ಕರೆ ಮಾಡಿ, 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಮಾಡಬೇಡಿ ಎಂದು ಬೆದರಿಕೆ ಹಾಕಿದ್ದರು, ಇದಕ್ಕೆ ಸಾಕ್ಷ್ಯ ಇದೆ' ಎಂದಿದ್ದಾರೆ.

    ''ಚಿತ್ರರಂಗದ ಹಿರಿಯ ವಿತರಕರೊಬ್ಬರು, ಚಿತ್ರಮಂದಿರ ಕೊಡಬೇಡಿ ಎಂದು ಕರೆಮಾಡುತ್ತಾರೆ. ಆಡಿಯೋ ಕ್ಲಿಪ್ಪಿಂಗ್ ಸಹ ಕಳಿಸಿದ್ದಾರೆ. ಇದನ್ನೆಲ್ಲ ನೋಡಿ ನಗು ಬರುತ್ತದೆ. ಇಷ್ಟು ದಿನ ಬರೀ ಸಿನಿಮಾ ಬಗ್ಗೆ, ಚಿತ್ರಕತೆ ಬಗ್ಗೆ, ಕತೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆ. ಇನ್ನು ಮುಂದೆ ಇಂಥಹವರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ'' ಎಂದು ಪರೋಕ್ಷವಾಗಿ ಎಚ್ಚರಿಕೆಯ ದನಿಯನ್ನೇ ಹೇಳಿದ್ದಾರೆ ಸುದೀಪ್.

    ''ಅವರನ್ನು ದೇವರು ಚೆನ್ನಾಗಿಟ್ಟಿದ್ದಾರೆ, ಒಳ್ಳೆಯ ಹೆಸರಿದೆ, ಅವರ ಸಿನಿಮಾಗಳು ಚೆನ್ನಾಗಿ ಓಡುತ್ತಿರುತ್ತವೆ. ಹೀಗಿದ್ದಾಗ ಚಿತ್ರಮಂದಿರಗಳಿಗೆ ಕರೆ ಮಾಡಿ, ಸಿನಿಮಾ ರಿಲೀಸ್ ಮಾಡಬೇಡಿ ಎನ್ನುತ್ತಾರೆ. ಇಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ, ಹೀಗೆ ಮಾಡಿ-ಮಾಡಿ ಎಷ್ಟು ಹೊಸಬರನ್ನು ಇವರು ಹಾಳು ಮಾಡಿರಬಹುದು ಎಂಬ ಯೋಚನೆ ಬರುತ್ತದೆ'' ಎಂದು ಹೆಸರು ಹೇಳದೆ ಹಿರಿಯ ವಿತರಕರ ವಿರುದ್ಧ ವಾಗ್ದಾಳಿ ನಡೆಸಿದರು ಸುದೀಪ್.

    ಸಾಕ್ಷ್ಯ ಸಮೇತ ಜನಗಳ ಮುಂದೆ ಬರ್ತೀವಿ: ಸುದೀಪ್

    ಸಾಕ್ಷ್ಯ ಸಮೇತ ಜನಗಳ ಮುಂದೆ ಬರ್ತೀವಿ: ಸುದೀಪ್

    ''ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ನಾವು ಬರ್ತೀವಿ, ಆಡಿಯೋ ಕ್ಲಿಪ್ಪಿಂಗ್ ಎಲ್ಲ ಇದೆ. ಅದನ್ನು ತೆಗೆದುಕೊಂಡು ಜನರ ಮುಂದೆ ಬರ್ತೀವಿ. ಈಗಾಗಲೇ ನಿನ್ನೆ ಜಾಕ್ ಮಂಜು ಈ ವಿಷಯವಾಗಿ ಸಾಕಷ್ಟು ಮಾತನಾಡಿದ್ದಾರೆ. ನಾವು ಸಾಕ್ಷ್ಯ ಸಮೇತ ಬರ್ತೀವಿ. ಅವರದ್ದೂ ಸಿನಿಮಾ ಬಿಡುಗಡೆ ಇರುತ್ತಲ್ಲ ಆಗಲೇ ಅವರ ಬಣ್ಣ ಬಯಲು ಮಾಡ್ತೀವಿ'' ಎಂದು ಸವಾಲು ಎಸೆದಿದ್ದಾರೆ ಸುದೀಪ್. ಆ ಮೂಲಕ 'ಕೋಟಿಗೊಬ್ಬ 3' ಸಿನಿಮಾ ವಿವಾದ ಇನ್ನೂ ಮುಂದುವರೆಯಲಿದೆ ಎಂಬುದು ಖಾತ್ರಿಯಾಗಿದೆ.

    ಗಾಂಧಿ ನಗರದಲ್ಲಿ ನನಗೆ ಸಾಕಷ್ಟು ಗೆಳೆಯರಿದ್ದಾರೆ: ಸುದೀಪ್

    ಗಾಂಧಿ ನಗರದಲ್ಲಿ ನನಗೆ ಸಾಕಷ್ಟು ಗೆಳೆಯರಿದ್ದಾರೆ: ಸುದೀಪ್

    ''ನಾನು ಈಗಷ್ಟೆ ಬಂದಿರುವ ನಟ ಎಂದುಕೊಂಡು ಬಿಟ್ಟಿದ್ದಾರೆ. ನನಗೆ ಗಾಂಧಿ ನಗರದಲ್ಲಿ ಆಫೀಸ್ ಇಲ್ಲದೇ ಇರಬಹುದು. ಆದರೆ ನನಗೆ ಅಲ್ಲಿ ಗೆಳೆಯರಿಲ್ಲ, ಒಳ್ಳೆಯ ಜನ ಇಲ್ಲ ಎಂದುಕೊಂಡು ಬಿಟ್ಟಿದ್ದಾರೆ. ನಮಗೆ ಪ್ರತಿಯೊಬ್ಬರು, ಪ್ರತಿ ವಿಷಯವನ್ನು ಸಾಕ್ಷ್ಯ ಸಮೇತ ಹೇಳ್ತಾರೆ. ನಾನೇ ರಾಜ ಎಂದು ಮೆರೆದವರು ನಿಜಕ್ಕೂ ರಾಜರಾಗಿರುವುದಿಲ್ಲ. ಜನ ಆಯ್ಕೆ ಮಾಡಿ 'ಅವನು ನಮ್ಮ ರಾಜ' ಎನ್ನಬೇಕು ಅವರು ನಿಜವಾದ ರಾಜ. ಹೇಗೆಲ್ಲಾ ಮೆರೆದವರು ಏನೇನಾದರು ಎಂಬುದನ್ನು ನೋಡಿದ್ದೇವೆ. ಇವರೂ ಅನುಭವಿಸುತ್ತಾರೆ. ಅದನ್ನು ನನ್ನ ಕಣ್ಣಾರೆ ನಾನೇ ನೋಡ್ತೀನಿ'' ಎಂದಿದ್ದಾರೆ ಸುದೀಪ್.

    ಒಳ್ಳೆಯ ಜನರನ್ನು ಸಂಪಾದಿಸಿದ್ದೇನೆ ಎಂಬ ತೃಪ್ತಿ ಇದೆ: ಸುದೀಪ್

    ಒಳ್ಳೆಯ ಜನರನ್ನು ಸಂಪಾದಿಸಿದ್ದೇನೆ ಎಂಬ ತೃಪ್ತಿ ಇದೆ: ಸುದೀಪ್

    ''ಸಿನಿಮಾ ನಿನ್ನೆ ಬಿಡುಗಡೆ ಆದಾಗ ಆ ಜನ ಬಂದರಲ್ಲ ನನಗೆ ಬಹಳ ಖುಷಿಯಾಯ್ತು. ನಾನು ಅವರಿಗೆಲ್ಲ ಬಹಳ ಧನ್ಯವಾದ ಅರ್ಪಿಸುತ್ತೇನೆ. ನಾನು ಸಂಪಾದನೆ ಮಾಡಿರುವ ಜನಗಳ ಬಗ್ಗೆ, ಗೆಳೆಯರ ಬಗ್ಗೆ ನನಗೆ ಹೆಮ್ಮೆ ಇದೆ. ಮಳೆಯಲ್ಲೂ ಬಂದು ಸಿನಿಮಾ ನೋಡಿದ್ದಾರೆ. ನಮ್ಮ ಗೌರವವನ್ನು ಅವರ ಗೌರವ ಎಂದುಕೊಂಡು ಚಿತ್ರಮಂದಿರಕ್ಕೆ ಬಂದಿದ್ದಾರೆ. ಜೊತೆಗೆ ನನ್ನ ಗೆಳೆಯರು ಸಹಾಯ ಮಾಡಿದ್ದಾರೆ. ಜಾಕ್ ಮಂಜು ಅಂಥಹಾ ಒಬ್ಬ ಒಳ್ಳೆಯ ಗೆಳೆಯ, ಸಹೋದರ ನನ್ನ ಜೊತೆಗೆ ಇದ್ದಾರೆ. ಇದೆಲ್ಲ ನೋಡಿದರೆ ನನಗೆ ಮನಸ್ಸು ತುಂಬಿ ಬರುತ್ತದೆ'' ಎಂದಿದ್ದಾರೆ ಸುದೀಪ್.

    ಸೂರಪ್ಪ ಬಾಬು ಜೊತೆ ಮನಸ್ಥಾಪದ ಬಗ್ಗೆ ಸುದೀಪ್ ಮಾತು

    ಸೂರಪ್ಪ ಬಾಬು ಜೊತೆ ಮನಸ್ಥಾಪದ ಬಗ್ಗೆ ಸುದೀಪ್ ಮಾತು

    ನಿರ್ಮಾಪಕ ಸೂರಪ್ಪ ಬಾಬು ಜೊತೆಗೆ ಮನಸ್ಥಾಪವಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''ನಮ್ಮಿಬ್ಬರ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇರುವುದು ಸತ್ಯವೇ. ಆದರೆ ಅದು ಸಿನಿಮಾ ನಿಲ್ಲಿಸುವ ಮಟ್ಟದ್ದಲ್ಲ. ಅವರು ಸಾಕಷ್ಟು ಕಷ್ಟ ಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಆದರೆ ವಿತರಕರು ಹೀಗೆ ಕೈ ಕೊಟ್ಟಾಗ ಏನೂ ಮಾಡಲಾಗುವುದಿಲ್ಲ. ಅವರು ತಮ್ಮ ಸುತ್ತ ಇನ್ನೂ ಕೆಲವು ಸಹಾಯದ ಕೈಗಳನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಜನರನ್ನು ಇಟ್ಟುಕೊಳ್ಳಬೇಕು. ನಾನು ಈಗಾಗಲೇ ಎರಡು ಸಿನಿಮಾವನ್ನು ಸೂರಪ್ಪ ಬಾಬು ಜೊತೆ ಮಾಡಿದ್ದೇನೆ. ಅವರು ಒಳ್ಳೆಯ ಮನುಷ್ಯರೆ. ಕೆಲವು ಕೊರತೆಗಳು ಇವೆ, ಆದರೆ ಅವು ಯಾರಲ್ಲಿಲ್ಲ, ನನ್ನಲ್ಲೂ ಕೊರತೆಗಳಿವೆ. ನಮ್ಮ ಕುಟುಂಬದವರು ಏನೋ ಮಾತನಾಡಿದರು ಎಂದರೆ ಅವರನ್ನು ಬಿಟ್ಟುಕೊಡಲಾಗುತ್ತದೆಯೇ'' ಎಂದಿದ್ದಾರೆ ಸುದೀಪ್.

    English summary
    Sudeep said some people threatened theater owners not to show Kotigobba 3 movie. He said he has audio clippings.
    Saturday, October 16, 2021, 15:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X