ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ಅಲ್ಲ, ಬದುಕಿನ ಪಾಠ...!
ಕನ್ನಡದಲ್ಲಿ ಹೊಸಬರ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಈವರೆಗೆ ತೋರಿಸಿದ್ದನ್ನು ಹೊರತುಪಡಿಸಿ ಹೊಸತನದೊಂದಿಗೆ ಆಗಮಿಸುತ್ತಿದ್ದಾರೆ. ಇದಕ್ಕೆ ಮತ್ತೊಂದು ಸಾಕ್ಷಿಯೇ ಸೋಮು ಸೌಂಡ್ ಇಂಜಿನಿಯರ್.
ಹೌದು. ಸೋಮು ಸೌಂಡ್ ಇಂಜಿನಿಯರ್. ಇದು ಸಿನಿಮಾ ಅಲ್ಲ ಬದಲಿಗೆ ಸಿನಿಮಾದಂತೆ ಇರುವ ಬದುಕಿನ ಪಾಠ. ಇಲ್ಲಿ 'ಕಿಚ್ಚಿದೆ'.. ಹುಚ್ಚಿದೆ. 'ಸಂಬಂಧ'ದ ಬೆಲೆ ಇದೆ. 'ಪ್ರೀತಿ'ಯ ಸೆಲೆ ಇದೆ. ವಿನಯ ಹಾಗೂ ಅಹಂಕಾರದ ನಡುವೆ ಇರುವ ತೆಳುವಾದ ಗೆರೆ ಇದೆ. ವ್ಯಕ್ತಿಯ ವ್ಯಕ್ತಿತ್ವವನ್ನ ಸಮಾಜ ನೋಡುವ ದೃಷ್ಟಿ ಕೋನವೂ ಇದೆ. ನಿರ್ದೇಶಕ ಅಭಿ ಪೋಣಿಸಿರುವ ಈ ಸುಂದರ ಮುತ್ತುಗಳೆಲ್ಲವೂ ಬೆಳ್ಳಿ ಪರದೆಯಲ್ಲಿ ಹರಡಿಕೊಂಡಾಗ ಗಂಟಲು ಉಬ್ಬುತ್ತೆ. ಎದೆ ಭಾರವಾಗುತ್ತೆ.

ಈ ಚಿತ್ರದ ಮೂಲಕ ಅಭಿ ತಾನು ನಿಜಕ್ಕೂ ಸೂರಿ ಅವರ ಶಿಷ್ಯ ಅನ್ನುವುದನ್ನು ಸಾಬೀತು ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ವಿಪರೀತ ಭರವಸೆ ಮೂಡಿಸಿದ್ದಾರೆ. ಇನ್ನೂ ಶ್ರೇಷ್ಠ..ನಿವಿಷ್ಕಾ.. ಗಿರೀಶ್ ಜತ್ತಿ..ಹಾಗೂ ಜಹಾಂಗೀರ್ ಈ ಚಿತ್ರದ ಪ್ರಮುಖವಾದ ನಾಲ್ಕು ಅಧಾರ ಸ್ತಂಭಗಳು. ಒಂದು ಸ್ತಂಭದಲ್ಲಿ ಬಿರುಕು ಮೂಡಿದ್ದರೂ, ಅಭಿಯ ಕಥೆಯೆಂಬ ಕಟ್ಟಡ ಕುಸಿಯುವ ಭೀತಿ ಇತ್ತು. ಆದರೆ ಹಾಗಾಗದಂತೆ ಎಚ್ಚರಿಕೆಯನ್ನ ಇಲ್ಲಿ ಅಭಿ ವಹಿಸಿದ್ದಾರೆ.
ಯಶ್ ಶೆಟ್ಟಿ.. ಚಂದನ್ ಗೌಡ.. ಅಪೂರ್ವ.. ಹೀಗೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅಭಿನಯದ ಅ.ಆ.ಇ.ಈ ಗೊತ್ತಿಲ್ಲದ ಜನರಿಂದ ಕೂಡ ಅಭಿ ಇಲ್ಲಿ ಕೆಲಸ ತೆಗೆಸಿದ್ದಾರೆ. ಇವೆಲ್ಲ ಕಾರಣಗಳಿಂದ ನಮ್ಮ ಸುತ್ತ ಮುತ್ತವೇ ಘಟನೆಗಳು ಘಟಿಸುತ್ತಿವೆ ಎಂಬ ಭಾವನೆ ಮೂಡುತ್ತೆ.

ಅಭಿ ಜೊತೆ ಮಾತು ಪೋಣಿಸಿದ ಮಾಸ್ತಿ ಈ ಚಿತ್ರದ ಮೂಲಕ ಉತ್ತರ ಕರ್ನಾಟಕಕ್ಕೆ ಇನ್ನಷ್ಟು ಹತ್ತಿರವಾಗ್ತಾರೆ. ಅದರಲ್ಲಿ ಅನುಮಾನ ಇಲ್ಲ. ಚಿತ್ರದ ಕಥೆ ಆತ್ಮವಾದರೆ, ಚರಣ್ ರಾಜ್ ಸಂಗೀತ ಚಿತ್ರದ ಜೀವ. ಇನ್ನೂ ಇಂಥಹದ್ದೊಂದು ಹೊಸ ತಂಡಕ್ಕೆ ನಿರ್ಮಾಪಕರಾಗಿ ಜೊತೆ ನಿಂತ ಕ್ರಿಸ್ಟೋಫರ್ ಕಿಣಿ ಅಭಿನಂದನಾರ್ಹರು.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತರ ಕರ್ನಾಟಕದಿಂದ ಬಂದ ಹುಡುಗರು ನಿರ್ದೇಶಕರಾಗಿ ಗೆದ್ದಿರೋದು ಕಡಿಮೆ ಎನ್ನುವ ಮಾತು ಇದೆ. ಅಭಿ ಈ ಮಾತನ್ನ ಸುಳ್ಳಾಗಿಸಲು ಹೊರಟಿದ್ದಾರೆ. ಇನ್ನೇನಿದ್ದರೂ ನೀವು ಕೈ ಹಿಡಿಬೇಕಷ್ಟೇ


Click it and Unblock the Notifications









