'ಶುಗರ್ ಫ್ಯಾಕ್ಟರಿ'ಯ ಸಿಹಿ ಲವ್ ಕಹಾನಿ ಬಿಚ್ಚಿಟ್ಟ ಚೆಲುವೆಯರು
ದೀಪಕ್ ಅರಸ್ ನಿರ್ದೇಶನದ 'ಶುಗರ್ ಫ್ಯಾಕ್ಟರಿ' ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನದ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇತ್ತೀಚೆಗೆ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು.
'ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ಸೋನಲ್ ಮೊಂತೆರೊ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಆಕ್ಷನ್, ಸೆಂಟಿಮೆಂಟ್ ಎಲ್ಲಾ ಬೆರಸಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಯುವ ಜನತೆ ಮೆಚ್ಚುವಂತಹ ಸಿನಿಮಾ 'ಶುಗರ್ ಫ್ಯಾಕ್ಟರಿ' ಎಂದು ಚಿತ್ರತಂಡ ಹೇಳುತ್ತಿದೆ. ಮೂವರು ಹುಡುಗಿಯರ ಜೊತೆ ನಾಯಕ ಆರ್ಯನ ಲವ್, ಪ್ಯಾಚಪ್, ಬ್ರೇಕಪ್ ಕಹಾನಿಯೇ ಈ 'ಶುಗರ್ ಫ್ಯಾಕ್ಟರಿ'.

ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾಗಳಲ್ಲಿ ಇಬ್ಬರು, ಮೂವರು ನಾಯಕಿಯರು ನಟಿಸೋದು ಹೊಸದೇನು ಅಲ್ಲ. 'ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ಮೂವರು ಚೆಂದದ ನಾಯಕಿಯರು ಕಾಣಿಸಿಕೊಂಡಿದ್ದಾರೆ. ಸೋನಲ್, ಅದ್ವಿತಿ ಹಾಗೂ ರುಹಾನಿ ಸಿನಿಮಾ ರಿಲೀಸ್ ಡೇಟ್‌ಗಾಗಿ ಕಾಯುತ್ತಿದ್ದಾರೆ. ತಮ್ಮ ತಮ್ಮ ಪಾತ್ರಗಳ ಬಗ್ಗೆ ಖುಷಿಯಾಗಿರುವ ನಟಿಯರು ಪ್ರೇಕ್ಷಕರು ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.
'ಮಿ. ಮಿ. ರಾಮಾಚಾರಿ' ಚಿತ್ರದಲ್ಲಿ ಸಹೋದರಿ ಜೊತೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅದ್ವಿತಿ ಶೆಟ್ಟಿ ಈಗ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ಪಕ್ಕದ್ಮನೆ ಹುಡುಗಿಯಂತಹ ಪಾತ್ರದಲ್ಲಿ ಮಿಂಚಿದ್ದಾರೆ. ನಂದಿನಿ ಆಗಿ ಆರ್ಯನ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದ್ವಿತಿ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಫಿಲ್ಮಿಬೀಟ್‌ಗೆ ಜೊತೆ ಮಾತನಾಡಿದ್ದಾರೆ.
"ಚಿತ್ರದಲ್ಲಿ ನನ್ನ ಪಾತ್ರದ ಹೆಸ್ರು, ನಂದಿನಿ. ಬಹಳ ಸ್ಟ್ರೈಟ್ ಫಾರ್ವಡ್ ಆಗಿರೋ ಪಾತ್ರ. ಮನಸ್ಸಿಗೆ ಅನ್ನಿಸಿದನ್ನು ಹೇಳುವಂತಹ ಹುಡುಗಿ. ಲವ್, ಕಮೀಟ್‌ಮೆಂಟ್, ಮದುವೆ ಎಲ್ಲವನ್ನು ನಂಬುವಂತಹ ಪಾತ್ರ. ಕೃಷ್ಣ ಅವರ ಜೊತೆ ನನಗೆ ಪಂಚಿಂಗ್ ಡೈಲಾಗ್ಸ್ ಕೂಡ ಇದೆ. ಒಬ್ಬರಿಗೊಬ್ಬರು ಕೌಂಟರ್ ಕೊಡುವಂಥದ್ದು ಇದೆ. ಸಖತ್ ಫನ್ ಇರುವ ಪಾತ್ರ.
"ಎಲ್ಲಾ ಪಾತ್ರಗಳಿಗೂ ನಂಟಿದೆ. ಕಾಮಿಡಿ, ಎಮೋಷನ್ ಎಲ್ಲಾ ಸೇರಿಸಿ ಮಾಡಿರುವಂತಹ ಸಿನಿಮಾ. ನಾನು ಪೋಷಕ ನಟಿಯಾಗಿ ಬಂದು ಈಗ ಹೀರೋಯಿನ್ ತನಕ ಬಂದಿದ್ದೀನಿ. ಆ ಶ್ರಮ ನನಗೆ ಗೊತ್ತು. ನನಗೆ ಅಪ್ಪು ಸರ್ ಮಾತು ನೆನಪಾಗುತ್ತದೆ. ಯಶ್- ರಾಧಿಕಾ ಎಂಗೇಜ್‌ಮೆಂಟ್‌ನಲ್ಲಿ ನನ್ನ ಹಾಗೂ ನಮ್ಮ ಸಿಸ್ಟರ್‌ನ ನೋಡಿ ಗುರ್ತು ಹಿಡಿದು ಮಾತಾಡಿಸಿದರು. ನಮ್ಮನ್ನ ಹೇಗೆ ಗುರ್ತಿ ಇಟ್ಟುಕೊಂಡಿದ್ದೀರಾ ಅಂದಾಗ ಅವ್ರು ಹೇಳಿದ್ರು ಒಂದು ಸಿನಿಮಾ ಆಗೋಕೆ ಎಲ್ಲಾ ಪಾತ್ರಗಳು ಮುಖ್ಯ ಎಂದು ಹೇಳಿದ್ದರು. ಅದೇ ಈ ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ."
"ಮೈಸೂರು ಹಾಗೂ ಗೋವಾದಲ್ಲಿ ನನ್ನ ಭಾಗದ ಚಿತ್ರೀಕರಣ ನಡೀತು. ಮೈಸೂರು ಚಿತ್ರೀಕರಣ ಬಹಳ ಚೆನ್ನಾಗಿತ್ತು. ಒಂದು ಸನ್ನಿವೇಶದಲ್ಲಿ ಕೃಷ್ಣ ಮಿನಿ ಕೂಪರ್ ಕಾರ್ ಬರ್ತಾರೆ. ನಾನು ಸ್ಕೂಟರ್ ಅಲ್ಲಿ ಬರ್ತೀನಿ. ಕಾರ್ ಬಳಿಗೆ ತಂದು ಸ್ಕೂಟರ್ ನಿಲ್ಲಿಸ್ಬೇಕಿತ್ತು. ಅಷ್ಟು ಕಾಸ್ಟ್ಲಿ ಕಾರ್, ಏನಾದರೂ ಯಡವಟ್ಟಾಗಿ ಬಿಟ್ರೆ ಕಷ್ಟ ಅಂತ. ಒಂದೇ ಶಾಟ್‌ನಲ್ಲಿ ಟೇಕ್ ಓಕೆ ಆಯ್ತು" ಅಂತ ಅದ್ವಿತಿ ಸಿನಿಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಯೂಟ್ಯೂಬರ್ ಅಮುಲು ಪಾತ್ರದಲ್ಲಿ ರುಹಾನಿ ಶೆಟ್ಟಿ ನಟಿಸಿದ್ದಾರೆ. "ನನ್ನ ನಿಜ ಜೀವನಕ್ಕೆ ಬಹಳ ಹತ್ತಿರವಾದ ಪಾತ್ರ ಇದು. ನಾನು ಪಾತ್ರಕ್ಕಾಗಿ ಹೆಚ್ಚು ಹೋಂವರ್ಕ್ ಮಾಡಲಿಲ್ಲ. ಅಚಾನಕ್ ಆಗಿ ನನಗೆ ಈ ಅವಕಾಶ ಸಿಕ್ತು. ಬೇರೆ ಯಾರೋ ಈ ಪಾತ್ರಕ್ಕೆ ಆಯ್ಕೆ ಆಗಿದ್ದರು. ಆದರೆ ಬಳಿಕ ಅವ್ರನ್ನು ಕೈಬಿಟ್ಟು ನನಗೆ ಅವಕಾಶ ಕೊಟ್ಟರು. 'ಲವ್ ಮಾಕ್ಟೇಲ್' ಚಿತ್ರದಲ್ಲಿ ಜೋ ಪಾತ್ರ ನಾನೇ ಮಾಡ್ಬೇಕಿತ್ತು. ಕಾರಣಾಂತರಗಳಿಂದ ಆಗಿರಲಿಲ್ಲ. ಈ ಬಾರಿ ಕೃಷ್ಣ ಜೊತೆ ನಟಿಸೋ ಅವಕಾಶ ಬಿಡಬಾರದು ಅಂತ ಒಪ್ಪಿಕೊಂಡೆ" ಎಂದು ರುಹಾನಿ ಹೇಳಿದ್ದಾರೆ.
"ನನ್ನದು ಯಾವುದೇ ಯೂಟ್ಯೂಬ್ ಚಾನಲ್ ಇಲ್ಲ. ಈ ಸಿನಿಮಾ ಬಳಿಕ ನಾನು ಶುರು ಮಾಡಬೇಕು ಎನಿಸುತ್ತೆ. ಯೂಟ್ಯೂಬರ್ ಅಂದ್ರೆ ಪಟಪಟ ಮಾತನಾಡುತ್ತಿರುತ್ತಾರೆ. ಪ್ರಶ್ನೆಗಳನ್ನು ಹೇಳ್ತಿರ್ತಾರೆ. ನಾನು ನಿಜ ಜೀವನದಲ್ಲಿ ಸ್ವಲ್ಪ ಬಾಯ್ ಬಡಕಿ. ಹಾಗಾಗಿ ನನಗೆ ಇದು ಹೇಳಿಮಾಡಿಸಿದ ಪಾತ್ರ. ಹಾಗಾಗಿ ನನಗೆ ನಟಿಸೋದು ಸುಲಭ ಆಯಿತು."
"ಸಿನಿಮಾ ಶೂಟಿಂಗ್ ಹಬ್ಬದ ರೀತಿ ಇರ್ತಿತ್ತು. ಮುನ್ನೂರು, ನಾನೂರು ಜನ ಶೂಟಿಂಗ್ ಅಲ್ಲಿ ಇರ್ತಿದ್ರು. ಪ್ರತಿದಿನ ಜಾತ್ರೆ, ಹಬ್ಬದ ರೀತಿ ಇರ್ತಿತ್ತು. ಸೋನಲ್, ಅದ್ವಿತಿ ಜೊತೆ ಸೀನ್ಸ್ ಕಮ್ಮಿ. ನನ್ನ ಸೀನ್ಸ್ ಕೃಷ್ಣ ಹಾಗೂ ರಂಗಾಯಣ ರಘು ಸರ್ ಜೊತೆ ಇತ್ತು. ಆದರೂ ಮೂರು ಜನ ಐದಾರು ವರ್ಷಗಳಿಂದ ಪರಿಚಿತರು. ಮೂವರದ್ದು ಮಂಗಳೂರು, ಅಂದ್ಮೇಲೆ ಕೇಳ್ಬೇಕಾ" ಎಂದು ರುಹಾನಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.


Click it and Unblock the Notifications










