»   » ಒಂದೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ ಸಿಂಹಕಟಿ ಸೋನಾಲಿ ಮಾತಿದು. ಅವರೀಗ ಸಾಕಷ್ಟು ಬದಲಾಗಿದ್ದಾರೆ. ಇಂಥವರ ಮಾತನ್ನು ಕೇಳಿಯಾದರೂ ನಮ್ಮ ಸ್ಯಾಂಡಲ್‌ವುಡ್‌ ಬದಲಾಗಬೇಕು.

ಒಂದೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ ಸಿಂಹಕಟಿ ಸೋನಾಲಿ ಮಾತಿದು. ಅವರೀಗ ಸಾಕಷ್ಟು ಬದಲಾಗಿದ್ದಾರೆ. ಇಂಥವರ ಮಾತನ್ನು ಕೇಳಿಯಾದರೂ ನಮ್ಮ ಸ್ಯಾಂಡಲ್‌ವುಡ್‌ ಬದಲಾಗಬೇಕು.

Subscribe to Filmibeat Kannada

*ಅನಘ

ಯಾರಿಟ್ಟರೀ ಚುಕ್ಕಿ... ಯಾಕಿಟ್ಟರೀ ಚುಕ್ಕಿ.. ಹಾಡು ಗುನುಗುತ್ತಿದೆ. ಸಿಂಹಕಟಿಯ ಚೆಲುವೆ. ಬೀಗುತ್ತಿದ್ದಾಳೆ. ಬಾಗುತ್ತಿದ್ದಾಳೆ. ಶಿವರಾಜ್‌ ಸರಸರ ಹರಿದಾಡುತ್ತಿದ್ದಾರೆ. ನೋಡುಗ ಕಣ್ಣೆವೆಯಿಕ್ಕದೆ ತುಂಬಿಕೊಳ್ಳುತ್ತಿದ್ದಾನೆ. ಶಿವಣ್ಣ ಅವನ ಕಣ್ಣಿಗೇ ಬೀಳುತ್ತಿಲ್ಲ. ಅಂಥಾ ಪ್ರಖರ ಚೆಲುವು ಆಕೆಯದು.

ಪ್ರೀತ್ಸೆ ಚಿತ್ರದಲ್ಲಿನ ದೊಡ್ಡ ಸೆಳಕಾದ ಸೋನಾಲಿ ಬೇಂದ್ರೆ ಎಷ್ಟು ಚೆನ್ನಾಗಿದ್ದಾಳೆ ಅಂದಿದ್ದ ಕನ್ನಡದ ಪ್ರೇಕ್ಷಕ ಇವತ್ತು ಈಕೆಯ ಮಾತನ್ನು ಕೇಳಿ, ಬೇಸ್ತು ಬಿದ್ದರೂ ಅಚ್ಚರಿಯಿಲ್ಲ. ಕನ್ನಡದ ಚಿತ್ರಗಳಲ್ಲಿ ನಟಿಸುವ ಪ್ರಸ್ತಾವನೆಗೆ ಒಮ್ಮಿಂದೊಮ್ಮೆಗೇ ಒಲ್ಲೆ ಅನ್ನುತ್ತಿದ್ದಾರೆ ಸೋನಾಲಿ. ಕಾರಣ ಪ್ರೀತ್ಸೆ ಚಿತ್ರದಲ್ಲಿ ಆಕೆಯನ್ನು ನಡೆಸಿಕೊಂಡ ರೀತಿ ಸರಿಯಿರಲಿಲ್ಲವಂತೆ. ಆದರೆ ಪ್ರೇಕ್ಷಕನಿಗೆ ತೆರೆಮರೆಯಾಟಗಳು ಗೊತ್ತೇ ಆಗೋದಿಲ್ಲ ನೋಡಿ. ಜಗಳ- ಕಿರಿಕ್ಕುಗಳಲ್ಲೇ ಮುಳುಗಿಹೋಗುತ್ತಿರುವ ಸ್ಯಾಂಡಲ್‌ವುಡ್‌ ಸೋನಾಲಿ ಆಡಿರುವ ಮಾತನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ, ಸೋನಾಲಿಗೆ ಕನ್ನಡ ಸಿನಿಮಾ ಉದ್ದಿಮೆ ವರ್ಜ್ಯ. ದೇವರು ದೊಡ್ಡೋನು. ಅವರಿನ್ನೂ ಉಪ್ಪಿ, ಶಿವರಾಜ್‌ ಹೆಸರನ್ನು ಮರೆತಿಲ್ಲ.


ಸೋನಾಲಿಗೆ ಅಷ್ಟೊಂದು ಡಿಮ್ಯಾಂಡಾ?
ಪ್ರಾಯಶಃ ಯಾವುದೇ ‘ವುಡ್ಡಿ’ನಲ್ಲಾಗಲೀ(ಬಾಲಿವುಡ್ಡು, ಹಾಲಿವುಡ್ಡು ಹೀಗೆ..) ಚಿತ್ರಗಳು ಫ್ಲಾಪ್‌ ಆದರೂ, ಹಿರೋಯಿನ್‌ ಮಾತ್ರ ಎವರ್‌ಗ್ರೀನ್‌ ಅನ್ನುವುದು ಅಪರೂಪ. ಅಂಥಾ ಅಪರೂಪ ಸೋನಾಲಿ. ಕಳೆದ ಎಂಟು ವರ್ಷಗಳಲ್ಲಿ ಈಕೆಯ ಸುಮಾರಾಗಿ ಹಿಟ್‌ ಆದ ಚಿತ್ರ ದಿಲ್‌ಜಲೆ. ಸೂಪರ್‌ಹಿಟ್‌ ಅನ್ನುವಂಥದ್ದು ಸರ್ಫರೋಷ್‌. ಆದರೆ ಯಾವತ್ತೂ ಸೋನಾಲಿಗೆ ಅವಕಾಶ ಖಾಲಿಯಾಗಲೇ ಇಲ್ಲ. ಕಾರಣ ಆಕೆಯ ಬಡನಡು ! ಯಾವುದೋ ಒಂದು ಕ್ವಿಜ್‌ನಲ್ಲಿ, ಬಾಲಿವುಡ್‌ನ ಯಾವ ನಾಯಕಿ ಸೊಂಟ ಕಬ್ಬಿನ ಜಲ್ಲೆ ಅರ್ಥಾತ್‌ ತೀರಾ ಸಣ್ಣ ಅಂತ ಕೇಳಿದಾಗ, ಅನೇಕರು ಕೊಟ್ಟ ಉತ್ತರ ಸೋನಾಲಿ. ಆದರೆ ಇದು ತಪ್ಪು. ಊರ್ಮಿಳಾ ಮಾತೋಂಡ್ಕರ್‌ ಸೊಂಟ ಈಕೆಗಿಂತ ಚಿಕ್ಕದಂತೆ !

ಅದು ಒತ್ತಟ್ಟಿಗಿರಲಿ. ಬಿಂದಾಸ್‌ ಬಿಚ್ಚಮ್ಮನಾಗೇ ಐಡೆಂಟಿಟಿ ಕಂಡುಕೊಂಡ ಸೋನಾಲಿ ಈಗ ಬದಲಾಗಿದ್ದಾರೆ.ಅದು ಅವರನ್ನು ಮಾತಾಡಿಸಿದಾಗ ತಿಳಿಯಿತು...

ನೀವು ಬದಲಾಗಿದ್ದೀರಂತೆ. ಹೇಗೆ?
ಸಾಕಷ್ಟು ತಪ್ಪುಗಳನ್ನು ಮಾಡಿದೆ. ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂತ ತಿಳಿದದ್ದು ಮೊದಲ ತಪ್ಪು. ಪಾತ್ರಗಳ ಒಳ- ಹೊರಗುಗಳನ್ನು ನೋಡದೆಯೇ ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಇನ್ನೊಂದು ತಪ್ಪು. ಕನ್ನಡ ಸಿನಿಮಾದಲ್ಲಿ ನಟಿಸಿದ್ದು ಮತ್ತೊಂದು ತಪ್ಪು !
ಸಾಕಷ್ಟು ಪಾಠ ಕಲಿತಿದ್ದೇನೆ. ಈಗ ನಾನು ಖುಲ್ಲಂಖುಲ್ಲಾ ಬಿಚ್ಚಮ್ಮನಾಗಲು ಒಲ್ಲೆ. ಪಾತ್ರದಲ್ಲಿ ತೂಕ ಇರಬೇಕು !

ನಿಮ್ಮ ಬದಲಾವಣೆಯಿಂದ ಯಾವುದಾದರೂ ಚಿತ್ರದ ಆಫರ್‌ ಕಳಕೊಂಡಿದ್ದೀರಾ?
ಕಳಕೊಂಡಿದ್ದು ಅಂತ ಹೇಗಂತೀರಿ? ನಾನೇ ಬೇಡ ಅಂದಿದ್ದು. ‘ಅಸ್ತಿತ್ವ್‌’, ‘ಹೂ ತೂತೂ’, ‘ಚಾಂದಿನಿ ಬಾರ್‌’ನ ಆಫರ್‌ಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ಯಾಕೆ?
ಸಿಕ್ಕಾಪಟ್ಟೆ ಎಕ್ಸ್‌ಪೋಸ್‌ ಮಾಡಬೇಕಾಗಿತ್ತು. ಜೊತೆಗೆ ನನ್ನ ವಯೋಮಾನಕ್ಕೆ ಹೊಂದದ ಪಾತ್ರಗಳನ್ನು ಮಾಡಲು ಸುತಾರಾಂ ಇಷ್ಟವಿಲ್ಲ.

ಹಾಗಾದರೆ ನಿಮ್ಮ ಛಾಯ್ಸ್‌ ಯಾವುದು?
ಹೇಳಿದೆನಲ್ಲಾ, ಪಾತ್ರದಲ್ಲಿ ತೂಕ ಇರಬೇಕು.

ತೂಕ ಅಂದರೆ!?
ನನಗೆ ಸೆಕ್ಸಿ ನಾಯಕಿ ಅನ್ನುವ ಪಟ್ಟಿ ಕಟ್ಟಿದ್ದಾರಲ್ಲ, ಅದನ್ನು ಕಳಚಿಕೊಳ್ಳುವಂತಿರಬೇಕು. ಪಾತ್ರ ಖುಷಿ ಕೊಡುತ್ತದೆ ಅಂತ ನನಗನ್ನಿಸಬೇಕು. ನನ್ನ ವಯಸ್ಸಿನ ನಾಯಕನ ಅಮ್ಮನ ಪಾತ್ರ ಮಾಡು ಅಂದರೆ ಆಗುವುದಿಲ್ಲ.

ನೀವೂ ಮಾಡಲ್‌. ಮಾಜಿ ಮಿಸ್‌ ವರ್ಲ್ಡ್‌ ಐಶ್ವರ್ಯ ರೈ ಕೂಡ ಮಾಡೆಲ್‌. ಅವರು ಬಂದ ನಂತರ ನೀವು ಡಲ್‌ ಆದಿರಿ ಅನಿಸುವುದಿಲ್ಲವೇ?
ಹಾಗ್ಯಾಕೆ ಅಂದುಕೊಳ್ಳಬೇಕು? ಐಶ್ವರ್ಯ ಅದ್ಭುತ ಸುಂದರಿ. ಸಹಜವಾಗೇ ಆಕೆಗೆ ಅವಕಾಶ ಸಿಕ್ಕಿತು

ನಮ್ಮ ಪ್ರಶ್ನೆ ಅದಲ್ಲ...
ನಾನೇನು ಡಲ್ಲಾಗಲಿಲ್ಲ. ಆಕೆ ಶೈನ್‌ ಆದಳು. ಅವಳು ಅದಕ್ಕೆ ಸಂಪೂರ್ಣವಾಗಿ ಅರ್ಹಳು.

ಸಿನಿಮಾ ಜಗತ್ತಿನಲ್ಲಿ ನೀವು ಕಲಿತದ್ದೇನು?
ತಪ್ಪು ಮಾಡಿದ ಮೇಲೆ ಬುದ್ಧಿ ಬಂತು. ಈಗ ನಾನು ಚೂಸಿ. ಯಾವುದು ಟೊಳ್ಳು, ಯಾವುದು ಜೊಳ್ಳು ಅನ್ನೋದನ್ನ ಕಣ್ಣಳತೆಯಲ್ಲೇ ಲೆಕ್ಕ ಹಾಕಬಲ್ಲೆ. ಇದೇ ನಾನು ಕಲಿತದ್ದು.

ನಿಮ್ಮ ಫ್ಯೂಚರ್‌ ಪ್ಲಾನಿಂಗ್ಸ್‌?
ಸಿನಿಮಾಗಳು ಕೈಯಲ್ಲಿವೆ. ‘ತೇರಾ ಮೇರಾ ಸಾಥ್‌ ರಹೇ’ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ನಾನಾಯಿತು ನನ್ನ ಸಿನಿಮಾ ಆಯಿತು. ದೊಡ್ಡ ದೊಡ್ಡ ಯೋಜನೆಗಳೂ ಮನಸ್ಸಲ್ಲಿವೆ. ಅವು ಸೀಕ್ರೇಟ್ಸ್‌. ಹೇಳೋಲ್ಲ.

ನಿಮ್ಮನ್ನು ನೀವು ಕಂಡಂತೆ?
ತನ್ನ ಸುತ್ತಲ ಜಗತ್ತನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಮಹತ್ವಾಕಾಂಕ್ಷಿ.

What do you think?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada