ಕನ್ನಡ ಹಾಡು ಕೇಳಿದ್ದಕ್ಕೆ ಸೋನು ನಿಗಮ್ ಉದ್ಧಟತನ; ಕ್ಷಮೆ ಕೇಳಬೇಕೆಂದು ಆಗ್ರಹ
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಾಯಕ ಸೋನು ನಿಗಮ್ ಉದ್ಧಟತನ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ಕೂಡ ಗಾಯಕ ಸೋನು ನಿಗಮ್ ಹೇಳಿಕೆಯನ್ನು ಖಂಡಿಸಿವೆ. ಕೂಡಲೇ ಕ್ಷಮೆ ಕೇಳಿದಿದ್ದರೆ ಆತ ಕನ್ನಡ ಸಿನಿಮಾಗಳಲ್ಲಿ ಹಾಡದಂತೆ ತಡೆ ಕೋರುವುದಾಗಿ ಎಚ್ಚರಿ ನೀಡಿದ್ದಾರೆ.
ಸಂಗೀತಸಂಜೆ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ಕನ್ನಡ ಹಾಡು ಹಾಡುವಂತೆ ಕೆಲವರು ಕೂಗಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೋನು ನಿಗಮ್ "ಇದಕ್ಕೇನೇ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದು" ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಹಾಡು ಹಾಡುವಂತೆ ಕೇಳುವುದಕ್ಕೂ ಪಹಲ್ಗಾಮ್ ದಾಳಿಗೂ ಏನ್ ಸಂಬಂಧ. ಕನ್ನಡ ಹಾಡು ಹಾಡಿ ಎಂದು ಕೇಳುವುದು ಭಯೋತ್ಪಾದಕ ದಾಳಿಗೆ ಸಮವೇ? ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಕರವೇ ನಾರಾಯಣ ಗೌಡ್ರು ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. "ಪೊಲೀಸರು ಈ ಕೂಡಲೇ ಇವನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು. ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗುತ್ತೆ? ಕರ್ನಾಟಕದ ಯಾವ ನಿರ್ಮಾಪಕರೂ ಈತನಿಂದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವನ ಶೋ ನಡೆಸಲು ಮುಂದಾಗಬಾರದು. ತಪ್ಪಿದರೆ ಅವರೇ ಬೆಲೆ ತೆರಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ನಿರ್ಮಾಪಕ ಕೆಆರ್‌ಜಿ ಕಾರ್ತಿಕ್ ಗೌಡ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಭಯೋತ್ಪಾದಕ ಕೃತ್ಯವನ್ನು ಕನ್ನಡ ಹಾಡನ್ನು ಹಾಡಬೇಕೆಂಬ ವಿನಂತಿಗೆ ತಳುಕು ಹಾಕುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಅವರ ಹಿಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ, ಕನ್ನಡ ಹಾಡುಗಳನ್ನು ಹಾಡಿದ್ದಕ್ಕಾಗಿ ಕನ್ನಡಿಗರು ಇತರರಿಗಿಂತ ಹೆಚ್ಚಿನ ಪ್ರೀತಿ ತೋರಿಸಿತ್ತಾರೆ. ಈಗ ಈ ಮೂರ್ಖ ಹೇಳಿಕೆಯನ್ನು ಅವರು ತಮಾಷೆಯಾಗಿ ಹೇಳುತ್ತಿದ್ದರು. ಇದಕ್ಕಾಗಿ ಅವರು ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು" ಎಂದು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್‌ಗೂ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ ಹಾಡಿ ಗೆದ್ದವರು ಸೋನು ನಿಗಮ್. 'ಮುಂಗಾರುಮಳೆ' ಚಿತ್ರಕ್ಕೆ ಹಾಡಿ ಗೆದ್ದ ಬಳಿಕ ನೂರಾರು ಕನ್ನಡ ಹಾಡುಗಳನ್ನು ಹಾಡುವ ಅವಕಾಶ ಸಿಕ್ಕಿತ್ತು. ಅದಕ್ಕಾಗಿ ಭಾರೀ ಸಂಭಾವನೆಯನ್ನು ಪಡೆದರು. ಕರ್ನಾಟಕದಲ್ಲಿ ನಡೆಯುವ ಸಂಗೀತಸಂಜೆ ಕಾರ್ಯಕ್ರಮಗಳಿಗೆ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ. ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕನ್ನಡ ಹಾಡು ಹಾಡುವಂತೆ ಕೇಳುತ್ತಾರೆ. ಕರ್ನಾಟಕದಲ್ಲಿ ಕನ್ನಡ ಹಾಡು ಕೇಳುವುದು ತಪ್ಪೇ?
ಕನ್ನಡ ಭಾಷೆಯ ಅಸ್ತಿತ್ವಕ್ಕಾಗಿ ನಡೆಯುವ ಹೋರಾಟವನ್ನು ಇತ್ತೀಚೆಗೆ ಉತ್ತರ ಭಾರತದ ಮಂದಿ ತಪ್ಪಾಗಿ ಅರ್ಥೈಸುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳು ಕೂಡ ಸತ್ಯಾಸತ್ಯತೆ ತಿಳಿಯದೇ ಸುದ್ದಿ ಪ್ರಸಾರ ಮಾಡುತ್ತಿವೆ. ಇದು ಸಹಜವಾಗಿಯೇ ಉತ್ತರ ಭಾರತದಲ್ಲಿ ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ತಪ್ಪುಭಾವನೆ ಮೂಡುವಂತೆ ಮಾಡಿದೆ. ಸದ್ಯ ಕನ್ನಡ ಹಾಡು ಕೇಳಿದ್ದನ್ನು ಪಹಲ್ಗಾಮ್ ದಾಳಿಗೆ ಹೋಲಿಸಿರುವ ಸೋನು ನಿಗಮ್ ನಡೆಯನ್ನು ಕೂಡ ರಾಷ್ಟ್ರೀಯ ಮಾಧ್ಯಮಗಳು ಬೇರೆ ರೀತಿ ವರದಿ ಮಾಡಿವೆ.
ಕನ್ನಡ ಚಿತ್ರ ಸಂಭಾಷಣೆಕಾರ ಮಾಸ್ತಿ ಉಪ್ಪಾರಳ್ಳಿ ಕೂಡ ಸೋನು ನಿಗಮ್ ಸೊಕ್ಕಿನ ಮಾತಿಗೆ ಚಾಟಿ ಏಟು ಕೊಟ್ಟಿದ್ದಾರೆ. "ಇವತ್ತು ವೇದಿಕೆಯ ಮೇಲಿದ್ದ ಈತನನ್ನು ಕನ್ನಡ ಹಾಡು ಹಾಡೆಂದು ಕೇಳಿದಾಗ 'ಪೆಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದು ಇದೇ ಕಾರಣಕ್ಕೆ' ಎಂಬ ಬಾಲಿಶ ಹೇಳಿಕೆ ನೀಡಿದ್ದಾನೆ. ವರುಷಗಳಿಂದ ಕನ್ನಡಿಗರು ಯಾವ ಕಂಠವನ್ನು ಕೊಂಡಾಡುತ್ತಿದ್ದರೋ ಇಂದು ಅದೇ ಕಂಠ ತುಚ್ಚವಾಗಿ ಅಪಮಾನಿಸಿದೆ. ಎಸ್ ಪಿ ಬಾಲ ಸುಬ್ರಮಣ್ಯಮ್‌ರವರು "ನನಗೆ ಮುಂದಿನ ಜನುಮ ಅಂತ ಇದ್ದರೆ ಅದು ಕನ್ನಡ ನೆಲದಲ್ಲಿಯೇ ಇರಲಿ ನಾನು ಕನ್ನಡಿಗನಾಗಿಯೇ ಹುಟ್ಟಬೇಕು" ಎಂದು ನುಡಿದಿದ್ದರು. ಇದೆಲ್ಲಾ ಈ ಬಾಡಿಗೆ ಗಾಯಕ ಸೋನು ನಿಗಮ್ಮನಿಗೆ ಹೇಗೆ ತಾನೇ ತಿಳಿಯಬೇಕು. ಧಿಕ್ಕಾರವಿರಲಿ ಈ ಅಪ್ರಭುದ್ದನ ಅರಿವಿಗೆ" ಆಕ್ರೋಶ ಹೊರ ಹಾಕಿದ್ದಾರೆ.
"ಕನ್ನಡದ ಹಾಡು ಹಾಡಿ ಅಂತ ಕೇಳೋದಕ್ಕೂ ಪೆಹಲ್ಗಾಮ್ ಘಟನೆಗೂ ಏನು ಸಂಬಂಧ ಮೂರ್ಖ ಸೋನು ನಿಗಮ್. ಎಷ್ಟೇ ನಿಮಗೆ ಪ್ರೀತಿ ಕೊಟ್ರು ತಿಂದ ತಟ್ಟೆಯಲ್ಲಿ ಉಗುಳೋ ಬುದ್ದಿ ನಿಮ್ಮಂತವರು ಬಿಡೋಲ್ಲ.
ಕನ್ನಡ ಕನ್ನಡಿಗರು ಅಂದ್ರೆ ಅಷ್ಟು ಬಿಟ್ಟಿ ಬಿದ್ದಿದ್ದೀವಾ. ಕೂಡಲೇ ಕ್ಷಮೆ ಯಾಚಿಸಬೇಕು,
ಕನ್ನಡ ಚಿತ್ರರಂಗ ಇನ್ನೆಂದು ಇವನಿಗೆ ಹಾಡಲು ಅವಕಾಶ ಕೊಡಬೇಡಿ" ಎಂದು ಕನ್ನಡ ಪರ ಹೋರಾಟಗಾರ, ಮಾಜಿ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಟ್ಟೀಟ್ ಮಾಡಿದ್ದಾರೆ.
ಒಟ್ಟು 32 ಭಾಷೆಗಳಲ್ಲಿ 6000ಕ್ಕೂ ಅಧಿಕ ಹಾಡುಗಳನ್ನು ಸೋನು ನಿಗಮ್ ಹಾಡಿದ್ದಾರೆ. ಆದರೆ ಹಿಂದಿ ಬಿಟ್ಟರೆ ಕನ್ನಡ ಹಾಡುಗಳಿಗೆ ಹೆಚ್ಚು ಮೆಚ್ಚುಗೆ ಸಿಕ್ಕಿದೆ. ರಾಷ್ಟ್ರಪ್ರಶಸ್ತಿ, ಫಿಲ್ಮ್ ಫೇರ್ ಸೇರಿ ಹಲವು ಪ್ರಶಸ್ತಿಗಳು ಸೋನು ಮುಡಿಗೇರಿದೆ. ಗಾಯಕನಾಗಿ ಮಾತ್ರವಲ್ಲದೇ ಸಂಗೀತ ನಿರ್ದೇಶಕನಾಗಿ, ಕಂಠದಾನ ಕಲಾವಿದನಾಗಿಯೂ ಗುರ್ತಿಸಿಕೊಂಡಿದ್ದಾರೆ. ಹರ್ಯಾಣ ಮೂಲದ ಸೋನು ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಅಮೆರಿಕಾ, ಯೂರೋಪ್, ಆಫ್ರಿಕಾ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಸಂಗೀತಸಂಜೆ ಕಾರ್ಯಕ್ರಮಗಳಲ್ಲಿ ಹಾಡು ಹಾಡಿದ್ದಾರೆ.
12ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ವೇದಿಕೆಯಲ್ಲಿ ಸೋನು ನಿಗಮ್ ಮಾತನಾಡಿದ್ದರು. "ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿ ಹುಟ್ಟಿದ್ದೆ ಎನಿಸುತ್ತದೆ. ನಾನು ಹಿಂದಿ ಚಿತ್ರರಂಗದಿಂದ ಕನ್ನಡಕ್ಕೆ ಬಂದವನು, ಆದರೆ ಹಿಂದಿಗಿಂತಲೂ ಕನ್ನಡದಲ್ಲಿ ಒಳ್ಳೆಯ ಹಾಡುಗಳನ್ನು ಹಾಡಿದ್ದೇನೆ. ನಿಮ್ಮಿಂದ ಸಿಗುತ್ತಿರುವ ಪ್ರೀತಿಗೆ ನಾನು ಆಭಾರಿ. ನಾನು ಸಿಂಗಾಪುರ, ಅಮೆರಿಕಾ, ದುಬೈ ಎಲ್ಲೇ ಹೋದರೂ 'ಕನ್ನಡ' ಎನ್ನುವ ಕೂಗು ಕೇಳುತ್ತದೆ. ಆಗ ನಾನು 'ಅನಿಸುತ್ತಿದೆ ಯಾಕೋ ಇಂದು' ಹಾಡು ಹಾಡುತ್ತೇನೆ ಎಂದು ಹಾಡಿ ಕೇಳಿಸಿದ್ದರು ಸೋನು ನಿಗಮ್.
ಕನ್ನಡದ ಬಗ್ಗೆ ಅಷ್ಟೆಲ್ಲಾ ಅಭಿಮಾನದಿಂದ ಮಾತನಾಡುತ್ತಿದ್ದ ಸೋನು ನಿಗಮ್ ಈಗ ಯಾಕೆ ಹೀಗೆ ಹೇಳಿದರೂ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋನು ನಿಗಮ್ ಖಂಡಿತ ಕ್ಷಮೆ ಕೇಳುತ್ತಾರೆ ಎಂದು ಕೆಲವರು ಊಹಿಸುತ್ತಿದ್ದಾರೆ. ಎಷ್ಟೇ ಆದರೂ ಹಣದ ವಿಚಾರ ಇದು. ಕನ್ನಡ ಸಿನಿಮಾಗಳಲ್ಲಿ ಹಾಡು ಹಾಡಲು ಸೋನು ಲಕ್ಷ ಲಕ್ಷ ಎಣಿಸುತ್ತಾರೆ, ಸಂಗೀತ ಸಂಜೆ ಕಾರ್ಯಕ್ರಮಗಳಿಗೂ ಬಹಳ ಬೇಡಿಕೆ ಇದೆ. ಹಾಗಾಗಿ ಇದು ಅಚಾತುರ್ಯ ತೀವ್ರ ಸ್ವರೂಪ ಪಡೆಯಲು ಬಿಡಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
'ಭೂಮಿ' ಆಲ್ಬಮ್‌ಗಾಗಿ ಸಂಚಿತ್ ಹೆಗ್ಡೆ ಜೊತೆ ಸೇರಿ ಸೋನು ನಿಗಮ್ 'ಮಾಯಾವಿ' ಹಾಡು ಹಾಡಿದ್ದರು. ವಿಷ್ಣುವರ್ಧನ್ ನಟನೆಯ 'ಜೀವನದಿ' ಚಿತ್ರದ 'ಎಲ್ಲೋ ಯಾರೊ ಹೇಗೊ' ಸೋನು ಕನ್ನಡದಲ್ಲಿ ಹಾಡಿದ ಮೊದಲ ಹಾಡು. ಬಳಿಕ 'ಏಕಾಂಗಿ' ಸೇರಿ ಕೆಲ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. 'ಮುಂಗಾರುಮಳೆ' ಹಾಡುಗಳು ಹಿಟ್ ಆಗಿ ಬಹಳ ಕ್ರೇಜ್ ಶುರುವಾಯಿತು.
ಗಾಳಿಪಟ, ಮೊಗ್ಗಿನ ಮನಸ್ಸು, ಚಿತ್ರ, ಮುಸ್ಸಂಜೆ ಮಾತು, ಮಳೆಯಲಿ ಜೊತೆಯಲಿ ರೀತಿಯ ಹಿಟ್ ಸಿನಿಮಾಗಳಿಗೆ ಸೋನು ನಿಗಮ್ ಹಾಡುಗಳನ್ನು ಹಾಡಿದ್ದಾರೆ. 'ನೀನೆ ಬರಿ ನೀನೆ' ಆಲ್ಬಮ್‌ನಲ್ಲಿ ಒಟ್ಟು 9 ಹಾಡುಗಳನ್ನು ಹಾಡಿದ್ದು ವಿಶೇಷ. 'ಮಾರ್ಟಿನ್' ಚಿತ್ರದಲ್ಲಿ 'ಜೀವ ನೀನೆ' ಹಾಡು ಕೊನೆಯದಾಗಿ ಹಾಡಿದ್ದರು. ಸೋನು ನಿಗಮ್ ಅವರಿಗೆ ಮನೋಮೂರ್ತಿ, ವಿ. ಹರಿಕೃಷ್ಣ ಕನ್ನಡದಲ್ಲಿ ಹೆಚ್ಚ ಅವಕಾಶ ಕೊಟ್ಟಿದ್ದಾರೆ.


Click it and Unblock the Notifications











