ಪಹಲ್ಗಾಮ್‌ನಲ್ಲಿ ಪ್ಯಾಂಟ್ ಕಳಚುವಾಗ ಉಗ್ರರು ಭಾಷೆ ಕೇಳಿಲ್ಲ- ಸೋನು ನಿಗಂ..!
ಭಾರತದ ಖ್ಯಾತ ಗಾಯಕರಲ್ಲಿ ಸೋನು ನಿಗಮ್ ಕೂಡ ಒಬ್ಬರು. ಇವರು ಹಾಡು ಹಾಡುತ್ತಿದ್ದರೆ ಕೇಳುಗರು ಮೈ ಮರೆಯುತ್ತಾರೆ. ಕೇವಲ ಬಾಲಿವುಡ್ ನಲ್ಲಿ ಅಷ್ಟೇ ಅಲ್ಲ, ಇವರನ್ನು ಆರಾಧಿಸುವ ಅಸಂಖ್ಯಾತ ಭಕ್ತರು ದೇಶದೆಲ್ಲೆಡೆ ಇದ್ದಾರೆ. ಇನ್ನೂ ಹಿಂದಿ ಹೊರತು ಪಡಿಸಿ ಬೇರೆ ಭಾಷೆಗಳಿಗೆ ಹೋಲಿಸಿದರೆ ಸೋನು ನಿಗಮ್ ಕನ್ನಡಿಗರಿಗೆ ತುಸು ಹೆಚ್ಚೇ ಚಿರಪರಿಚಿತ ವ್ಯಕ್ತಿ.
ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು ಹಾಡನ್ನು ಇವತ್ತು ಕೂಡ ಕನ್ನಡಿಗರು ಮರೆತಿಲ್ಲ. ಹೃದಯವೇ ಬಯಸಿದೇ ನಿನ್ನನ್ನೇ.. ನಿನ್ನಿಂದಲೇ.. ಕಣ್ ಕಣ್ಣ ಸಲಿಗೆ.. ಈ ಸಂಜೆ ಯಾಕಾಗಿದೆ.. ಮೊದಲ ಮಳೆಯಂತೆ.. ಹೀಗೆ ಹಲವಾರು ಕನ್ನಡದ ಹಾಡುಗಳನ್ನು ಹಾಡಿರುವ ಸೋನು ನಿಗಮ್ ಹಲವು ವೇದಿಕೆಗಳಲ್ಲಿ ಕನ್ನಡದ ಕುರಿತು ಕನ್ನಡ ಚಿತ್ರರಂಗದ ಕುರಿತು ಅಭಿಮಾನದ ಮಾತುಗಳನ್ನಾಡಿದ್ದಾರೆ. ಕಾಲ ಕಾಲಕ್ಕೆ ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ. ಈ ಮೂಲಕ ಕನ್ನಡಿಗರ ಹೃದಯವನ್ನು ಕೂಡ ಗೆಲ್ಲುತ್ತಲೇ ಬಂದಿದ್ದಾರೆ.

ಇಂಥಾ ಸೋನು ನಿಗಂ ಮೊನ್ನೆಯಷ್ಟೇ ಕನ್ನಡಕ್ಕೆ ಅಪಮಾನ ಎಸಗಿದ್ದರು. ಕನ್ನಡಿಗರ ಕನ್ನಡಾಭಿಮಾನವನ್ನು ಕಾಶ್ಮೀರದಲ್ಲಿ ಆದ ಘಟನೆಗೆ ಹೋಲಿಸಿದ್ದರು. ಕನ್ನಡಿಗರು ಭಯೋತ್ಪಾದಕರು ಎಂಬ ಅರ್ಥದಲ್ಲಿ ಮಾತನಾಡಿದ್ದರು. ಕನ್ನಡಿಗರನ್ನು ಕೆರಳಿಸಿದ್ದರು. ಆಕ್ರೋಶಕ್ಕೆ ಗುರಿಯಾಗಿದ್ದರು.
ಸೋನು ನಿಗಂ ಎಸಗಿದ ಈ ಅಪಚಾರಕ್ಕೆ ಕರುನಾಡಿನೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸೋನು ನಿಗಂ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಸೋನು ನಿಗಂಗೆ ಕರೆದು ಹಾಡಲು ಅವಕಾಶ ನೀಡಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಅಜನೀಶ್ ಲೋಕನಾಥ್, ಹರಿಕೃಷ್ಣ ಅವರನ್ನೊಳಗೊಂಡಂತೆ ಅನೇಕರಿಗೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.
ಇದರ ನಡುವೆ ಇದೀಗ ವಾದ ವಿವಾದದ ಕುರಿತು ಸೋನು ನಿಗಂ ಮೌನ ಮುರಿದಿದ್ದಾರೆ. ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಅವತ್ತೇನಾಯ್ತು, ತಾವ್ಯಾಕೇ ಆ ಮಾತು ಹೇಳಿದ್ದು ಎನ್ನುವುದನ್ನು ಕೂಡ ಸೋನು ನಿಗಂ ವಿವರಿಸಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಆದ ವಿವಾದದ ಕುರಿತು ಮಾತನಾಡಿರುವ ಸೋನು ನಿಗಂ 'ಕನ್ನಡ.. ಕನ್ನಡ' ಎಂದು ಪ್ರೀತಿಯಿಂದ ಕರೆಯುವುದಕ್ಕೂ 'ಕನ್ನಡ.. ಕನ್ನಡ' ಎಂದು ಧಮ್ಕಿ ಹಾಕುವುದಕ್ಕೂ ತುಂಬಾನೇ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.
ನಾನು ಹಾಡು ಹಾಡುತ್ತಿದ್ದ ಸಮಯದಲ್ಲಿ ಕೆಳಗಡೆ ನಾಲ್ಕೈದು ಗೂಂಡಾಗಳು ಇದ್ದರು, ಕೂಗಾಡುತ್ತಿದ್ದರು ಎಂದಿರುವ ಸೋನು ನಿಗಂ ಅಲ್ಲಿದ್ದ ಸುಮಾರು ಜನ ಅವರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು, ವಾತಾವರಣ ಹಾಳು ಮಾಡಬೇಡಿ ಎಂದು ಮನವಿಯನ್ನು ಮಾಡುತ್ತಿದ್ದರು, ಆದರೆ..ಅವರು ಸುಮ್ಮನಾಗಲಿಲ್ಲ, ಹೀಗಾಗಿ ಪಹಲ್ಗಾಮ್‌ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಿಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.
ಮುಂದುವರೆದು ಕನ್ನಡಿಗರು ತುಂಬಾನೇ ಒಳ್ಳೆಯವರು ಎಂದು ಹೇಳಿರುವ ಸೋನು ನಿಗಂ ನೀವು ಯಾವುದೇ ರಾಜ್ಯವನ್ನು ತೆಗೆದುಕೊಳ್ಳಿ, ಪ್ರತಿಯೊಂದು ಪ್ರಾಂತ್ಯದಲ್ಲಿಯೂ ನಾಲ್ಕೈದು ಜನ ಕೆಟ್ಟವರು ಇದ್ದೇ ಇರುತ್ತಾರೆ ಎಂದು ಹೇಳಿರುವ ಸೋನು ನಿಗಂ ಬೇರೆಯವರಿಗೆ ಬೆದರಿಕೆ ಹಾಕುವ ಅವಕಾಶವನ್ನು ಅವರಿಗೆ ನೀಡಬಾರದು ಎಂದು ಹೇಳಿದ್ದಾರೆ. ಜಗತ್ತು ನಿಮ್ಮ ಜೊತೆ ಪ್ರೀತಿಯಿಂದ ನಡೆದುಕೊಳ್ಳುವಾಗ ಹೀಗೆಲ್ಲ ಮಾಡಬಾರದು ಎಂದು ಹೇಳಿದ್ದಾರೆ.
ಇನ್ನು ನಾನು ಪ್ರತಿ ಬಾರಿ ಕಾರ್ಯಕ್ರಮ ನೀಡುವಾಗ, ಒಂದು ಗಂಟೆಗಾಗುವಷ್ಟು ಕನ್ನಡದ ಹಾಡುಗಳನ್ನು ನನ್ನ ಜೊತೆ ನಾನು ತೆಗೆದುಕೊಂಡು ಬರುತ್ತೇನೆ ಈ ವಿಚಾರವನ್ನು ನಾನು ಹಲವಾರು ಬಾರಿ ಹೇಳಿದ್ದೇನೆ ಕೂಡ ಎಂದು ಹೇಳಿರುವ ಸೋನು ನಿಗಮ್, ಕೆರಳಿಸುವಂತಹ, ಉದ್ರೇಕಗೊಳಿಸವಂತಹ ವ್ಯಕ್ತಿಗಳು ಯಾರೇ ಆದರೂ ಕೂಡ ಅವರನ್ನು ಅಲ್ಲಿಯೇ ತಡೆಯಬೇಕು ಎಂದು ಹೇಳಿದ್ದಾರೆ. ಪ್ರೀತಿಯಿಂದ ತುಂಬಿರುವ ಮಣ್ಣಿನಲ್ಲಿ ದ್ವೇಷದ ಬೀಜ ಯಾರಾದರೂ ಬಿತ್ತುತ್ತಿದ್ದರೆ ಅವರನ್ನು ಕೂಡಲೇ ತಡೆಯಬೇಕು ಎಂದು ಹೇಳಿದ್ದಾರೆ.
ಕನ್ನಡಿಗರು ತುಂಬಾನೇ ಒಳ್ಳೆಯವರು, ಯಾರೋ ನಾಲ್ಕೈದು ವ್ಯಕ್ತಿಗಳು ದುರ್ವತನೆ ತೋರಿದ್ದಕ್ಕೆ ಕನ್ನಡಿಗರನ್ನು ದೂಷಿಸುವುದು ತಪ್ಪು ಎಂದು ಹೇಳಿರುವ ಸೋನು ನಿಗಂ, ಕಾರ್ಯಕ್ರಮದಲ್ಲಿ ನನ್ನ ಮೊದಲ ಹಾಡು ಮುಕ್ತಾಯವಾದ ನಂತರ, ಆ ನಾಲ್ಕು ಜನ ನನ್ನನ್ನೇ ಗುರಾಯಿಸುತ್ತಿದ್ದರು, ಹಾಡು ಹಾಡುವಂತೆ ಅವರು ಬೇಡಿಕೆಯನ್ನಿಡುತ್ತಿರಲಿಲ್ಲ ಬದಲಿಗೆ ಹಾಡು ಹಾಡಬೇಕೆಂದು ಬೆದರಿಕೆಯನ್ನು ಹಾಕುತ್ತಿದ್ದರು ಎಂದು ಹೇಳಿದ್ದಾರೆ. ಅವತ್ತು ನಡೆದ ಘಟನೆಯ ಬಗ್ಗೆ ಈ ಮೂಲಕ ವಿವರಣೆ ನೀಡಿದ್ದಾರೆ. ಅಲ್ಲಿದ್ದ ಯಾರಿಗಾದರೂ ಏನಾಯ್ತು ಎಂದು ನೀವು ಕೇಳಬಹುದು ಎಂದು ಹೇಳಿದ್ದಾರೆ.
ಸದ್ಯ ಸೋನು ನಿಗಂ ಅವತ್ತು ನಿಜಕ್ಕೂ ನಡೆದಿದ್ದೇನು ಎನ್ನುವುದರ ಕುರಿತು ತಮ್ಮ ಮಾತುಗಳನ್ನು ಹಂಚಿಕೊಂಡಿದ್ಧಾರೆ. ತಮ್ಮ ಸೈಡ್ ಆಫ್ ಸ್ಟೋರಿ ಹೇಳಿದ್ದಾರೆ. ಸೋನು ನಿಗಂ ಅವರ ಈ ಮಾತುಗಳಿಗೆ ಈಗ ಹೇಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











