ಕನ್ನಡಿಗರ ಹೃದಯದಲ್ಲಿ ನನ್ನ ಬಗ್ಗೆ ಇನ್ನಷ್ಟು ವಿಷದ ಬೀಜ ಬಿತ್ತಬೇಡಿ ; ಕೆರಳಿ ಕೆಂಡವಾದ ಸೋನು ನಿಗಮ್
ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ, ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ಇನ್ನು ಇದು ಸಾಲದೆಂಬಂತೆ ಸೋಶಿಯಲ್ ಮೀಡಿಯಾಗಳಲ್ಲಿ ನಕಲಿ ವ್ಯಕ್ತಿಗಳು ಈ ನಡುವೆ ಹೆಚ್ಚಾಗಿದ್ದಾರೆ.
ಯಾರದ್ದೋ ಹೆಸರಿನಲ್ಲಿ ಮತ್ಯಾರದ್ದೋ ಫೋಟೊವನ್ನು ಬಳಸಿಕೊಂಡು ಮಾಡಬಾರದ ಅನಾಚಾರವನ್ನೆಲ್ಲ ಹಲವಾರು ಜನ ಮಾಡುತ್ತಿದ್ದಾರೆ. ಸೆಲೆಬ್ರೀಟಿಗಳ ಪಾಡಂತೂ ಆ ದೇವರಿಗೆ ಪ್ರೀತಿ. ಕುಂತರು ನಿಂತರು ಟ್ರೋಲ್‌ಗೆ ಗುರಿಯಾಗುವ ಈ ತಾರೆಯರ ಹೆಸರಿನಲ್ಲಿ ಹಲವಾರು ಅಕೌಂಟ್‌ಗಳು ಸೋಶಿಯಲ್ ಮೀಡಿಯಾಗಳಲ್ಲಿರುತ್ತವೆ.

ಯಾವುದು ನಕಲಿ ಯಾವುದು ಅಸಲಿ ಎನ್ನುವುದು ಕಂಡು ಹಿಡಿಯುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತೆ. ಬ್ಲೂ ಟಿಕ್ ಇದ್ದರೂ ಕೂಡ ಕೆಲವೊಮ್ಮೆ ಆ ಖಾತೆ ನಕಲಿಯಾಗಿರುತ್ತೆ. ಹೀಗೆ ನಕಲಿ ವ್ಯಕ್ತಿಗಳು ಮಾಡುವ ಕೆಲಸದಿಂದ ಕೆಲ ಒಮ್ಮೆ ಅಸಲಿ ಸೆಲೆಬ್ರೀಟಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಇದಕ್ಕೆ ಸೋನು ನಿಗಮ್ ಸದ್ಯದ ಉದಾಹರಣೆ.
ಹೌದು.. ಕನ್ನಡ ಕನ್ನಡ ಕನ್ನಡ ಎಂದು ಹೇಳಿ ಕನ್ನಡಿಗರನ್ನು ಕೆಣಕಿದ್ದ, ಕನ್ನಡಿಗರ ಕನ್ನಡಾಭಿಮಾನವನ್ನು ಕಾಶ್ಮೀರದಲ್ಲಿ ಆದ ಘಟನೆಗೆ ಹೋಲಿಸಿದ್ದ, ಕನ್ನಡಿಗರು ಭಯೋತ್ಪಾದಕರು ಎಂಬ ಅರ್ಥದಲ್ಲಿ ಮಾತನಾಡಿ, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸೋನು ನಿಗಮ್ ಇಂದು ಕನ್ನಡಿಗರ ವಿರುದ್ದ ಮತ್ತೆ ತಿರುಗಿ ಬಿದ್ದಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು.
ಮೊನ್ನೆಯ ದಿನ ಬೆಂಗಳೂರಿನ ಚಂದಾಪುರ್ ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್ ಪ್ರಿಯಾಂಕಾ ಕನ್ನಡ ಮತ್ತು ಕನ್ನಡಿಗರಿಗೆ ಮಾಡಿದ್ದ ಅವಮಾನಕ್ಕೆ ಸೋನು ನಿಗಮ್ ಹೆಸರನ್ನು ಎಳೆದು ತರಲಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದ ತೇಜಸ್ವಿ ಸೂರ್ಯ ಅವರಿಗೆ 'ಕನ್ನಡ ಸಿನಿಮಾ ಹಿಂದಿಗೆ ಡಬ್ ಮಾಡಬೇಡಿ. ಕನ್ನಡ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ. ತೇಜಸ್ವಿ ಸೂರ್ಯ ಅವರೇ ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯೇ ಅಥವಾ ನೀವೋಬ್ಬ ಭಾಷಾ ಹೋರಾಟಗಾರ ಅಷ್ಟೆನಾ' ? ಎಂದು ಸೋನು ನಿಗಮ್ ಪ್ರಶ್ನೆ ಮಾಡಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸಲಾಗಿತ್ತು.
ಮಾಡಲಾದ ಟ್ವಿಟ್ ಖಾತೆಯ ಹೆಸರು ಸೋನು ನಿಗಮ್ ಎಂದು ಇದ್ದ ಕಾರಣಕ್ಕೆ ಸೋನು ನಿಗಮ್ ಮತ್ತೊಮ್ಮೆ ಕನ್ನಡಿಗರನ್ನು ಕೆಣಕಿದ್ದಾರೆ ಎಂದೇ ಅನೇಕರು ಅಂದುಕೊಂಡಿದ್ದರು. ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಮಾಧ್ಯಮಗಳು ಕೂಡ ಕನ್ನಡಿಗರ ವಿರುದ್ಧ ಸೋನು ನಿಗಮ್ ಆಕ್ರೋಶ ಎಂಬರ್ಥದಲ್ಲಿ ವರದಿಗಳನ್ನು ಕೂಡ ಮಾಡಿದವು. ಆದರೆ.. ವಾಸ್ತವದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಪ್ರಶ್ನೆಯನ್ನು ಅಸಲಿ ಸೋನು ನಿಗಮ್ ಮಾಡಿಯೇ ಇರಲಿಲ್ಲ. ಸೋನು ನಿಗಂ ಸಿಂಗ್ ಹೆಸರಲ್ಲಿ ವ್ಯಕ್ತಿ ಮಾಡಿದ್ದ ಕೆಲಸ ಇದಾಗಿತ್ತು.
ಹೀಗಾಗಿಯೇ ಕೆರಳಿ ಕೆಂಡವಾಗಿರುವ ಸೋನು ನಿಗಮ್ ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. 'ಟೈಮ್ಸ್ ಆಫ್ ಇಂಡಿಯಾ' ವರದಿಯನ್ನು ಉಲ್ಲೇಖಿಸಿರುವ ಸೋನು ನಿಗಮ್ 'ನಾನು ಟ್ವಿಟರ್‌ನಲ್ಲಿ ಇಲ್ಲ ಎನ್ನುವ ವಿಚಾರವನ್ನು ಎಷ್ಟು ಬಾರಿ ನಿಮಗೆಲ್ಲ ನಾನು ಹೇಳಿದ್ದೇನೆ. ನನ್ನ ಹೆಸರನ್ನು ಉಪಯೋಗಿಸಿಕೊಂಡು ತಪ್ಪು ಮಾಹಿತಿಯನ್ನು ಹರಡುವುದರಿಂದ ನನ್ನನ್ನೂ ಇಷ್ಟು ವರ್ಷಗಳ ಕಾಲ ಪ್ರೀತಿಸುತ್ತಾ ಬಂದ ಜನರ ಮನಸಿನಲ್ಲಿ ಇನ್ನೂ ವಿಷ ಬೀಜ ಬಿತ್ತಂತೆ ಆಗುತ್ತದೆ. ನಿಮ್ಮ ಸುದ್ದಿಗಳನ್ನು ಪರಿಶೀಲಿಸುವ ಪ್ರಜ್ಞೆ ಎಲ್ಲರಿಗೂ ಇರುವುದಿಲ್ಲ. ನಾಚಿಕೆಗೇಡು' ಎಂದು ಕಿಡಿ ಕಾರಿದ್ದಾರೆ.


Click it and Unblock the Notifications











