ಕನ್ನಡಿಗರನ್ನು ಸೋನು ನಿಗಂ ಅವಮಾನಿಸಿದ್ದು ಇದು ಮೊದಲೇನಲ್ಲ, ಅಪ್ಪು ಹಾಡು ಅರ್ಧಕ್ಕೆ ನಿಲ್ಲಿಸಿ ಗರಂ ಆಗಿದ್ದ ಗಾಯಕ..!
ಕನ್ನಡಿಗರು ವಿಶಾಲ ಹೃದಯದವರು. ಕಾಲ ಕಾಲಕ್ಕೆ ಈ ಮಾತನ್ನ ಸಾಬೀತು ಮಾಡಿದ ಹೆಗ್ಗಳಿಕೆ ಕೂಡ ಕನ್ನಡಿಗರದ್ದೇ. ಕನ್ನಡ ಚಿತ್ರಗಳನ್ನ ಕಡೆಗಣಿಸಿ ಹಿಂದಿ, ತೆಲುಗು, ತಮಿಳು, ಚಿತ್ರಗಳನ್ನ ಮೊದಲ ದಿನದಂದೆ ಕಣ್ತುಂಬಿಕೊಳ್ಳುವ 'ಹವ್ಯಾಸ'ವನ್ನ ಬೆಳೆಸಿಕೊಂಡಿರುವ ನಮ್ಮಲ್ಲಿನ ಅನೇಕರಿಗೆ ಕನ್ನಡದ ಗಾಯಕರು ಹಾಡುವ ಹಾಡುಗಳಿಗಿಂತ ಪಕ್ಕದ ಮನೆಯ ಅಪ್ರಬುದ್ಧ ಚೆಲುವ ಸೋನು ನಿಗಂ ಹಾಡುವ ಕನ್ನಡದ ಹಾಡುಗಳೆಂದ್ರೆ ತುಂಬಾನೇ ಅಚ್ಚು ಮೆಚ್ಚು.
ಇದಕ್ಕೆ ಕೈಗನ್ನಡಿ ಎನ್ನುವಂತೆ ಕರುನಾಡಿನಲ್ಲಿ ಎಲ್ಲೇ ಕಂಡರೂ ಸಾಕು, ಅನೇಕರು ಕನ್ನಡದ ಹಾಡು ಹಾಡಿ ಎಂಬ ಮನವಿಯನ್ನು ಮಾಡುತ್ತಾರೆ. ಕೆಲವೊಮ್ಮೆ ಗೋಗರೆಯುತ್ತಾರೆ. ಆದರೆ ದುರಾದೃಷ್ಟವಶಾತ್ ಕನ್ನಡಿಗರ ಈ ಪ್ರೀತಿ ಸೋನು ನಿಗಂಗೆ ಯಾವತ್ತೂ ಅರ್ಥವಾಗಲೇ ಇಲ್ಲ. ಕನ್ನಡ ಭಾಷೆಯ ಬಗ್ಗೆ ಕರುನಾಡಿನ ಬಗ್ಗೆ ಸೋನು ನಿಗಂ ಯಾವತ್ತು ಹೃದಯದಿಂದ ಮಾತನಾಡಲೇ ಇಲ್ಲ.

ಹೀಗಾಗಿಯೇ ಕಾಲ ಕಾಲಕ್ಕೆ ಕನ್ನಡಿಗರನ್ನು ಕಡೆಗಣಿಸುತ್ತಾ, ಕೆಣಕುತ್ತಾನೇ ಸೋನು ನಿಗಂ ಬಂದಿದ್ದಾರೆ. ಸೋನು ನಿಗಂ ಮಾತುಗಳನ್ನು ಹಿಂದಿನಿಂದಲೂ ಕನ್ನಡಿಗರು ಕಡೆಗಣಿಸುತ್ತಾನೇ ಬಂದಿದ್ದಾರೆ. ಅವತ್ತೇ ಪಾಠ ಕಲಿಸಿದ್ದರೆ ಇವತ್ತು ಸೋನು ನಿಗಂ ಕನ್ನಡವನ್ನು ಕಾಶ್ಮೀರದಲ್ಲಿ ಆದ ಘಟನೆಗೆ ಹೋಲಿಸುತ್ತಿರಲಿಲ್ಲ. ಕನ್ನಡಿಗರು ಭಯೋತ್ಪಾದಕರು ಎಂಬ ಅರ್ಥದಲ್ಲಿ ಮಾತನಾಡುತ್ತಿರಲಿಲ್ಲ.
ಹೌದು, ಅದು 2023ರ ಸಮಯ.ಈಗ ಸಂಸದರಾಗಿರುವ ಸುಧಾಕರ್ ಅವರು ಆಗ ಆರೋಗ್ಯ ಸಚಿವರಾಗಿದ್ದಾಗರು. ತಮ್ಮ ಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಒಂದಲ್ಲ, ಎರಡಲ್ಲ, ಒಂದು ವಾರ ನಡೆದಿದ್ದ ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಆ ಪೈಕಿ ಸೋನು ನಿಗಂ ಕೂಡ ಒಬ್ಬರು.
ಅವತ್ತು ಕಾರ್ಯಕ್ರಮಕ್ಕೆ ಬಂದಿದ್ದ ಸೋನು ನಿಗಂ, ಹಿಂದಿ ಹಾಡುಗಳನ್ನು ಒಂದಾದ ಮೇಲೊಂದರಂತೆ ಹಾಡಿದ್ದರು. ಆ ನಂತರ ಅಲ್ಲಿದ್ದ ಸಭಿಕರು ಒತ್ತಾಯ ಮಾಡದೇ ಇದ್ದರೂ ಕೂಡ ಕನ್ನಡ ಹಾಡು ಹಾಡಲು ಮುಂದಾಗಿದ್ದರು. ಅಪ್ಪು ಅಭಿನಯದ ಪರಮಾತ್ಮ ಚಿತ್ರದ ಪರವಶನಾದೆನು ಅರಿಯುವ ಮುನ್ನವೇ ಹಾಡನ್ನು ಹಾಡಲು ಶುರುಮಾಡಿದ್ದರು. ಆದರೆ ಅಲ್ಲಿದ್ದ ಸ್ಪೀಕರ್ ಈ ಸಮಯದಲ್ಲಿ ಹಾಳಾಗಿತ್ತು. ಧ್ವನಿ ಕರ್ಕಶವಾಗಿ ಕೇಳುತ್ತಿತ್ತು.
ಆಗ ಒಮ್ಮಿಂದೊಮ್ಮೆಲೆ ಹಾಡುವುದನ್ನು ನಿಲ್ಲಿಸಿ ಕೆರಳಿ ಕೆಂಡವಾಗಿದ್ದ ಸೋನು ನಿಗಂ ಯಾಕೆ ಕಿರುಚಾಡುತ್ತೀದ್ದೀರಾ ಎಂಬ ಪ್ರಶ್ನೆ ಕೇಳಿದ್ದರು. ಆ ನಂತರ ಸಡನ್ ಜ್ಞಾನೋದಯವಾದಂತೆ ನಾನು ಕನ್ನಡದ ದತ್ತು ಮಗ, ನಾನು ಕರ್ನಾಟಕಕ್ಕೆ ಬಂದಾಗಲೆಲ್ಲ ಕನ್ನಡ ಹಾಡುಗಳನ್ನು ತಪ್ಪದೇ ಹಾಡುತ್ತೇನೆ ಎಂದು ಹೇಳಿದ್ದರು. ತುಂಬಾ ಪ್ರೀತಿ ಮತ್ತು ಗೌರವದಿಂದ ನಾನು ಇಲ್ಲಿ ಬರುತ್ತೇನೆ, ನಾನು ಹಾಡಿದ ಅತ್ಯುತ್ತಮ ಹಾಡುಗಳಲ್ಲಿ ಕನ್ನಡದ ಅನೇಕ ಹಾಡುಗಳಿವೆ ಎಂದು ಹೇಳಿದ್ದರು. ಸೋನು ನಿಗಂ ಅವರ ಈ ಮಾತುಗಳಲ್ಲಿ ಸಿಟ್ಟಿತ್ತಾದರೂ ಕನ್ನಡದ ಬಗ್ಗೆ ಸೋನು ನಿಗಂ ಮಾತನಾಡಿದ್ದ ಮಾತುಗಳನ್ನು ಕೇಳಿದ ಅನೇಕರು ಶಿಳ್ಳೆ ಚಪ್ಪಾಳೆ ಹೊಡೆದಿದ್ದರು. ಇನ್ನೊಮ್ಮೆ ಹೀಗೆ ಮಾಡಿದರೆ ಕಾರ್ಯಕ್ರಮ ನಿಲ್ಲಿಸುವುದಾಗಿ ಎಚ್ಚರಿಕೆಯನ್ನು ನೀಡಿ ಸೋನು ನಿಗಂ ನಂತರ ಹಾಡು ಹಾಡಲು ಶುರು ಮಾಡಿದ್ದರು.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋನು ನಿಗಂ ಅವರ ಕನ್ನಡಾಭಿಮಾನ ಕೇವಲ ಮೇಲ್ನೋಟಕ್ಕೆ ಮಾತ್ರ ಸೀಮಿತ, ಅವಕಾಶಗಳನ್ನು ಪಡೆಯಲು ಸೋನು ನಿಗಂ ಕನ್ನಡ ಭಾಷೆಯನ್ನು ಉಪಯೋಗಿಸಿಕೊಂಡರೆ ಹೊರತು ಅವರ ಮನದಲ್ಲಿ ಕನ್ನಡಾಭಿಮಾನ ಇಲ್ಲ ಎನ್ನುವ ಅಭಿಪ್ರಾಯ ಈಗ ವ್ಯಕ್ತವಾಗುತ್ತಿದೆ. ಮೊದಲಿಂದ ಕೂಡ ಕನ್ನಡಿಗರನ್ನು ಕಡೆಗಣಿಸುತ್ತಾ ಬಂದ ಸೋನು ನಿಗಂ ವಿರುದ್ಧ ಈಗ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆ ಕೂಡ ಎದ್ದಿದೆ. ಸೋನು ನಿಗಂ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











