ಹಣದಾಸೆಗೆ ಜೂಜಾಡಿದ ಸೋನು ಶ್ರೀನಿವಾಸ್ ಗೌಡ, 5ಲಕ್ಷ ಹಣ ಗಳಿಸಲು ನಿಮ್ಮ ಆಶೀರ್ವಾದ ಬೇಕೆಂದ ರೀಲ್ಸ್ ರಾಣಿ..!
ಮನರಂಜನೆಗಾಗಿ ಆನ್ ಲೈನ್ ಗೇಮ್ ಆಡುವ ಹವ್ಯಾಸ ಆ ನಂತರ ಅಭ್ಯಾಸವಾಗುತ್ತೆ. ರಮ್ಮಿ ಗೇಮ್‌ನಂಥ ಆಟಗಳ ಚಟಕ್ಕೆ ಬಿದ್ದು ಕೆಲವರು ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಕ್ಯಾಸಿನೋಗೆ ತೆರಳುವ ಹುಚ್ಚು ಹತ್ತಿಸಿಕೊಂಡು ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ. ಇನ್ನು ಚಿತ್ರರಂಗದವರು ಇದರ ಪ್ರಚಾರವನ್ನು ಮಾಡುತ್ತಾರೆ. ಮತ್ತೂ ಹಲವರು ಹಣದಾಸೆಗೆ ತಾವೇ ಈ ಖೆಡ್ಡಾಗೆ ಬಿದ್ದು ತಮ್ಮ ಹಣವನ್ನು ಕೂಡ ಕಳೆದುಕೊಂಡಿದ್ದಾರೆ. ಇದಕ್ಕೆ ಸೋನು ಶ್ರೀನಿವಾಸ್ ಗೌಡ ಸದ್ಯದ ಉದಾಹರಣೆ.
ಹೌದು, ಸೋಶಿಯಲ್ ಮೀಡಿಯಾ ಮೂಲಕವೇ ಸ್ಟಾರ್ ಆದ ಸೋನು ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು ಜನರ ಹೃದಯವನ್ನೂ ಗೆದ್ದು ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದವರು. ಇನ್ನು ಎಲ್ಲರಿಗೆ ಗೊತ್ತಿರುವಂತೆ ಸೋನು ಗೌಡ ಒಂದು ಕಡೆ ಕೂರುವವರಲ್ಲ. ಸದಾ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಾನೇ ಇರುತ್ತಾರೆ. ಅದರಲ್ಲಿಯೂ ಗೋವಾ ಅಂದರೆ ಸೋನು ಗೌಡಗೆ ಪಂಚ ಪ್ರಾಣ.

ವರ್ಷದ 365ದಿನಗಳಲ್ಲಿ ಬಹುತೇಕ ದಿನಗಳಲ್ಲಿ ಗೋವಾದಲ್ಲಿ ಕಾಣಿಸಿಕೊಳ್ಳುವ ಸೋನು ಮೊನ್ನೆ ಮೊನ್ನೆ ಮತ್ತೊಮ್ಮೆ ಗೋವಾದ ಕಡಲ ಕಿನಾರೆಗಳನ್ನು ಕಣ್ತುಂಬಿಕೊಂಡು ಬಂದಿದ್ದಾರೆ. ಇಷ್ಟೇ ಅಲ್ಲ ಈ ಬಾರಿ ಕ್ಯಾಸಿನೊದೊಳಗೆ ಕಾಸು ಹಿಡಿದುಕೊಂಡು ಹೋಗಿದ್ದಾರೆ. ಕೈಯಲ್ಲಿದ್ದ ಅಷ್ಟು ಹಣವನ್ನು ಕಳೆದುಕೊಂಡು ಬಂದಿದ್ದಾರೆ.
ಈ ಕುರಿತು ವಿಡಿಯೋವನ್ನು ಮಾಡಿ ತಮ್ಮ ದುಃಖವನ್ನು ಹಂಚಿಕೊಂಡಿರುವ ಸೋನು ಮೊದಲಿಗೆ ಕೈಯಲ್ಲಿದ್ದ ಒಂದೂವರೆ ಲಕ್ಷ ಹಣ ತೋರಿಸಿದ್ದಾರೆ. ಒಂದೂವರೆ ಲಕ್ಷ ತಗೊಂಡುಒಳಗಡೆ ಹೋಗ್ತಿದ್ದೀನಿ ಇದನ್ನು ಐದು ಲಕ್ಷ ಮಾಡಿಕೊಂಡು ಬರಲು ನಿಮ್ಮ ಆಶೀರ್ವಾದ ನನಗೆ ಬೇಕಿದೆ ಎಂದು ಹೇಳಿದ್ದಾರೆ.
ಇನ್ನು, ಸಾಮಾನ್ಯವಾಗಿ ಕ್ಯಾಸಿನೋದಲ್ಲಿ ಆಡುವ ಜಾಗದಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಅವಕಾಶ ಇರುವುದಿಲ್ಲ. ಈ ಕಾರಣಕ್ಕೆ ಬಾತ್‌ರೂಮ್ ಒಳ ಹೊಕ್ಕಿರುವ ಸೋನು ತಮ್ಮ ಕಷ್ಟ ಹಂಚಿಕೊಂಡಿದ್ದಾರೆ. ನಷ್ಟದ ಲೆಕ್ಕ ಕೊಟ್ಟಿದ್ದಾರೆ. ಈಗ ಟೈಮ್ ರಾತ್ರಿ 11 ಗಂಟೆ ಆಗಿದೆ. ತಗೊಂಡು ಹೋಗಿದ್ದ ಒಂದೂವರೆ ಲಕ್ಷದಲ್ಲಿ ನನ್ನ ಬಳಿ ಕೇವಲ 14 ಸಾವಿರ ಅಷ್ಟೇ ಇದೆ, ಎಲ್ಲ ಹೋಯ್ತು ಎಂದಿರುವ ಸೋನು, ರಿಯಲ್ ಗೇಮ್‌ನಲ್ಲಿಯೇ ನಾವು ಗೆಲ್ಲೋಕೆ ಆಗಿಲ್ಲ ಅಂದರೆ ನನ್ನನ್ನೂ ಸೇರಿ ಆನ್‌ಲೈನ್‌ನಲ್ಲಿ ಪ್ರಮೋಶನ್ ಮಾಡ್ತಾರಲ್ಲ ಅದರಲ್ಲಿ ಗೆಲ್ಲೋಕೆ ಆಗುತ್ತಾ ಎಂದು ಪ್ರಶ್ನೆ ಕೇಳಿದ್ದಾರೆ.
ನಾನು ತುಂಬಾ ಸಲ ಹೇಳಿದ್ದೀನಿ ನಾನು ಪ್ರಮೋಷನ್ ಮಾಡೋದು ಕೇವಲ ಪ್ರಮೋಷನ್ ಅಷ್ಟೇ ಅದನ್ನು ನಂಬಿ ಯಾರು ಹೂಡಿಕೆ ಮಾಡಬೇಡಿ, ನಿಮ್ಮ ಬುದ್ದಿ ನಿಮ್ಮ ಕೈಯಲ್ಲಿರಲಿ ಎಂದಿರುವ ಸೋನು ಇಲ್ಲಿ ಹುಬ್ಭಳ್ಳಿ-ಧಾರವಾಡ ಆಕಡೆಯವರೇ ನನ್ನ ಜೊತೆ ಇಲ್ಲಿ ಇದ್ದಿದ್ದು ಆಲ್ ಮೋಸ್ಟ್ ಎಲ್ಲರೂ ಹಣ ಕಳ್ಕೊಂಡಿದ್ದಾರೆ ಆದರೆ ಒಬ್ಬೊಬ್ಬರು 30 ಲಕ್ಷ ಗೆದ್ದಿದೀವಿ, 40 ಲಕ್ಷ ಗೆದ್ದಿದೀವೆ ಎಂದೆಲ್ಲ ಹೇಳಿದ್ದಾರೆ. ಎಲ್ಲ ಲಕ್ ಏನೂ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ. ಯಾವಾಗ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅಂತ ಹೇಳೋಕಾಗಲ್ಲ ನಿಮ್ಮ ಬುದ್ದಿ ನಿಮ್ಮ ಕೈಯಲ್ಲಿರಲಿ ಎಂದಿರುವ ಸೋನು ಬೆಟ್ಟಿಂಗ್ ಆಡುವ ಹುಚ್ಚಿನಲ್ಲಿ ನಾನಿನ್ನೂ ಊಟನೇ ಮಾಡಿಲ್ಲ ಎಂದು ಹೇಳಿದ್ಧಾರೆ
ಆ ನಂತರ ಮತ್ತೆ ಆಡೋಕೆ ಹೋಗಿ ಕೈಯಲ್ಲಿದ್ದ 14 ಸಾವಿರ ಹಣವನ್ನು ಕಳ್ಕೊಂಡು ರಾತ್ರಿ 12-52ಕ್ಕೆ ತಮ್ಮ ರೂಮ್ ಸೇರಿಕೊಂಡಿದ್ದಾರೆ. ಎಲ್ಲ ಹೋಯ್ತು ಎಂದು ತಮ್ಮ ಮನದ ಬೇಸರವನ್ನು ಹೊರ ಹಾಕಿದ್ದಾರೆ. ಇಷ್ಟೊಂದು ದುಡ್ಡು ತಗೊಂಡು ಆಡಬಾರದೆನ್ನುವ ಬುದ್ದಿ ನನಗೆ ಬಂತು ಎಂದಿರುವ ಸೋನು ಅನುಭವ ಆದರೆ ತಾನೇ ಎಲ್ಲ ಗೊತ್ತಾಗೋದು ಅಲ್ವಾ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ವಿಡಿಯೋಗೆ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇಷ್ಟೊಂದು ಹಣವನ್ನು ಸೋನು ಗೌಡ ಹೇಗೆ ಸಂಪಾದಿಸುತ್ತಾರೆ ಎಂದು ಕೆಲವರು ಚರ್ಚೆಯನ್ನು ಮಾಡುತ್ತಿದ್ದರೆ ಇನ್ನು ಕೆಲವರು ಬಡವರಿಗಾದರೂ ಆ ಹಣ ನೀಡಿದ್ದರೆ ಅವರಿಗೆ ಉಪಯೋಗವಾದರೂ ಆಗ್ತಿತ್ತು ಎಂದು ಸೋನು ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧಾರೆ.


Click it and Unblock the Notifications











