twitter
    For Quick Alerts
    ALLOW NOTIFICATIONS  
    For Daily Alerts

    ಗಾಯಕ ಸೋನು ನಟನಾದಾಗ...

    By Super
    |

    Popular voice in Kannada Sonu Nigam is shifting as an actor rather to Retain as a playback singer
    'ಸಾಕಾಗಿ ಹೋಗಿದೆ. ಸಂಗೀತ ಎಷ್ಟು ಜನರನ್ನ ತಲುಪುತ್ತದೆ ಹೇಳಿ? ಸಿನಿಮಾದ ಪಾತ್ರಗಳು ಹೊಗುವಷ್ಟು ಆಳಕ್ಕೆ ಹಾಡುಗಾರ ಹೊಗುವನೇ? ವರ್ಷಗಳಿಂದ ನಟನೆಗೆ ಧುಮುಕಲೋ ಬೇಡವೋ ಎಂಬ ಲೆಕ್ಕಾಚಾರದಲ್ಲೇ ಕಳೆದಿದ್ದೆ. ಈಗ ಕಾಲ ಕೂಡಿಬಂದಿದೆ. ಹ್ಞಾಂ, ನನ್ನ ರೇಟೂ ಜಾಸ್ತಿ ಮಾಡ್ಕೊಂಡಿದೀನಿ".

    ಕಳೆದ ಎರಡು ಮೂರು ವರ್ಷಗಳಲ್ಲಿ 25ಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿರುವ ಬಹು ಭಾಷಾ ಗಾಯಕ ಸೋನು ನಿಗಂ ಮಾತುಗಳಿವು. ಬ್ರಿಗೇಡ್‌ ರಸ್ತೆಯ ಪ್ಲಾನೆಟ್‌ ಎಂ ಉದ್ಘಾಟಿಸಲು ಮೊನ್ನೆಯಷ್ಟೇ ಬೆಂಗಳೂರಿಗೆ ಬಂದು ಹೋದ ಸೋನು ಕಣ್ಣಲ್ಲಿ ನಟನೊಬ್ಬನ ಚರಿಷ್ಮಾ ಇಣುಕುತ್ತಿತ್ತು. ಸೋನು ಬೆಂಗಳೂರಿಗೆ ಬಂದು ಹೋಗುವುದು ಪದೇ ಪದೇ ನಡೆದಿತ್ತಾದರೂ ಈ ಸಲ ಅದರಲ್ಲೇನೋ ಹೊಸ ಗಮ್ಮತ್ತು. ರೇಟ್‌ ಜಾಸ್ತಿ ಮಾಡ್ಕೊಂಡಿದೀನಿ ಅಂದಾಗ ಕೆಲವರೂ ಬೆಚ್ಚಿದ್ದೂ ಉಂಟು. ಅದೇ ಬ್ರಿಗೇಡ್‌ ರೋಡಿನಲ್ಲಿ ಹಾದು ಹೋದ ಕಾರೊಂದರ ಡೆಕ್‌ನಲ್ಲಿ ಬಾವ ಬಾಮೈದ ಚಿತ್ರದ ಪ್ರೀತಿ ನೀ ನಿಲ್ಲದೆ ನಾ ಹೇಗಿರಲಿ ಹಾಡಿನ ಅಲೆ. ಅದು ಈಗ ಹಸುರಾಗಿರುವ ಸೋನು ಕನ್ನಡ ಹಾಡು.

    ಸೋನು ಮತ್ತು ಕನ್ನಡ ಹಾಡು
    ಕನ್ನಡದಲ್ಲಿ ಪರಭಾಷಾ ಗಾಯಕರ ಹಿಂಡು ಲಗ್ಗೆಯಿಕ್ಕುತ್ತಿರುವುದು ಸುದ್ದಿಯಾಗುವಷ್ಟರಲ್ಲಿ ಸೋನು ಕನ್ನಡಕ್ಕೆ ತೀರಾ ಹಳಬರಾಗಿಬಿಟ್ಟಿದ್ದರು. ಸ್ಯಾಂಡಲ್‌ವುಡ್‌ಗೆ ಮಜ್ನೂ ಮೂಲಕ ಗುರುಕಿರಣ್‌ ಕರೆ ತಂದ ಈ ಕಂಠ ಹಂಸ್‌ಗೂ ಮೆಚ್ಚಾಯಿತು. ಹಂಸವೇ ಹಂಸವೇ ಎಂದು ಹಂಸ್‌ ಇದೇ ಸೋನು ಕಂಠದಲ್ಲಿ ಹಾಡಿಸಿದರು. ಸೋನು ಕನ್ನಡ ಹಿಚಿಕಿಚಿಯಲ್ಲ. ಅವರು ಹೆಚ್ಚು ಟೇಕ್‌ಗಳನ್ನೂ ತಗೋಳೋದಿಲ್ಲ ಎನ್ನುತ್ತಾರೆ ಹಂಸ್‌. ಪರಭಾಷಾ ಗಾಯಕರ ಪೈಕಿ ಇವರ ಕನ್ನಡ ಉಚ್ಚಾರಣೆ ಪಕ್ಕಾ ಪರ್ಫೆಕ್ಟ್‌. ಸೋನು ಗೆಲ್ಲುವ ಕುದುರೆ ಕೂಡ. ಟೈಟಾನಿಕ್‌ ಹೀರೋಯಿನ್‌ ನನ್ನ ಚೆಲುವೆ, ಅಹ ಎಲ್ಲೆಲ್ಲು ಹಬ್ಬ ಕಣ್ಣಿಗೆ, ಝುಂಝುಂ ಝುಂಝುಂ ರೋಮಾಂಚನ ಒಂದರ ಹಿಂದೊಂದು ಹಿಟ್‌ ಗೀತೆಗಳು. ಎಲ್ಲದರಲ್ಲೂ ಸೋನು ಕಂಠ.

    ಆದರಿನ್ನು ಸೋನು ಕಂಠ ತುಟ್ಟಿ. ಯಾಕೆಂದರೆ ಅವರೀಗ ಎರಡು ಸಿನಿಮಾಗಳ ಹೀರೋ. ಇನ್ನಷ್ಟು ಸಿನಿಮಾ ಆಫರ್‌ಗಳ ಪಟ್ಟಿ ಕೈಯಲ್ಲಿದೆ. ರಾಜ್‌ಕುಮಾರ್‌ ಕೊಹ್ಲಿ ನಿರ್ಮಾಣದ 'ಜಾನಿ ದುಶ್ಮನ್‌" ಹಾಗೂ ರಾಜ್‌ ಬಬ್ಬರ್‌ ನಿರ್ಮಾಣದ 'ಕಾಶ್‌ ಆಪ್‌ ಹಮಾರೇ ಹೋತೇ" ಚಿತ್ರಗಳು ಮುಂದಿನ ವರ್ಷ ಮೊದಲ ತಿಂಗಳಲ್ಲಿ ತೆರೆಗೆ ಬರಲಿವೆ. ಈ ಎರಡರಲ್ಲೂ ಸೋನು ನಾಯಕ.

    ನಟನೆ ಸೋನುಗೆ ಹೊಸದೇನಲ್ಲ, ಕಾಂ ಚೋರ್‌, ಬೇತಾಬ್‌, ತಕ್ದೀರ್‌ಗಳಲ್ಲಿ ಬಾಲನಟನಾಗಿ ಅಭಿನಯಿಸಿರುವ ಅನುಭವ ಇದೆ. ಆದರೆ ಅದಕ್ಕೂ ಮೀರಿದ ಅನುಭವ ಗಾಯನದ್ದು.

    ತಮ್ಮ ಬಾಲ್ಯದ ಆ ದಿನಗಳು ಸೋನು ನೆನಪಿಗೆ ಬಾರವೆ?
    ಸೋನು ಅಪ್ಪ ಅಗಂ ಕುಮಾರ್‌ ಅವರದು ಸೊಗಸಾದ ಕಂಠ. ಹರಿಯಾಣದವರು. ದೆಹಲಿಗೆ ಬಂದು ಸೆಟ್ಲ್‌ ಆದರು. ಸೋನು ಆಗಿನ್ನೂ 3 ವರ್ಷದ ಹುಡುಗ. ಮೊಹಮ್ಮದ್‌ ರಫಿ ಹಾಡುಗಳನ್ನು ರೇಡಿಯೋದಲ್ಲಿ ಕೇಳಿ ಆಗಲೇ ಅನುಕರಿಸಲು ಶುರುವಿಟ್ಟಿದ್ದ ಬಾಲ ಸೋನು. ಹೊಟ್ಟೆಪಾಡಿಗಾಗಿ ಮದುವೆ ಸಮಾರಂಭ ಅಲ್ಲಿ ಇಲ್ಲಿ ಅಂತ ಹಾಡುತ್ತಿದ್ದರು ಅಗಂ. ಮಗನನ್ನೂ ಜೊತೆಗೆ ಕರೆದುಕೊಂಡು ಹೋಗಿ, ಹಾಡುವ ಅವಕಾಶ ಕೊಟ್ಟರು. ಅಪ್ಪ ಎಂದರೆ ಸೋನುಗೆ ಗುರು, ಪ್ರೀತಿ, ನೆಚ್ಚು ಎಲ್ಲ. ಹೀಗಾಗೇ ಸೋನು ಕಂಠ ಬರಬರುತ್ತಾ ಮೊನಚಾದದ್ದು.

    ಮಧುರಿಮಾ ಎಂಬಾಕೆ ಸೋನುಗೆ ಸ್ಫೂರ್ತಿ. ಅವರೇ ಸೋನು ಬಾಳ ಸಂಗಾತಿ ಕೂಡ ಆಗಲಿದ್ದಾರೆ. ಅದಕ್ಕಾಗೇ ಜೀವನದಲ್ಲಿ ನೆಲೆಯೂರುವ ಇರಾದೆ. ನಟನೆಗೆ ಜಿಗಿತ. ಪಾಪ್‌ ಆಲ್ಬಂಗಳನ್ನು ಮಾಡಲು ಶುರುವಿಟ್ಟಾಗಲೇ ಸ್ಫುರದ್ರೂಪಿ ಸೋನುಗೆ ಸಿನಿಮಾ ನಟನೆಯ ಆಫರ್‌ಗಳು ಹರಿದುಬಂದಿದ್ದವು. ಆದರೆ ಮೂರನೇ ವಯಸ್ಸಲ್ಲಿ ಒಳಗೆ ಹುಟ್ಟುಕೊಂಡಿದ್ದ ಗಾಯಕ ಜೀವಂತವಾಗಿದ್ದ. ನಟನೆ ಒಲ್ಲೆ ಅಂದುಬಿಟ್ಟರು. ಈಗ ಅದೇ ನಟನೆ ಆಪ್ಯಾಯಮಾನ. ಹಾಡು ಕೇಳುವವರ ಸಂಖ್ಯೆ ಬಗೆಗೇ ಸೋನುಗೆ ಅನುಮಾನ.

    ಎದೆ ತುಂಬಿ ಹಾಡುವ ಎಸ್ಪಿ ಬಾಲು ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಅದು ಪಾರ್ಟ್‌ ಟೈಂ. ಇವತ್ತೂ ಅವರು ಬದುಕಿರುವುದು ಗಾಯಕರಾಗಿಯೇ. ಬೆಂಗಳೂರು ಹುಡುಗಿ ವಸುಂಧರಾ ದಾಸ್‌ಗೆ ಅವಕಾಶಗಳು ಹರಿದು ಬರುತ್ತಿದ್ದರೂ ಗಾಯಕಿಯಾಗೇ ಉಳಿಯೋದು ಆಕೆಯ ಬಯಕೆ. ಇಂಥಾದರಲ್ಲಿ ಸೋನುಗೆ ಗಾಯನದ ಬಗೆಗೇ ಉಡಾಫೆ ಧೋರಣೆ ಹುಟ್ಟಿರುವುದು ದುರಂತವೇ ಸರಿ. ಇನ್ನು ಹಂಸ್‌ ಗೀತೆ, ಗುರುಕಿರಣ್‌ ಗಾಥೆಗೆ ಸೋನು ಸಪೋರ್ಟ್‌ ಇರುವುದಿಲ್ಲ ಎಂದಾಯಿತು. ಯಾಕೆಂದರೆ ಸೋನು ತಮ್ಮ ರೇಟ್‌ ಹೆಚ್ಚಿಸಿಕೊಂಡಿದ್ದಾರೆ !

    English summary
    Popular voice in Kannada Sonu Nigam is shifting as an actor rather to retain as a playback singer
    Thursday, August 8, 2013, 11:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X