Garadi Trailer: "ಬಡವಂಗ್ನೆ ಯಾವನೂ ನ್ಯಾಯ ಕೊಡಲ್ಲ ತಮ್ಮಾ": ಮಾಸ್‌ಗೆ ಮಾಸ್, ಕ್ಲಾಸ್‌ಗೆ ಕ್ಲಾಸ್ 'ಗರಡಿ'
ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿರುವ 'ಗರಡಿ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ರಾಣೆಬೆನ್ನೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಟ ದರ್ಶನ್ ಟ್ರೈಲರ್ ಲಾಂಚ್ ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 'ಗರಡಿ' ಗತ್ತು ಪ್ರದರ್ಶನವಾಯಿತು.
ಯಶಸ್ ಸೂರ್ಯ ಹೀರೊ ಆಗಿ ನಟಿಸಿರುವ 'ಗರಡಿ' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಬಿ. ಸಿ ಪಾಟೀಲ್ ಸಿನಿಮಾ ನಿರ್ಮಿಸಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸೋನಲ್ ಮಂಥೆರೊ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ನಾಯಕ ಸೂರಿಯ ಅಣ್ಣನ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿವೆ.

ಯೋಗರಾಜ್ ಭಟ್ ಸಾಮಾನ್ಯವಾಗಿ ಲವ್ ಸ್ಟೋರಿ ಸಿನಿಮಾಗಳನ್ನು ಹೆಚ್ಚು ಕಟ್ಟಿಕೊಡುತ್ತಾರೆ. ಆದರೆ 'ಗರಡಿ' ಚಿತ್ರದಲ್ಲಿ ಮಾಸ್ ಕತೆ ಹೇಳಿದ್ದಾರೆ. ಅದರೊಳಗೊಂದು ಪ್ರೇಮಕತೆಯೂ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ರಟೆ ಗರಡಿ ಬಹಳ ಜನಪ್ರಿಯವಾಗಿರುತ್ತದೆ. ಅಲ್ಲಿ ನೂರಾರು ಪೈಲ್ವಾನರು ತಾಲೀಮು ನಡೆಸುತ್ತಿರುತ್ತಾರೆ. ಗರಡಿ ಮನೆಯ ಮುಖ್ಯಸ್ಥ ರಂಗಪ್ಪನ ಪಾತ್ರದಲ್ಲಿ ಬಿ. ಸಿ ಪಾಟೀಲ್ ನಟಿಸಿದ್ದಾರೆ.
'ಗರಡಿ' ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಆರ್ಮುಗ ರವಿಶಂಕರ್ ನಟಿಸಿದ್ದಾರೆ. ಒಂದರ್ಥದಲ್ಲಿ ಅವರದ್ದು ಖಳನಾಯಕ ಪಾತ್ರ. ಚಿತ್ರದಲ್ಲಿ ರಂಗಪ್ಪ ಹಾಗೂ ಸೂರಿ ಗುರು ಶಿಷ್ಯರಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಶಿಷ್ಯ ಗುರುವಿನಿಂದ ಕುಸ್ತಿ ಕಲಿಯಲು ವಂಚಿತನಾಗುತ್ತಾನೆ. ಗುರುವಿನ ವೈರತ್ವವನ್ನೇ ಕಟ್ಟಿಕೊಳ್ಳುವ ಹಂತಕ್ಕೆ ಹೋಗುತ್ತದೆ. ಇನ್ನು ವಿಲನ್ ಚಿಕ್ಕರಾಣೆ ನಾಯಕ ಸೂರಿಯನ್ನು ಹೇಗೆಲ್ಲಾ ಗೋಳು ಹೊಯ್ದುಕೊಳ್ಳುತ್ತಾನೆ? ಅಷ್ಟಕ್ಕೂ ರಂಗಪ್ಪ- ಸೂರಿ ನಡುವೆ ಬಿರುಕು ಮೂಡಲು ಕಾರಣ ಏನು? ನಾಯಕಿ ಸುಕನ್ಯಾ ಜೊತೆ ಸೂರಿಗೆ ಲವ್ ಆಗುವುದು ಹೇಗೆ? ಸೂರಿ ಅಣ್ಣ ಆಪತ್ಬಾಂದವನಾಗಿ ಬರೋದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.
ಹೆಸರಿಗೆ ತಕ್ಕಂತೆ 'ಗರಡಿ' ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಅನ್ನೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಯಶಸ್ ಸೂರ್ಯ ಈ ಸಿನಿಮಾ ಮೂಲಕ ಸೂರ್ಯ ಹೆಸರಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಯಕ ಅಣ್ಣನ ಪಾತ್ರದಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. ಸಹೋದರ ಸಂಕಷ್ಟಕ್ಕೆ ಸಿಲುಕಿದ್ದಾಗ ಸಹಾಯಕ್ಕೆ ಬರುವ ಅಣ್ಣನ ಪಾತ್ರ ಮಾಡಿರೋದು ಗೊತ್ತಾಗುತ್ತಿದೆ. "ಬಡವಂಗ್ನೆ ಯಾವನೂ ನ್ಯಾಯ ಕೊಡಲ್ಲ ತಮ್ಮಾ. ಅದನ್ನು ಕಿತ್ಕೋಬೇಕು ಕೈಚಾಚಿ. ಕಿತ್ಕೊ ಹೇಳ್ತೀನಿ" ಎನ್ನುವ ದರ್ಶನ್ ಡೈಲಾಗ್ ಟ್ರೈಲರ್‌ನಲ್ಲಿ ಹೈಲೆಟ್ ಆಗಿದೆ.

'ಕಾಣದಂತೆ ಮಾಯವಾದನು' ಚಿತ್ರದ ನಾಯಕ ವಿಕಾಸ್, ಭಟ್ರ ಜೊತೆ ಸೇರಿ 'ಗರಡಿ' ಚಿತ್ರಕ್ಕೆ ಕತೆ ಬರೆದಿದ್ದಾರೆ. 12 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಬಾದಾಮಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಗರಡಿ' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಹೊಸ ಪ್ರತಿಭೆಗಳನ್ನು ಸದಾ ಪ್ರೋತ್ಸಾಹಿಸುವ ನಟ ದರ್ಶನ್ ಈ ಚಿತ್ರದಲ್ಲಿ ಸೂರ್ಯ ಬೆಂಬಲಕ್ಕೆ ನಿಂತಿದ್ದಾರೆ.
ಸೂರ್ಯಗಾಗಿಯೇ ದರ್ಶನ್ 'ಗರಡಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಇನ್ನು ಚಿತ್ರದ ಸ್ಪೆಷಲ್ ಸಾಂಗ್‌ಗೆ ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿದ್ದಾರೆ. ಸೊಲ್ಲಾಪುರ, ರಾಣೆಬೆನ್ನೂರು ಪೈಲ್ವಾನರು ಸೇರಿದಂತೆ ಒರಿಜಿನಲ್ ಪೈಲ್ವಾನರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿಕ್ಕಜಾಲದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕುಸ್ತಿ ಅಖಾಡ ಸೆಟ್ ಹಾಕಿ ಚಿತ್ರದ ಮುಖ್ಯ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.
ಚಿತ್ರದ ನಾಯಕ ಹಾಗೂ ಖಳನಾಯಕ ಸೇರಿದಂತೆ ಹಲವರಿಗೆ ಮೈಸೂರಿನ ದೇಸಿ ಗೌಡ್ರು ಕುಸ್ತಿ ಪಟ್ಟುಗಳನ್ನು ಕಲಿಸಿದ್ದಾರೆ. ಒಂದು ತಿಂಗಳ ಕಾಲ ಕುಸ್ತಿ ಕಲಿತು ಎಲ್ಲರೂ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ನಾಯಯಕ ಸೂರಿ ಕೂಡ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾನೆ.


Click it and Unblock the Notifications











