»   » ಕನ್ನಡದ ಹುಡುಗಿಯರು ಆಚೆ ಈಚೆ ಓಡಿಹೋಗುತ್ತಾರೆ ಅಂತ ಎಲ್ಲ ಬೈತಾರೆ.

ಕನ್ನಡದ ಹುಡುಗಿಯರು ಆಚೆ ಈಚೆ ಓಡಿಹೋಗುತ್ತಾರೆ ಅಂತ ಎಲ್ಲ ಬೈತಾರೆ.

Posted By: Staff
Subscribe to Filmibeat Kannada

ಅಮ್ಮೋರು ಚಿತ್ರ ಬಿಡುಗಡೆಯಾದ ಬಳಿಕ ತೆಲುಗು ಚಿತ್ರರಸಿಕರ ಪಾಲಿಗೆ ದೇವತೆಯಾಗಿ ಹೋಗಿರುವ ಸೌಂದರ್ಯ ಕನ್ನಡದ ಕುವರಿ. ಹನುಮಂತನಗರದ ಹುಡುಗಿ ಸೈಬರಾಬಾದ್‌ ಬೆಡಗಿ ಎಂಬ ಶೀರ್ಷಿಕೆಯಡಿ ಸ್ಯಾಂಡಲ್‌ವುಡ್‌ನಲ್ಲಿ ಪ್ರಕಟವಾದ ಸುದ್ದಿ ಓದಿದ್ದವರಿಗೆ ಇದು ಚೆನ್ನಾಗಿ ನೆನಪಿದ್ದೀತು.

ಸೌಂದರ್ಯ ಆಗಾಗ್ಗೆ ಕನ್ನಡ ಚಿತ್ರಗಳಲ್ಲಿ ನಟಿಸುವ ತಮ್ಮ ಒಲವನ್ನು ಪ್ರಕಟಿಸುತ್ತಲೇ ಇದ್ದರು. ಅವರು ಕನ್ನಡ ಚಿತ್ರ ಒಂದರ ನಿರ್ಮಾಣಕ್ಕೆ ಕೈಹಾಕಿದ್ದಾರೆ ಎಂಬ ವಿಷಯವನ್ನೂ ನಾವು ನಿಮಗೆ ತಿಳಿಸಿದ್ದೆವು. ತಾಯಿ ಸಾಹೇಬ ಚಿತ್ರ ನಿರ್ಮಿಸಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಜಯಮಾಲಾರಂತೆ ತಾವೂ ಕೂಡ ಒಂದು ಕಲಾ-ತ್ಮ-ಕ - ಪ್ರಯೋ-ಗಾ-ತ್ಮ-ಕ ಚಿತ್ರ ನಿರ್ಮಿಸಿ, ಪ್ರಶಸ್ತಿ ಗಳಿಸಿ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಬೇಕೆಂದು ಸೌಂದರ್ಯ ಬಯಕೆಯಾಗಿದೆ.

ಇದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಆದರೂ ಸೌಂದರ್ಯ ತಾವು ಪ್ರಶಸ್ತಿಯ ಆಸೆಗಾಗಿ ಚಿತ್ರ ನಿರ್ಮಾಣಕ್ಕೆ ಕೈಹಾಕಿಲ್ಲ ಎಂದು ಈಗ ಕ್ಲಾರಿಫಿಕೇಷನ್‌ ಕೊಟ್ಟಿದ್ದಾರೆ. ಅವರು ಈ ರೀತಿ ಕ್ಲಾರಿಫಿಕೇಷನ್‌ ಕೊಡಲು ಕಾರಣ ಇಲ್ಲದಿಲ್ಲ. ಸೌಂದರ್ಯ ಕನ್ನಡ ಚಿತ್ರ ನಿರ್ಮಾಣಕ್ಕೆ ಅದೂ ಗಿರೀಶ್‌ ಕಾಸರವಳ್ಳಿ ದಿಗ್ದರ್ಶನದಲ್ಲಿ ಕಲಾತ್ಮಕ ಚಿತ್ರ ನಿರ್ಮಿಸುತ್ತಾರೆಂದಾಗ ಅದು ರಾಷ್ಟ್ರಪ್ರಶಸ್ತಿಗಾಗೇ ಎಂದು ಹೇಳದೆ ವಿಧಿ ಇರಲಿಲ್ಲ.

ಸ್ವತಃ ಗಿರೀಶ್‌ ಕಾಸರವಳ್ಳಿ ಅವರೇ ಸೌಂದರ್ಯರಿಗೆ ಈ ಪ್ರಶ್ನೆ ಹಾಕಿದರಂತೆ. ಪ್ರಶಸ್ತಿಯ ಬೆನ್ನೇರಿ ನೀವು ಚಿತ್ರ ನಿರ್ಮಿಸಲು ನನ್ನನ್ನು ಅರಸಿ ಬಂದಿದ್ದರೆ, ಆ ಯೋಚನೆ ಬಿಟ್ಟು ಬಿಡಿ ಎಂದರಂತೆ. ಇಲ್ಲ ಇಲ್ಲ.. ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸುವುದು ನನ್ನ ಬಹುದಿನದ ಬಯಕೆ. ಹಣ ಅಥವಾ ಪ್ರಶಸ್ತಿಗಾಗಿ ಚಿತ್ರ ಮಾಡುವುದಾದರೆ ನನಗೆ ತೆಲುಗಿನಲ್ಲೇ ಸಾಕಷ್ಟು ಅವಕಾಶ ಇದೆ. ಆದರೆ ಈ ನೆಲದ ಅಭಿಮಾನದಿಂದ ನಾನು ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದೇನೆಂದು ಸೌಂದರ್ಯ ಕೊಟ್ಟ ಉತ್ತರ ಗಿರೀಶರ ಹೃದಯವನ್ನೂ ಕಲಕಿತಂತೆ. ಅವರೂ ಸೌಂದರ್ಯರ ನಿರ್ಮಾಪಕತ್ವದ ಈ ಚಿತ್ರಕ್ಕೆ ತಮ್ಮ ದಿಗ್ದರ್ಶನ ನೀಡಲು ಒಪ್ಪಿಯೇ ಬಿಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಮಟ್ಟಿಗಂತೂ ಇದು ಸ್ವಾಗತಾರ್ಹ ಬೆಳವಣಿಗೆಯೇ. ಎಲ್ಲರೂ ಮಸಾಲೆ ಚಿತ್ರ ನಿರ್ಮಿಸಿ ತಮ್ಮ ಗಲ್ಲ ಪೆಟ್ಟಿಗೆ ತುಂಬಿಕೊಳ್ಳಲೇ ಹವಣಿಸುತ್ತಿರುವಾಗ, ತೆಲುಗು ಚಿತ್ರ ನಗರಿಯಲ್ಲಿ ಮಿಂಚುತ್ತಿರುವ ಪುಟ್ಟ ಹುಡುಗಿ ಕನ್ನಡದಲ್ಲಿ ಕಲಾತ್ಮಕ ಚಿತ್ರ ನಿರ್ಮಾಣಕ್ಕೆ ಕೈ ಹಾಕುತ್ತಿರುವುದು, ಸಾಧಾರಣ ಬೆಳವಣಿಗೆ ಏನಲ್ಲ. ಈಗ ಚಿತ್ರ ಸೆಟ್ಟೇರುವ ದಿನ ದೂರವೇನಿಲ್ಲ. ಗಿರೀಶರು ತಮ್ಮ ಚಿತ್ರಕ್ಕೆ ಸೂಕ್ತವಾದ ಚಿತ್ರೀಕರಣ ತಾಣಗಳನ್ನು ಗುರುತಿಸಿಯಾಗಿದೆ. ಹಣ ತೊಡಗಿಸಲು ಸೌಂದರ್ಯ ಸಿದ್ಧರಾಗಿದ್ದಾರೆ. ಗಿರೀಶರು ತಮ್ಮ ಕಲ್ಪನೆಯ ಪಾತ್ರಗಳಿಗೆ ಸೂಕ್ತವಾದ ಒಂದಿಬ್ಬರು ನಟ - ನಟಿಯರ ತಲಾಶ್‌ನಲ್ಲಿದ್ದಾರಂತೆ. ಇನ್ನೇನು... ಚಿತ್ರ ನಿರ್ಮಾಣ ಆರಂಭಿಸಿ, ಶೂಟಿಂಗ್‌ ಪೂರೈಸಿ ಕುಂಬಳಕಾಯಿ ಒಡೆಯುವುದೊಂದೆ ಬಾಕಿ (ಕುಂಬಳಕಾಯಿ ಒಡೆದರು ಅಂದರೆ ಒಂದು ಕನ್ನಡ ಚಿತ್ರದ ಶೂಟಿಂಗ್‌ ಪೂರ್ಣವಾಯಿತು ಎಂದರ್ಥ)

ಆಷಾಢ ಅಡ್ಡ ಬರದಿದ್ದಲ್ಲಿ ಬಹುಶಃ ಇಷ್ಟು ಹೊತ್ತಿಗೆ ಚಿತ್ರ ಸೆಟ್ಟೇರುತ್ತಿತ್ತೇನೋ. ಈಗ ಸೆಟ್ಟೇರುವ ದಿನ ದೂರವಿಲ್ಲ .ಆಷಾಢ ಮುಗಿದ ಕೂಡಲೇ ಚಿತ್ರ ಸೆಟ್ಟೇರಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಸೌಂದರ್ಯ ಏನಾದರೂ ಕ್ಲಾರಿಫಿಕೇಷನ್‌ ಕೊಟ್ಟಿರಲಿ. ಚಿತ್ರ ರಾಜ್ಯ - ರಾಷ್ಟ್ರ - ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯಲಿ ಎಂಬುದೇ ಕನ್ನಡಿಗರ ಹರಕೆ.

English summary
Soundarya to produce an art film in Kannada
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada