ಹೀರೋಗಳಿಗೆ ಸೆಡ್ಡು ಹೊಡೆದ ಖಳನಟ: ಸೌರವ್ ಲೋಕಿಯ ಸ್ಟೈಲಿಶ್ ಫೋಟೋಶೂಟ್
'ಭಜರಂಗಿ' ಸಿನಿಮಾ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಜಾಗ ಪಡೆದು ಪ್ರತಿಭಾನ್ವಿತ ನಟ ಸೌರವ್ ಲೋಕೇಶ್ (ಭಜರಂಗಿ ಲೋಕಿ) ಈಗ ಸ್ಟೈಲಿಶ್ ಫೋಟೋಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ.
ಈಗಿನ ಟ್ರೆಂಡ್ನಲ್ಲಿ ಹೀರೋ ಮತ್ತು ಹೀರೋಯಿನ್ ಗಳು ಫೋಟೋಶೂಟ್ ಮಾಡಿಸುವುದು ಸಹಜ. ಆದರೆ, ವಿಲನ್ ಪಾತ್ರದಲ್ಲಿ ಗುರುತಿಸಿಕೊಂಡಿರುವ ನಟ ಫೋಟೋಶೂಟ್ ಮೊರೆಹೋಗುವುದು ಅಪರೂಪ. ಸೌರವ್ ಲೋಕಿಯ ಈ ಭರ್ಜರಿ ಫೋಟೋಶೂಟ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಮುಂದೆ ಓದಿ....

ಹೀರೋ ಆಗಲು ಹೊರಟ್ರಾ ಖಡಕ್ ವಿಲನ್!
ಸೌರವ್ ಲೋಕೇಶ್ ಅವರ ಈ ಫೋಟೋಶೂಟ್ ನೋಡಿದ ಫಿಲ್ಮಿಬೀಟ್ ಕನ್ನಡಕ್ಕೆ ಕುತೂಹಲ ಹೆಚ್ಚಾಯಿತು. ಲೋಕಿ ಏನಾದರೂ ಹೀರೋ ಆಗಿ ನಟಿಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಬಗೆಹರಿಸಿಕೊಳ್ಳಲು ಸ್ವತಃ ಅವರನ್ನೇ ಸಂಪರ್ಕಿಸಿದೆವು. ಆಗಲೇ ಗೊತ್ತಾಗಿದ್ದು ಈ ಫೋಟೋಶೂಟ್ ಮಾಡಿದ್ದು ಹೀರೋ ಆಗೋದಕ್ಕೆ ಅಲ್ಲ, ವಿಲನ್ ಹವಾ ಹೆಚ್ಚಿಸಲು ಅಂತ.

ಟ್ರೆಂಡ್ ಹುಟ್ಟುಹಾಕಿದ ಲೋಕಿ
ವಿಲನ್ ಗಳು ಫೋಟೋಶೂಟ್ ಮಾಡಿಸುವುದು ಬೇರೆ ಇಂಡಸ್ಟ್ರಿಯಲ್ಲಿ ಕಾಣಬಹುದು. ಆದರೆ, ಈ ಟ್ರೆಂಡ್ ಕನ್ನಡದಲ್ಲಿ ಅಪರೂಪ. ಎಲ್ಲೋ ಒಬ್ಬೊಬ್ಬರು ಪ್ರಯತ್ನಿಸಿರಬಹುದು. ಇದೀಗ, ಸೌರವ್ ಲೋಕಿ ಇಂತಹ ಪ್ರಯತ್ನಕ್ಕೆ ಕೈಹಾಕಿ ಯಶಸ್ಸು ಕಂಡಿದ್ದಾರೆ. ಅದ್ಧೂರಿಯಾಗಿ ಫೋಟೋಶೂಟ್ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಬಾಲಿವುಡ್ ಫ್ಲೇವರ್ ಕಾಣ್ತಿದೆ
ಒಳ್ಳೆ ಹೈಟ್, ಒಳ್ಳೆ ಫಿಸಿಕ್ ಯಾವ ಹೀರೋಗೂ ಕಮ್ಮಿ ಇಲ್ಲ ಎಂಬ ಸ್ಟೈಲ್ ಹೊಂದಿರುವ ಲೋಕಿಯ ಈ ಫೋಟೋಶೂಟ್ ಸಖತ್ ಸದ್ದು ಮಾಡ್ತಿದೆ. ಬಾಲಿವುಡ್ ನಟ ಎನ್ನುವಷ್ಟು ಲುಕ್ ನಲ್ಲಿ ಮೇಕ್ ಓವರ್ ಕಾಣ್ತಿದೆ.

ಸ್ಟೈಲಿಶ್ ಡಿಸೈನರ್ ನಿರ್ದೇಶನ
ಕನ್ನಡದ ಡಿಸೈನರ್ ಪವಿತ್ರಾ ಗೌಡ ಅವರ ನಿರ್ದೇಶನದಲ್ಲಿ ಈ ಫೋಟೋಶೂಟ್ ಆಗಿದೆ. ಮೂರು ದಿನ ಸಮಯ ತೆಗೆದುಕೊಂಡು ಶೂಟ್ ಮಾಡಲಾಗಿದೆ. ನಾಲ್ಕು ವಿಭಿನ್ನ ಕಾಸ್ಟ್ಯೂಮ್ ಬಳಸಲಾಗಿದೆ. ಲೋಕಿಯ ಈ ಲುಕ್ ನೋಡ್ತಿದ್ರೆ ಮುಂದಿನ ದಿನಗಳಲ್ಲಿ ಸ್ಯಾಂಡಲ್ ವುಡ್ನಲ್ಲಿ ಮತ್ತಷ್ಟು ಚಿತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಮುಂದಿನ ಪ್ರಾಜೆಕ್ಟ್?
'ಕಾಣದಂತೆ ಮಾಯವಾದನು' ಚಿತ್ರದಲ್ಲಿ ಕೊನೆಯದಾಗಿ ಸೌರವ್ ಲೋಕಿ ಕಾಣಿಸಿಕೊಂಡಿದ್ದರು. 'ಟಕ್ಕರ್' ಸಿನಿಮಾದಲ್ಲೂ ನಟಿಸಿದ್ದು, ಆ ಚಿತ್ರ ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಇದಾದ ಬಳಿಕ ಕನ್ನಡದ ಮೆಗಾ ಪ್ರಾಜೆಕ್ಟ್ ವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಆ ಸಿನಿಮಾ ಯಾವುದು ಎಂದು ತಿಳಿಸಲಿದ್ದಾರಂತೆ.


Click it and Unblock the Notifications











