ಅವರಲ್ಲ.. ಇವರಲ್ಲ.. ಈ ಬಾಲಿವುಡ್ ಸ್ಟಾರ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಶ್ರೀಲೀಲಾ..!
ಈ ಬಣ್ಣದ ಲೋಕನೇ ಹಾಗೇ. ಇಲ್ಲಿ ದಿನಕ್ಕೊಂದು ಸುದ್ದಿ ಸತ್ಯ ಆದರೆ, ಮಿಕ್ಕ ತೊಂಬತ್ತೊಂಬತ್ತು ಸುದ್ದಿ ಸುಳ್ಳಾಗುತ್ತಾವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಶ್ರೀಲೀಲಾ ಕುರಿತು ಮತ್ತೊಂದು ವಿಚಾರ ಸದ್ಯ ಸದ್ದು ಮಾಡುತ್ತಿದೆ.
ಹೌದು, ಅಸಲಿಗೆ.. ರಶ್ಮಿಕಾ ಅವರಂತೆಯೇ ಸ್ಯಾಂಡಲ್‌ವುಡ್‌ನಿಂದ ಕಾಣೆಯಾದ ಶ್ರೀಲೀಲಾ, ಸದ್ಯ ಪಕ್ಕದ ಆಂಧ್ರದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇಂಥಾ ಶ್ರೀಲೀಲಾ, ಬಾಲಿವುಡ್‌ಗೆ ಕಾಲಿಡಲಿದ್ದಾರೆ ಅನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರ್ತಾನೆ ಇದೆ. ಕೆಲವರು ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅಭಿನಯದ ಚೊಚ್ಚಲ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಅಂದರೆ, ಇನ್ನೂ ಕೆಲವರು ವರುಣ್ ಧವನ್ ಗೆ ನಾಯಕಿಯಾಗುವ ಮೂಲಕ ಶ್ರೀಲೀಲಾ ಹಿಂದಿ ಉದ್ಯಮವನ್ನು ಪ್ರವೇಶ ಮಾಡಲಿದ್ದಾರೆ ಎಂದು ಹುಯಿಲೆಬ್ಬಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೂ ಅಧಿಕೃತವಾಗಿಲ್ಲ.

ಇದರ ನಡುವೆ ಈಗ ಶ್ರೀಲೀಲಾ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಅನ್ನುವ ಸುದ್ದಿ ಹೊರ ಬಿದ್ದಿದೆ. ಮುಂಬೈನಲ್ಲಿ ಈ ವಿಚಾರದ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಹೌದು, ಅಸಲಿಗೆ.. ಪಿಂಕ್ ವಿಲ್ಲಾ ವರದಿಯೊಂದನ್ನು ಪ್ರಕಟಿಸಿದೆ. ಆ ಪ್ರಕಾರ, ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಮುಂಬರುವ ಚಿತ್ರ ''ಮಿಟ್ಟಿ'' ಚಿತ್ರಕ್ಕೆ ಕಿಸ್ ಬೆಡಗಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ಶ್ರೀಲೀಲಾ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಎನ್ನುವುದನ್ನು ಹೇಳಿರುವ ಪಿಂಕ್ ವಿಲ್ಲಾ, ಈ ತರಹದ ಪಾತ್ರಕ್ಕೆ ಶ್ರೀಲೀಲಾ ಹಾತೊರೆಯುತ್ತಿದ್ದರು ಎಂದು ಕೂಡ ತನ್ನ ವರದಿಯಲ್ಲಿ ತಿಳಿಸಿದೆ. ಉಳಿದಂತೆ ಬಲ್ವಿಂದರ್ ಸಿಂಗ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದ್ದು, ಸಿದ್ಧಾರ್ಥ್ ಮತ್ತು ಶ್ರೀಲೀಲಾ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನುವುದು ಸದ್ಯದ ಸುದ್ದಿ.

ಅಂದ್ಹಾಗೇ ಕಿಯಾರಾ ಅಡ್ವಾಣಿಯ ಗಂಡನಾಗಿರುವ ಸಿದ್ಧಾರ್ಥ್ ಮಲ್ಹೋತ್ರಾಗೆ ಇತ್ತೀಚಿನ ದಿನಗಳಲ್ಲಿ ಗೆಲುವು ಮರಿಚೀಕೆಯಾಗಿದೆ. ಈ ಹಿಂದೆ ಇವರು ಅಭಿನಯಿಸಿದ್ದ 'ಯೋಧ' ತೆರೆಗೆ ಬಂದಿದ್ದು ಹೋಗಿದ್ದು ಗೊತ್ತಾಗಲಿಲ್ಲ. ಇನ್ನೂ ಅದಕ್ಕೂ ಮುನ್ನ ಓಟಿಟಿಯಲ್ಲಿ ತೆರೆಗೆ ಬಂದ 'ಮಿಷನ್ ಮಜ್ನು' ಚಿತ್ರವನ್ನು ನೋಡಿದವರೆಷ್ಟು, ಬಿಟ್ಟವರೆಷ್ಟು ಎಂಬ ಲೆಕ್ಕ ಇಲ್ಲ. ಆದರೆ. ಕನ್ನಡದಿಂದನೇ ಈ ಹಿಂದೆ ವಲಸೆ ಹೋದ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಸಿದ್ಧಾರ್ಥ್ ಎದುರು ನಾಯಕಿಯಾಗಿದ್ದರು. ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. ಹೀಗಾಗಿ ಸಿದ್ಧಾರ್ಥ್ ಮಲ್ಹೋತ್ರಾ 'ಮಿಟ್ಟಿ' ಚಿತ್ರದ ಮೂಲಕ ಎರಡನೇ ಬಾರಿ ಕನ್ನಡದ ನಾಯಕಿಯ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದರೆ ಅದು ತಪ್ಪಾಗಲಿಕ್ಕಿಲ್ಲ.
ಉಳಿದಂತೆ ಈ ಅಕ್ಟೋಬರ್‌ನಿಂದ ಶ್ರೀಲೀಲಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಈ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಗಳಿವೆ. ಚಿತ್ರದಲ್ಲಿನ ಉಳಿದ ತಾರಾಬಳಗದ ವಿವರ ಸದ್ಯದಲ್ಲಿಯೇ ಹೊರ ಬೀಳುವ ನಿರೀಕ್ಷೆ ಇದೆ.


Click it and Unblock the Notifications











