Spandana Death: ಸ್ಪಂದನಾ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
ವಿದೇಶಕ್ಕೆ ಪ್ರವಾಸ ತೆರಳಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಸ್ಪಂದನಾ ವಿಜಯ ರಾಘವೇಂದ್ರ ಅವರ ಅಂತ್ಯಕ್ರಿಯೆ ಬುಧವಾರ (ಆಗಸ್ಟ್ 9) ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ನಡೆಯಲಿದೆ. ಮಲ್ಲೇಶ್ವರಂನಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಚಿತ್ರರಂಗದ ತಾರೆಯರು, ರಾಜಕೀಯ ನಾಯಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಕೂಡ ಸ್ಪಂದನಾ ವಿಜಯ ರಾಘವೇಂದ್ರ ಅವರ ಅಂತಿಮ ದರ್ಶನ ಪಡೆದಿದ್ದು, ನಟ ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಅಂತಿಮ ದರ್ಶನದ ಸ್ಥಳಕ್ಕೆ ಬಂದು ಸ್ಪಂದನಾ ಅವರನ್ನೇ ದಿಟ್ಟಿಸಿ ನೋಡಿ ನಮಸ್ಕರಿಸಿದ್ದಾರೆ. ಬಳಿಕ ಕಾಂಗ್ರೆಸ್ ನಾಯಕರಾದ ಬಿಕೆ ಹರಿಪ್ರಸಾದ್, ರಕ್ಷಿತ್ ಶಿವರಾಂ ಮತ್ತು ಸ್ಪಂದನಾ ಅವರ ತಂದೆ ಬಿಕೆ ಶಿವರಾಂ ಜೊತೆಗೆ ಮಾತನಾಡಿದ್ದಾರೆ. ನಟ ವಿಜಯ ರಾಘವೇಂದ್ರಗೆ ಸಾಂತ್ವನ ಹೇಳಿ ಜೊತೆಗೆ ಕೆಲ ನಿಮಿಷಗಳು ಮಾತನಾಡಿದ ಸಿದ್ದರಾಮಯ್ಯ ಹಲವು ಮಾಹಿತಿ ಪಡೆಯುತ್ತಿರುವ ರೀತಿ ಕಾಣಿಸುತ್ತಿತ್ತು.
ಸಿದ್ದರಾಮಯ್ಯ ಹೇಳಿದ್ದೇನು...?
ಅಂತಿಮ ದರ್ಶನ ಪಡೆದು ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಬಹಳ ವರ್ಷ ಬದುಕಿ ಬಾಳಬೇಕಾಗಿದ್ದವರು... ಮೂವತ್ತೇಳು ವರ್ಷ ವಯಸ್ಸು ಅಷ್ಟೇ.. ಅವರ ಪತಿ ಒಬ್ಬ ಖ್ಯಾತ ಸಿನಿಮಾ ನಟರು. ಅವರೂ ಅಪೂರ್ವ ಅನ್ನೋ ಸಿನಿಮಾದಲ್ಲಿ ಮಾಡಿದ್ದರು. ಹದಿನಲ್ಕು ವರ್ಷ ಮಗನಿದ್ದಾನೆ. ಜೀವನದಲ್ಲಿ ಬೇಕಾದಷ್ಟು ನೋಡಬೇಕಾಗಿದ್ದವರು... ಸಾಂಸಾರಿಕ ಜೀವನ ನಡೆಸಬೇಕಿದ್ದವರು... ಇವರದ್ದು ಬಹಳ ಸುಂದರವಾದ ಕುಟುಂಬ .. ತುಂಬ ಆನಂದದಿಂದ ಇದ್ದರು. ಥೈಲಾಂಡ್‌ಗೆ ಹೋಗಿ ಅಲ್ಲಿ ಮೃತಪಟ್ಟಿರುವುದು ದುರಂತ. ಇಷ್ಟು ಬೇಗ ಅಗಲಿರುವುದು ಯಾರೂ ಊಹಿಸಿರಲಿಲ್ಲ. ಇದು ಶಿವರಾಂ, ವಿಜಯ ರಾಘವೇಂದ್ರ ಕುಟುಂಬಕ್ಕೆ ದೊಡ್ಡ ಲಾಸ್. ದೇವರು ಅವರ ಸಂಬಂಧಿಕರಿಗೆ.. ಹಿತೈಷಿಗಳಿಗೆ ದುಃಖ ಬರಿಸುವ ಶಕ್ತಿ ನೀಡಲಿ" ಎಂದಿದ್ದಾರೆ.

ಡಿಕೆ ಶಿವಕುಮಾರ್ ಹೇಳಿದ್ದೇನು?
ಇನ್ನು, ಸ್ಪಂದನಾ ಅಂತಿಮ ದರ್ಶನ ಪಡೆದು ಮಾತನಾಡಿದ ಡಿಕೆ ಶಿವಕುಮಾರ್, "ಸ್ಪಂದನಾ ಅವರ ಹಠಾತ್ ಮರಣ ನಮಗೆಲ್ಲ ದಿಗ್ಭದ್ರಮೆ ಉಮಟುಮಾಡಿದೆ. ಒಂದು ವಾರದ ಹಿಂದೆ ದಂಪತಿ ನನ್ನ ಭೇಟಿ ಮಾಡಿದ್ದರು. ಪ್ರಶಸ್ತಿ ಬಂದ ವಿಷಯದಲ್ಲಿ... ಅವರಿಗೆ ಇನ್ನು ಸೈಟ್ ಸಿಕ್ಕಿಲ್ಲ ಎನ್ನುವ ವಿಷಯದಲ್ಲಿ ಮತ್ತು ನನಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು.
ಸುಮಾರು ಅರ್ಧ ಗಂಟೆ ನನ್ನ ಜೊತೆ ಮಾತನಾಡಿದರು. ತುಂಬಾ ಆರೋಗ್ಯವಾಗಿದ್ದರು. ಈ ರೀತಿ ಹಠಾತ್ ಸಾವು ದಿಗ್ಭ್ರಮೆ ಉಂಟು ಮಾಡಿದೆ. ಇಡೀ ಕುಟುಂಬಕ್ಕೆ, ದಂಪತಿಗೆ ಯಾವ ರೀತಿಯ ಅಭಿಮಾನವಿತ್ತು ಎಂಬುದಕ್ಕೆ ಈ ಜನಸಾಗರ ಸಾಕ್ಷಿಯಾಗಿದೆ" ಎಂದಿದ್ದಾರೆ.

"ಭಗವಂತನ ಲೀಲೆಯನ್ನು ನಾವು ಪ್ರಶ್ನೆ ಮಾಡೋಕೆ ಆಗಲ್ಲ. ಮನುಷ್ಯನ ಹುಟ್ಟು ಸಾವಿನ ಬಗ್ಗೆ ಪ್ರಶ್ನೆ ಮಾಡಲು ಆಗುವುದಿಲ್ಲ. ಆದರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಾರಿಗೂ ಇಂತಹದ್ದು ಆಗಬಾರದು. ತುಂಬಾ ಕನಸನ್ನು ಕಟ್ಟಿಕೊಂಡಿರುತ್ತಾರೆ. ಬದುಕಿನಲ್ಲಿ ಶ್ರಮ ಪಟ್ಟಿರುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂಬುದಕ್ಕೆ ಎಲ್ಲರಿಗೂ ಇದು ಎಚ್ಚರಿಕೆಯ ಗಂಟೆ.
ಅವರ ಕುಟುಂಬಕ್ಕೆ ವಿಶೇಷವಾಗಿ ಅವರ ಪತಿಗೆ , ಬಂಧುಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ. ನಾವು ವೈಯಕ್ತಿಕವಾಗಿ ಮತ್ತು ಸರ್ಕಾರದ ಪರವಾಗಿ ಅವರ ದುಃಖದಲ್ಲಿ ಭಾಗಿಯಾಗಿದ್ದೇವೆ. ಅವರ ಚಿಕ್ಕಪ್ಪ ಬಿಕೆ ಹರಿಪ್ರಸಾದ್, ಅವರ ತಂದೆ, ಅವರ ಸಹೋದರ ಎಲ್ಲರೂ ನನಗೆ ಆತ್ಮೀಯರು. ಆ ಹೆಣ್ಣು ಮಗು ಕೂಡ ನನಗೆ ಚಿಕ್ಕ ವಯಸ್ಸಿನಿಂದ ಪರಿಚಯ" ಎಂದು ಭಾವುಕರಾಗಿದ್ದಾರೆ.


Click it and Unblock the Notifications











