Spandana Death: ಸ್ಪಂದನಾ ವಿಜಯರಾಘವೇಂದ್ರ ನಿಧನಕ್ಕೆ ಸಂತಾಪ ಸೂಚಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್. 07: ಚಂದನವನದ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮೂರು ದಿನಗಳ ಹಿಂದೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದು, ಕಳೆದ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಾಗಿ ನಿಧನರಾಗಿದ್ದಾರೆ. ಸ್ಪಂದನಾ ಅವರ ನಿಧನಕ್ಕೆ ಕುಟುಂಬ ವರ್ಗದ ಜೊತೆಗೆ ಇಡೀ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಂಪಾಪ ಸೂಚಿಸಿದ್ದಾರೆ.

"ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಟ್ವೀಟ್ ಮಾಡಿದೆ.
ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸ್ಪಂದನಾ ಅವರ ಸಾವಿಗೆ ಸಂತಾಪ ಸೂಚಿಸಿ, "ಕನ್ನಡದ ಖ್ಯಾತ ನಟ ಶ್ರೀ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಶ್ರೀಮತಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್ ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು. ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು" ಎಂದಿದ್ದಾರೆ.
ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸ್ಪಂದನಾ ಅವರ ಕುಟುಂಬದ ಶೋಕದಲ್ಲಿ ತಾನು ಭಾಗಿ ಎಂದಿದ್ದಾರೆ. "ನಟ ವಿಜಯ ರಾಘವೇಂದ್ರರವರ ಧರ್ಮಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅತಿ ಸಣ್ಣ ವಯಸ್ಸಿಗೆ ಆಗುವ ಹೃದಯಾಘಾತದ ದುರ್ಘಟನೆಗಳು ನನ್ನ ಮನಸ್ಸನ್ನು ವಿಚಲಿತಗೊಳಿಸಿವೆ. ಸ್ಪಂದನಾರವರ ಸಾವು ಅನಿರೀಕ್ಷಿತ. ವಿಜಯ್ ರಾಘವೇಂದ್ರ ಕುಟುಂಬದ ಶೋಕದಲ್ಲಿ ನಾನೂ ಭಾಗಿ." ಎಂದು ನೋವು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರನಟ ವಿಜಯ ರಾಘವೇಂದ್ರ ಅವರ ಪತ್ನಿ ಶ್ರೀಮತಿ ಸ್ಪಂದನಾ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಮೃತರ ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ" ಎಂದು ಪ್ರಾರ್ಥಿಸುವುದಾಗಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, "ಕನ್ನಡದ ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ.ನಟ ವಿಜಯ ರಾಘವೇಂದ್ರ ಹಾಗೂ ಬಿ.ಕೆ. ಶಿವರಾಮ್ ಕುಟುಂಬಕ್ಕೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ" ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
"ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಬ್ಯಾಂಕಾಕ್ ಪ್ರವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ. ಅವರ ನಿಧನ ಎಲ್ಲರಿಗೂ ಆಘಾತ ತಂದಿದೆ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯವಾಗಿ ಇದ್ದೋರು ಇಂತಹ ಸಾವು ಆಗಿರೋದು ಯಾರು ನಿರೀಕ್ಷೆ ಮಾಡಿರಲಿಲ್ಲ. ಅವರ ಕುಟುಂಬದರು ನಿರೀಕ್ಷೆ ಮಾಡಿರಲಿಲ್ಲ. ಇದೊಂದ ಆಘಾತಕಾರಿ ಘಟನೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ ನಂತರ ಇಂತಹ ಘಟನೆಗಳು ಅಚ್ಚರಿ ರೂಪದಲ್ಲಿ ಹೆಚ್ಚಾತ್ತಿವೆ" ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಸ್ಪಂದನಾ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಸಹೋದರ ರಕ್ಷಿತ್ ಶಿವರಾಂ ಬ್ಯಾಂಕಾಕ್‌ಗೆ ತೆರಳಿದ್ದಾರೆ. ವಿಜಯ ರಾಘವೇಂದ್ರ ಸಹೋದರ ನಟ ಶ್ರೀಮುರುಳಿ, ರಾಜ್ ಕುಟುಂಬದ ರಾಘವೇಂದ್ರ ರಾಜ್‌ಕುಮಾರ್ ಬ್ಯಾಂಕಾಕ್ ಕಡೆ ಪ್ರಯಾಣ ಬೆಳಸಿದ್ದಾರೆ. ನಾಳೆ (ಮಂಗಳವಾರ) ಬೆಂಗಳೂರಿಗೆ ಸ್ಪಂದನಾ ಅವರ ಪಾರ್ಥಿವ ಶರೀರ ತರುವ ಸಾಧ್ಯತೆಯಿದೆ.


Click it and Unblock the Notifications











