Spandana Vijay: 'ನಾನೆಂದೂ ನಿನ್ನವ.. ಕೇವಲ ನಿನ್ನವ..'; ಪತ್ನಿಗೆ ವಿಶೇಷ ವಿಡಿಯೊ ಮೂಲಕ ರಾಘು ಸಂದೇಶ
ಚಂದನವನದ ಚಿನ್ನಾರಿಮುತ್ತ ಎಂದೇ ಖ್ಯಾತಿಯನ್ನು ಪಡೆದಿರುವ ವಿಜಯ್ ರಾಘವೇಂದ್ರ ಪತ್ನಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಸ್ಪಂದನಾ ಅವರು ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಇದು ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಕುಟುಂಬ ಹಾಗೂ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು.
ತನ್ನ ಪತಿ ವಿಜಯ್ ರಾಘವೇಂದ್ರ ಜತೆ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದ ಸ್ಪಂದನಾ ವಿಜಯ್ ರಾಘವೇಂದ್ರ ಪ್ರವಾಸವನ್ನು ಸಂಪೂರ್ಣವಾಗಿ ಮುಗಿಸಿ ಭಾರತಕ್ಕೆ ಹಿಂದಿರುಗಲು ಇನ್ನು ಕೇವಲ ಎರಡು ದಿನಗಳು ಬಾಕಿ ಇದೆ ಎನ್ನುವಾಗ ಆಗಸ್ಟ್ 6ರಂದು ಅಸು ನೀಗಿದರು. ಸ್ಪಂದನಾ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ.

ಸ್ಪಂದನಾ ಅಗಲಿ ಆಗಸ್ಟ್ 16ಕ್ಕೆ 11 ದಿನಗಳು ಕಳೆದಿದ್ದವು. ಹೀಗಾಗಿ ಸ್ಪಂದನಾ ಕುಟುಂಬ ಉತ್ತರಕ್ರಿಯೆ ಕಾರ್ಯವನ್ನು ಮಾಡಿತ್ತು ಹಾಗೂ ಶಾಂತಿ ಹೋಮವನ್ನು ನಡೆಸಲಾಗಿತ್ತು. ಬಳಿಕ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಮತ್ತೆ ಪೂಜೆಯನ್ನು ಸಲ್ಲಿಸಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಹೀಗೆ ಪತ್ನಿಯ ಉತ್ತರ ಕ್ರಿಯೆ ಕಾರ್ಯಗಳನ್ನೆಲ್ಲಾ ಮುಗಿಸಿದ ನಂತರ ವಿಜಯ್ ರಾಘವೇಂದ್ರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿಗಾಗಿ ಇಂದು ( ಆಗಸ್ಟ್ 18 ) ಪತ್ನಿ ಸ್ಪಂದನಾ ಅವರನ್ನು ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಪತ್ನಿಯ ಕುರಿತು ತಮ್ಮ ಮನದಲ್ಲಿರುವ ಸಾಲುಗಳಿಗೆ ತಮ್ಮದೇ ದನಿಯನ್ನು ನೀಡಿ ವಿಡಿಯೋವನ್ನು ಮಾಡಿರುವ ವಿಜಯ್ ರಾಘವೇಂದ್ರ ಪತ್ನಿ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ವಿಜಯ್ ರಾಘವೇಂದ್ರ ಹಂಚಿಕೊಂಡಿರುವ ವಿಡಿಯೊದಲ್ಲಿ "ಸ್ಪಂದನಾ.. ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ, ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದೆ ನಿನ್ನ ಹೃದಯವ, ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ, ಕೇವಲ ನಿನ್ನವ, ಚಿನ್ನ" ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಾನು ಎಂದೆಂದಿಗೂ ನಿನ್ನವ ಎಂದು ಸ್ಪಂದನಾಗೆ ವಿಜಯ್ ರಾಘವೇಂದ್ರ ಸಂದೇಶ ರವಾನಿಸಿದ್ದಾರೆ.


Click it and Unblock the Notifications











