ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಕುರಿತು ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದ ಪುತ್ರ ಚರಣ್
ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಎಸ್ ಪಿ ಬಿ ಕೊರೊನಾ ವರದಿ ಬಗ್ಗೆ ಹರಿದಾಡುತ್ತಿರುವ ವದಂತಿಗೆ ಪುತ್ರ ಎಸ್ ಪಿ ಬಿ ಚರಣ್ ಸ್ಪಷ್ಟನೆ ನೀಡಿದ್ದಾರೆ. ತಂದೆಯ ಆರೋಗ್ಯದ ಬಗ್ಗೆ ಪ್ರತೀ ದಿನ ವೈದ್ಯರ ಜೊತೆ ಮಾತನಾಡಿ, ಸಂಜೆ ಮಾಹಿತಿ ನೀಡುತ್ತಿದ್ದ ಎಸ್ ಪಿ ಬಿ ಚರಣ್ ಇಂದು ಬೆಳಗ್ಗೆಯೇ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
Recommended Video
"ನಾನು ಆಸ್ಪತ್ರೆಯ ವೈದ್ಯರ ಜೊತೆ ಮಾತನಾಡಿದ ಬಳಿಕ ಅಪ್ಪನ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಆದರೀಗ ಬೆಳಗ್ಗೆ ಮಾಹಿತಿ ನೀಡುತ್ತಿದ್ದೇನೆ. ಅಪ್ಪನ ಆರೋಗ್ಯದ ಬಗ್ಗೆ ನಾನು ಮಾತ್ರ ಮಾಹಿತಿ ನೀಡುತ್ತೇನೆ. ಎಲ್ಲಾ ಮಾಹಿತಿ ಮೊದಲು ನನಗೆ ಮಾತ್ರ ತಿಳಿಯುತ್ತೆ. ಅಪ್ಪನ ಕೊರೊನಾ ವರದಿ ನೆಗೆಟಿವ್ ಬಂದಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಆದರೆ ಕೊರೊನಾ ನೆಗೆಟಿವ್ ಬಂದಿದೆ ಅಥವಾ ಪಾಸಿಟಿವ್ ಬಂದಿದೆ ಎನ್ನುವುದಕ್ಕಿಂತ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ದಯವಿಟ್ಟು ವದಂತಿ ಹಬ್ಬಿಸಬೇಡಿ" ಎಂದು ವಿಡಿಯೋ ಮೂಲಕ ತಂದೆಯ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದಿದ್ದಾರೆ.
ಎಸ್ ಪಿ ಬಿಗೆ ಕೊರೊನಾ ನೆಗೆಟಿವ್ ಬಂದಿದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಮತ್ತು ಆಪ್ತರಲ್ಲಿ ಹೊಸ ಚೈತನ್ಯ ಮೂಡಿತ್ತು. ಆದರೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಕೊರೊನಾ ನೆಗೆಟಿವ್ ವರದಿ ವದಂತಿ ಎಂದು ಕೇಳಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಎಸ್ ಪಿ ಬಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಆರೋಗ್ಯ ಸ್ಥಿತಿ ಗಂಭೀರವಾದ ಪರಿಣಾಮ ಅವರನ್ನು ತೀವ್ರ ನಿಗಾಘಟಕಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದರು. ಕಳೆದ 10 ದಿಂಗಳಿಂದ ಎಸ್ ಪಿ ಬಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಸುದ್ದಿ ಅಭಿಮಾನಿಗಳಿಗೆ, ಆಪ್ತರಿಗೆ ತೀರಾ ಆತಂಕವುಂಟು ಮಾಡಿದೆ.
ಎಸ್ ಪಿ ಬಿ ವೆಂಟಿಲೇಟರ್ ಮೂಲಕವೇ ಉಸಿರಾಡುತ್ತಿದ್ದಾರೆ. ಎಂಜಿಎಂ ಆಸ್ಪತ್ರೆಯ ವೈದ್ಯರತಂಡ ಅಂತರಾಷ್ಟ್ರೀಯ ವೈದ್ಯಕೀಯ ತಜ್ಞರ ಸಲಹೆ ಪಡೆದುಕೊಂಡು ಸ್ವರ ಸಾಮ್ರಾಟನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಲೆಜೆಂಡರಿ ಗಾಯಕ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಇಡೀ ದೇಶವೆ ಪ್ರಾರ್ಥನೆ ಮಾಡುತ್ತಿದೆ.


Click it and Unblock the Notifications











